ಅಖಿಲ ಭಾರತ ವೀರಶೈವ ಮಹಾಸಭೆ ಸ್ವಾತಂತ್ರ್ಯ ಪೂರ್ವದಿಂದಲೂ ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಎಲ್ಲಾ ಪೂಜ್ಯರು ಮತ್ತು ರಾಜಕೀಯ ನಾಯಕರ ಸಮ್ಮುಖದಲ್ಲಿಯೇ ಮುಂದಿಟ್ಟಿದೆ ಎಂದು ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬಸವಕಲ್ಯಾಣದಲ್ಲಿ ಬಸವ ಮಹಾಮನೆಯಲ್ಲಿ ನಡೆದ 24ನೇ ಕಲ್ಯಾಣ ಪರ್ವದಲ್ಲಿ ಮಾತನಾಡಿದ ಅವರು, ʼ2000ನೇ ವರ್ಷದಲ್ಲಿ ಕೇಂದ್ರಕ್ಕೆ ಕಳಿಸಲಾಗಿತ್ತು. ಅಂದಿನ ಯುಪಿಎ ಸರ್ಕಾರ ಅದನ್ನು ತಿರಸ್ಕರಿಸಿತು. ಮತ್ತೆ 2013ರಲ್ಲಿ ಕಳುಹಿಸಿದ ಪ್ರಸ್ತಾವನೆಗೆ ಮಾಜಿ ಸಿಎಂ ಯಡಿಯೂರಪ್ಪ, ಬೊಮ್ಮಾಯಿ, ಸಚಿವರಾದ ವಿ.ಸೋಮಣ್ಣ, ಎಂ.ಬಿ.ಪಾಟೀಲ್ ಹಾಗೂ ಬಸವ ಸಮಿತಿಯ ಅರವಿಂದ ಜತ್ತಿ ಸಹಿ ಹಾಕಿ ಕೇಂದ್ರಕ್ಕೆ ಕಳುಹಿಸಲಾಗಿತ್ತು, ಅದನ್ನೂ ಸಹ ಕೇಂದ್ರ ವಾಪಸ್ ಕಳುಹಿಸಿತ್ತು. ತದನಂತರ 2017-18ರಲ್ಲಿ ಸಿದ್ದರಾಮಯ್ಯ ನೇತ್ರತ್ವದ ಸರ್ಕಾರ ಸಂಪುಟ ಸಭೆಯ ಶಿಪಾರಸ್ಸಿನೊಂದಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದು ವಾಪಸ್ ಬಂದಿತ್ತುʼ ಎಂದು ತಿಳಿಸಿದರು.
ʼಪ್ರತ್ಯೇಕ ಧರ್ಮ ಮಾನ್ಯತೆಗೆ ಎಲ್ಲಾ ಹಿರಿಯರು, ಮಠಾಧೀಶರು, ಪೂಜ್ಯರು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚಿಸಿ ಒಮ್ಮತದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಸಮಾಜವನ್ನು ಒಗ್ಗೂಡಿಸಿ ಬಲವಾದ ಸಮಾಜ ಕಟ್ಟುವ ಕಾರ್ಯ ಯಶಸ್ವಿಯಾಗುತ್ತದೆ. ಒಬ್ಬರ ಮೇಲೆ ಒಬ್ಬರು ಆರೋಪ-ಪ್ರತ್ಯಾರೋಪ ಮಾಡಿದರೆ ಸಮಾಜ ಒಗ್ಗೂಡಿಸಲು ಅಸಾಧ್ಯʼ ಎಂದರು.
ʼಸಮಾಜವನ್ನು ನಮ್ಮ ಸ್ವಾರ್ಥಕ್ಕಾಗಿ ಸಮಾಜಕ್ಕಾಗಿ ಬಹಳ ಸಲ ಯಾವುದೇ ರೀತಿಯಲ್ಲಿ ಉಪಯೋಗ ಮಾಡಿಕೊಂಡಿಲ್ಲ. ಅಸತ್ಯವಾದ ಮಾತು ನಮ್ಮ ಬಾಯಲ್ಲಿ ಯಾವತ್ತೂ ಬರುವದಿಲ್ಲ. ನಾನಾಗಲಿ, ನಮ್ಮ ತಂದೆಯಾಗಲಿ, ಸಮಾಜವನ್ನು ನಮ್ಮ ಸ್ವಾರ್ಥಕ್ಕೆ ಎಂದಿಗೂ ಬಳಸಿಕೊಂಡಿಲ್ಲ. ಆದರೆ, ಸಮಾಜಕ್ಕಾಗಿ ನಾವು, ಪ್ರಹಾರಗಳನ್ನು ಎದುರಿಸಿದ್ದೇವೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಮತಗಳ್ಳತನ ವಿರುದ್ಧ ಬಸವಕಲ್ಯಾಣದಲ್ಲಿ ಸಹಿ ಸಂಗ್ರಹ ಅಭಿಯಾನ
ʼಬಸವಣ್ಣನವರನ್ನು ಎಲ್ಲಾ ಜಾತಿ-ಧರ್ಮ ಹಾಗೂ ಭಾಷಿಕರನ್ನು ನಮ್ಮವರೇ ಎಂದು ಹೇಳಿದ್ದಾರೆ. ಎಲ್ಲ ಮಠಾಧೀಶರು, ಪೂಜ್ಯರಿಗೂ ಪೂಜ್ಯನೀಯವಾಗಿ ಗೌರವಿಸುತ್ತೇವೆ. ಇದೇ ಬಸವತತ್ವವಾಗಿದೆ. ಎಲ್ಲರ ತೀರ್ಮಾನಕ್ಕೆ ನನ್ನ ಯಾವುದೇ ಅಪಸ್ವರ ಇಲ್ಲʼ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.





