2017ರಿಂದ ಆದೇಶವಿದ್ದರೂ ಪಾಲನೆ ಮಾತ್ರ ಇಲ್ಲ; ಸಂಚಾರ ನಿಯಮಗಳ ಗಾಳಿಗೆ ತೂರಿದ ಸರ್ಕಾರಿ-ಖಾಸಗಿ ಬಸ್‌ಗಳು

Date:

ನಗರಗಳು ಬೆಳೆಯುವುದರ ಜತೆಗೆ ಜನಸಂದಣಿ ಹೆಚ್ಚಾಗುವುದು ಸಹಜ. ಅದರೊಟ್ಟಿಗೆ ವಾಹನಗಳ ಸಂಖ್ಯೆಯೂ ಗಣನೀಯವಾಗಿ ಏರುತ್ತಲೇ ಇರುತ್ತದೆ. ಶಿವಮೊಗ್ಗ ನಗರದ್ದೂ ಅದೇ ಕತೆ. ಪ್ರತಿದಿನವೂ ನಗರದ ಬೀದಿಗಳಲ್ಲಿ ಟ್ರಾಫಿಕ್ ಜಾಮ್, ವಾಹನ ಸವಾರರಿಗೂ ಸಾರ್ವಜನಿಕರಿಗೂ ಉಂಟಾಗುತ್ತಿದ್ದ ಕಿರಿಕಿರಿ ಮನಗಂಡು ಅಂದಿನ ಜಿಲ್ಲಾಧಿಕಾರಿ 2017ರಲ್ಲಿ ವಿಶೇಷ ಆದೇಶವೊಂದನ್ನು ಹೊರಡಿಸಿದ್ದರು. ಆದರೆ ಈ ಆದೇಶ ಹಾಳೆಯ ಮೇಲಷ್ಟೇ ಕಾರ್ಯರೂಪಕ್ಕೆ ಬಂದಿಲ್ಲ; ಇಲ್ಲಿನ ಅಧಿಕಾರಿಗಳಿಗೆ ಅದು ಕಾರ್ಯ ರೂಪಕ್ಕೆ ಬರುವುದೂ ಬೇಕಾಗಿಲ್ಲ ಎನ್ನುವುದು ಸದ್ಯದ ಗಂಭೀರ ಆರೋಪ.

ಆ ಆದೇಶದ ಪ್ರಕಾರ, ಶಿವಮೊಗ್ಗ ನಗರದ ಅಶೋಕ ವೃತ್ತದಲ್ಲಿ ಖಾಸಗಿ ಬಸ್ ನಿಲ್ದಾಣ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಎರಡೂ ಅಕ್ಕಪಕ್ಕದಲ್ಲಿರುವುದರಿಂದ, ಬಸ್ಸುಗಳು ದಿನಪೂರ್ತಿ ನಗರದ ಒಳಗಡೆ ಸಂಚರಿಸಿದರೆ ಟ್ರಾಫಿಕ್ ಸಮಸ್ಯೆ ತೀವ್ರವಾಗುತ್ತದೆ ಎಂದು, ಬೆಳಗ್ಗೆ 9.00ರಿಂದ ರಾತ್ರಿ 9.00ರವರೆಗೆ ನಗರದ ಒಳಗೆ ಯಾವುದೇ ಖಾಸಗಿ ಬಸ್ ಅಥವಾ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸಬಾರದು ಎಂದು ಆದೇಶಿಸಲಾಗಿತ್ತು. ಅದರಂತೆ, ಬಸ್‌ಸ್ಟ್ಯಾಂಡ್ ಹಿಂಭಾಗದ ಬುದ್ದಾನಗರ, ನೂರು ಅಡಿ ರಸ್ತೆ, ಇಲಿಯಾಸ್ ನಗರದಿಂದ ಬೈಪಾಸ್ ಮುಖಾಂತರ ಹೊರಗಡೆ ಹೋಗುವಂತೆ ಮಾರ್ಗವನ್ನು ನಿಗದಿಪಡಿಸಲಾಗಿತ್ತು. ಇದೇ ನಿಯಮ ನಗರಕ್ಕೆ ಬರುವ ಬಸ್ಸುಗಳಿಗೂ ಅನ್ವಯವಾಗಬೇಕೆಂದು ಸೂಚಿಸಲಾಗಿತ್ತು.

1002476350

ಆದರೆ, ಪ್ರಸ್ತುತ ಈ ಆದೇಶ ಪಾಲನೆಯಾಗದೇ ಇರುವುದರಿಂದ ನಗರ ಮಧ್ಯಭಾಗದಲ್ಲಿಯೇ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಸಂಚಾರ ಪುನಃ ಆರಂಭವಾಗಿದೆ. ವಿಶೇಷವಾಗಿ ಅಮೀರ್ ಅಹ್ಮದ್ ವೃತ್ತದಿಂದ ಗಾಂಧಿ ಬಜಾರ್, ಕರ್ನಾಟಕ ಸಂಘ, ವಿಶ್ವೇಶ್ವರಯ್ಯ ವೃತ್ತ, ಕೃಷ್ಣ ಕಫೆ, ಮೀನಾಕ್ಷಿ ಭವನ ಮತ್ತು ಹೊಳೆ ಬಸ್ ಸ್ಟಾಪ್‌ವರೆಗೆ ಬಸ್ಸುಗಳು ನಿರಂತರವಾಗಿ ಸಂಚರಿಸುತ್ತಿದ್ದು, ಸುತ್ತಲಿನ ಪ್ರದೇಶ ಜನರಿಂದ, ವಾಹನಗಳಿಂದ ಗಿಜಿಗುಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವ್ಯಾಪಾರ ಕೇಂದ್ರದಲ್ಲಿ ದಿನನಿತ್ಯ ಅಸ್ತವ್ಯಸ್ತ ಸಂಚಾರ: ಗಾಂಧಿ ಬಜಾರ್ ಪ್ರದೇಶವು ಶಿವಮೊಗ್ಗ ಜಿಲ್ಲೆಯ ಪ್ರಮುಖ ವ್ಯಾಪಾರ ವಹಿವಾಟಿನ ಕೇಂದ್ರವಾಗಿದೆ. ಇಲ್ಲಿ ಪ್ರತಿದಿನ ಸಾವಿರಾರು ಜನ ವ್ಯಾಪಾರ, ಉದ್ಯಮ ಮತ್ತು ಖರೀದಿಗಾಗಿ ಆಗಮಿಸುತ್ತಾರೆ. ಬಸ್ಸುಗಳ ನಿರಂತರ ಸಂಚಾರದಿಂದ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಸರ್ವೇಸಾಮಾನ್ಯವಾಗಿದೆ. ಅಲ್ಲದೆ ವಾಹನಗಳ ಅತಿಯಾದ ನಿಲುಗಡೆ, ಸರಿಯಾದ ಪಾರ್ಕಿಂಗ್ ಸೌಲಭ್ಯಗಳ ಕೊರತೆ ಮತ್ತು ನಿರಂತರ ಹಾರ್ನ್ ಸದ್ದಿನಿಂದ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಶಾಲಾ ವಿದ್ಯಾರ್ಥಿಗಳಿಗೆ ಅಪಾಯ: ನಗರದಲ್ಲಿರುವ ಕೃಷ್ಣ ಕೆಫೆ ಹಾಗೂ ಮೀನಾಕ್ಷಿ ಭವನದ ಸುತ್ತಮುತ್ತ ಶಾಲಾ-ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳು ಪ್ರತಿದಿನ ರಸ್ತೆ ದಾಟುವುದು ಕಷ್ಟಕರವಾಗಿದೆ. ಹೆಚ್ಚುತ್ತಿರುವ ಬಸ್ ಸಂಚಾರದಿಂದ ವಿದ್ಯಾರ್ಥಿಗಳ ಸುರಕ್ಷತೆ ಪ್ರಶ್ನಾರ್ಹವಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಬಿಎಚ್ ರಸ್ತೆ ಮತ್ತು ಹೊಳೆ ಬಸ್ ಸ್ಟಾಪ್ ಪ್ರದೇಶಗಳು ನಗರದ ಪ್ರಮುಖ ಬಿಂದುಗಳಾಗಿವೆ. ಇಲ್ಲಿ ಸರ್ಕಲ್ ಮತ್ತು ಸಿಗ್ನಲ್ ವ್ಯವಸ್ಥೆ ಇದ್ದರೂ, ಬಸ್ಸುಗಳು ನಿಲುಗಡೆ ಮಾಡುವುದರಿಂದ ಟ್ರಾಫಿಕ್ ನಿಯಂತ್ರಣ ಅಸಾಧ್ಯವಾಗುತ್ತಿದೆ. ಸಿಗ್ನಲ್ ಉದ್ದೇಶ ಟ್ರಾಫಿಕ್ ಸುಗಮಗೊಳಿಸುವುದಾದರೂ, ಬಸ್ಸುಗಳ ನಿಲುಗಡೆ ಆ ಉದ್ದೇಶವನ್ನು ವ್ಯರ್ಥಗೊಳಿಸುತ್ತಿದೆ.

ನಗರದೊಳಗೆ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ಸುಗಳು ಎರಡೂ ಸಂಚರಿಸುತ್ತಿರುವುದು ನಾಗರಿಕರಿಗೆ ತೊಂದರೆ ಆಗುತ್ತಿದೆ. “2017ರ ಜಿಲ್ಲಾಧಿಕಾರಿಯ ಆದೇಶವನ್ನು ಪುನಃ ಜಾರಿಗೆ ತರಬೇಕು. ಬೈಪಾಸ್ ಮೂಲಕವೇ ಹೊರ ಜಿಲ್ಲೆ ಬಸ್ಸುಗಳು ಸಂಚರಿಸಬೇಕು” ಎಂದು ನಾಗರಿಕರು ಆಗ್ರಹಿಸಿದ್ದಾರೆ. ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಹಾಗೂ ನಗರದಲ್ಲಿ ಸುಗಮ ಸಂಚಾರ ಒದಗಿಸಲು, 2017ರ ಆದೇಶವನ್ನು ಕಠಿಣವಾಗಿ ಪಾಲಿಸಬೇಕೆಂದು ಪ್ರಜ್ಞಾವಂತ ನಾಗರಿಕರು ಜಿಲ್ಲಾ ಆಡಳಿತದ ಗಮನಕ್ಕೆ ತಂದಿದ್ದಾರೆ. ನಗರ ಸಾರಿಗೆ, ಖಾಸಗಿ ಬಸ್ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಂಯೋಜಿತ ಕ್ರಮ ಕೈಗೊಂಡರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಅಧಿಕಾರಿಗಳ ಪ್ರತಿಕ್ರಿಯೆ:

ಈ ವಿಷಯದ ಕುರಿತು ಈದಿನ ಡಾಟ್‌ಕಾಮ್ ಕೆಎಸ್‌ಆರ್‌ಟಿಸಿ ಅಧಿಕಾರಿ ದಿನೇಶ್ ಡಿಟಿಒ (District Transport Officer) ಅವರನ್ನು ಸಂಪರ್ಕಿಸಲಾಗಿ, “ಎಲ್ಲಾ ಬಸ್ಸುಗಳು ಬೈಪಾಸ್ ಮುಖಾಂತರವೇ ತೆರಳುತ್ತಿವೆ” ಎಂದು ಸಮರ್ಥನೆ ಮಾಡಿದರು. ಈ ಕುರಿತು ಸ್ಥಳದಲ್ಲೇ ಪರಿಶೀಲನೆ ನಡೆಸಿರುವುದಾಗಿ ಮಾಹಿತಿ ನೀಡಿದಾಗ ತಬ್ಬಿಬ್ಬಾಗಿ “ಏನೋ ಹೊಸ ಡ್ರೈವರ್ ಬಂದಿರಬಹುದು, ಅವರಿಗೆ ಮಾರ್ಗ ಗೊತ್ತಿರದಿರಬಹುದು… ಕೆಲವೊಮ್ಮೆ ವ್ಯತ್ಯಾಸ ಆಗಿರಬಹುದು” ಎಂದು ಕುಂಟು ನೆಪದಂತ ಪ್ರತಿಕ್ರಿಯೆ ನೀಡಿದರು.

ನಂತರ ಕೆಎಸ್‌ಆರ್‌ಟಿಸಿ ಡಿಟಿಒ ದಿನೇಶ್ ಅವರು ಈದಿನ ಡಾಟ್‌ಕಾಮ್ ವರದಿಗಾರರಿಗೆ ನೀಡಿದ ಮಾಹಿತಿಯಲ್ಲಿ,
“ಅಶೋಕ ವೃತ್ತದ ಬಳಿ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ನಾವು ಪೊಲೀಸ್ ಇಲಾಖೆಗೆ ಪತ್ರ ಬರೆಯಲಿದ್ದೇವೆ. ಅವರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಬೈಪಾಸ್ ಮುಖಾಂತರ ಕಳಿಸಿದರೆ ಟ್ರಾಫಿಕ್ ಸಮಸ್ಯೆ ಬಹುತೇಕ ಪರಿಹಾರವಾಗುತ್ತದೆ” ಎಂದು ಹೇಳಿದರು. ಇದೇ ಕ್ರಮ ಖಾಸಗಿ ಬಸ್‌ಗಳಿಗೂ ಅನ್ವಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ನಗರದ ಟ್ರಾಫಿಕ್ ಸಮಸ್ಯೆ ಹಾಗೂ ಬಸ್ ಸಂಚಾರದ ಕುರಿತು ವಿಚಾರಿಸಿದ ಸಂದರ್ಭದಲ್ಲಿ, ಟ್ರಾಫಿಕ್ ನಿಯಮ ಉಲ್ಲಂಘನೆ (Violation) ಕುರಿತು ದಿನೇಶ್‌ ಅವರು ನೀಡಿದ ಮಾಹಿತಿಯಲ್ಲಿ, “ಇಲ್ಲಿವರೆಗೂ ನಮಗೆ ಬಿದ್ದಿದ್ದ ಎಲ್ಲಾ ಟ್ರಾಫಿಕ್ ದಂಡಗಳನ್ನು ಬಹುತೇಕ ಪಾವತಿಸಿದ್ದೇವೆ, ಈಗ ಕೇವಲ ಒಂದು-ಎರಡು ಲಕ್ಷ ರೂ. ದಂಡ ಮಾತ್ರ ಬಾಕಿಯಿದೆ” ಎಂದು ತಿಳಿಸಿದರು.

ಮುಂದುವರಿದು “ಆ ಮೊತ್ತವನ್ನು ಮನ್ನಾ ಮಾಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ, ಅದರ ಕುರಿತು ಸರ್ಕಾರದಿಂದ ಯಾವ ನಿರ್ಧಾರ ಬರುತ್ತದೆ ಎಂಬುದನ್ನು ಕಾಯುತ್ತಿದ್ದೇವೆ” ಎಂದರು.

ಆದರೆ ಈ ಹೇಳಿಕೆ ವಾಹನ ಸವಾರರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ಸಾಮಾನ್ಯ ವಾಹನ ಸವಾರರು ಸಣ್ಣ ಉಲ್ಲಂಘನೆ ಮಾಡಿದರೂ ತಕ್ಷಣ ದಂಡ ಕಟ್ಟಲೇಬೇಕು ಎಂದು ಸರ್ಕಾರ ಆದೇಶಿಸುತ್ತದೆ. ಹಾಗಾದರೆ ಸರ್ಕಾರಿ ಸಂಸ್ಥೆಯಾದ ಕೆಎಸ್‌ಆರ್‌ಟಿಸಿ‌ಗೆ ಮಾತ್ರ ಮನ್ನಾ ನೀಡುವುದು ನ್ಯಾಯವೇ?” ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.

ಈ ವಿಷಯದ ಕುರಿತು ಶಿವಮೊಗ್ಗ ಕೆಎಸ್‌ಆರ್‌ಟಿಸಿ ಡಿವಿಷನ್ ಕಂಟ್ರೋಲರ್ (ಡಿಸಿ) ನವೀನ್ ಅವರನ್ನು ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ, ಪ್ರತಿಕ್ರಿಯೆ ಸಿಕ್ಕಿಲ್ಲ. ಇದಕ್ಕೆ ಪ್ರತಿಯಾಗಿ ಡಿಟಿಒ ದಿನೇಶ್ ಅವರು, “ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಕಚೇರಿಗೆ ಬಂದು ಡಿಸಿ ಅವರಿಂದಲೇ ಮಾಹಿತಿ ಪಡೆಯಿರಿ,” ಎಂದು ತಿಳಿಸಿದರು.

ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಪ್ರತಿಕ್ರಿಯಿಸಿ, “ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಬೈಪಾಸ್ ಮಾರ್ಗವನ್ನು ಅನುಸರಿಸದೇ ನಗರೊಳಗೆ ಸಂಚರಿಸುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಕುರಿತಾಗಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು, ಸಮಸ್ಯೆ ಬಗೆಹರಿಸುತ್ತೇವೆ. ನಾವು ಎಷ್ಟೇ ಬಾರಿ ಮನವಿ ಮಾಡಿದರೂ, ಕೆಎಸ್‌ಆರ್‌ಟಿಸಿ ಕೇವಲ ಅಲ್ಪಸಲ್ಪ ಮೊತ್ತವನ್ನು ಮಾತ್ರ ಪಾವತಿಸಿದೆ, ಇನ್ನೂ ದಂಡದ ಸಂಪೂರ್ಣ ಮೊತ್ತವನ್ನು ಪಾವತಿಸಿಲ್ಲ” ಎಂದರು.

1002476398

ಇದೇ ವಿಷಯವಾಗಿ ಪಶ್ಚಿಮ ಸಂಚಾರಿ ಠಾಣೆಯ ಪಿಎಸ್ಐ ಸಪ್ನಾ ಅವರು ಪ್ರತಿಕ್ರಿಯಿಸಿ, “ಮೇಲಧಿಕಾರಿಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ, ಬೈಪಾಸ್ ಮುಖಾಂತರ ಬಸ್ ಸಂಚಾರವನ್ನು ಖಚಿತಪಡಿಸಲು ಕ್ರಮ ಕೈಗೊಳ್ಳುತ್ತೇವೆ,” ಎಂದು ಹೇಳಿದರು.

ಶಿವಮೊಗ್ಗ–ಭದ್ರಾವತಿ ಮಾರ್ಗದಲ್ಲಿ ಸಂಚಾರ ಮಾಡುವ ನಗರ ಸಾರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಎಲ್ಲ ಸ್ಟಾಪ್‌ಗಳಲ್ಲಿ ನಿಲ್ಲದಿರುವುದು ಇದೀಗ ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಯಾಣಿಕರ ಅಳಲನ್ನು ಈ ದಿನ.ಕಾಮ್ ಹಲವು ಬಾರಿ ವರದಿ ಮಾಡಿದರೂ, ಸಮಸ್ಯೆ ಇನ್ನೂ ಬಗೆಹರಿಯದೆ ಇದೆ. ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು ಹಾಗೂ ಅನಾರೋಗ್ಯ ಪೀಡಿತರು ಸ್ಟಾಪ್‌ನಲ್ಲಿ ಕಾಯುತ್ತಿದ್ದರೂ ಬಸ್ ನಿಲ್ಲಿಸದೇ ಹೋದರೆ, ಅವರಿಗೆ ನಗರಕ್ಕೆ ಬರಲು ಆಟೋ ಬಾಡಿಗೆಗೆ ₹150–₹200 ಖರ್ಚು ಮಾಡಬೇಕಾಗುತ್ತದೆ. ಸಾರ್ವಜನಿಕರು ಸರ್ಕಾರಿ ಸಾರಿಗೆ ಎಲ್ಲರಿಗೋಸ್ಕರ, ಆದರೆ ಈಗ ಅದು ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೊನ್ನೆಯಂದು ಮಲವಗೋಪ್ಪದ ಚೆನ್ನಬಸವೇಶ್ವರ ದೇವಸ್ಥಾನದ ಬಳಿ ಮಹಿಳೆಯೊಬ್ಬರು ಬಸ್ ನಿಲ್ಲಿಸುವುದಿಲ್ಲವೆಂದು ಅನುಮಾನಗೊಂಡು ರಸ್ತೆ ಮಧ್ಯೆ ಕೈ ಅಡ್ಡ ಹಾಕಿ ಬಸ್ ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಚಾಲಕ ಬಸ್ ನಿಲ್ಲಿಸದೆ ಮುಂದುವರಿದ ಕಾರಣ, ಮಹಿಳೆ ಕ್ಷಣಕಾಲ ಗಾಬರಿಯಾದರು. ಹಿಂಬದಿಯಿಂದ ಬರುವ ವಾಹನಗಳಿಂದ ಅಪಘಾತ ಸಂಭವಿಸಬಹುದಾದಂತಹ ಅಪಾಯದ ಪರಿಸ್ಥಿತಿ ಉಂಟಾಯಿತು.

1002476630

ಈ ಘಟನೆ ಕುರಿತು ಚಾಲಕನ್ನು ಪ್ರಶ್ನಿಸಿದಾಗ, ಚಾಲಕನು ʼಭದ್ರಾವತಿಯಿಂದ ಬಹಳ ಹೊತ್ತಿನಿಂದ ಬಸ್ ಬಂದಿಲ್ಲ, ಎಲ್ಲ ಪ್ರಯಾಣಿಕರನ್ನೂ ನನ್ನ ಬಸ್ಸಿನಲ್ಲಿ ಕರೆದುಕೊಂಡು ಹೋಗುವುದು ಸಾಧ್ಯವಿಲ್ಲ. ಈ ಬಗ್ಗೆ ನೀವು ನಮ್ಮ ಕೆಎಸ್ಆರ್ಟಿಸಿ ಅಧಿಕಾರಿಗಳೊಂದಿಗೆ ಮಾತಾಡಿʼ ಎಂದುಬಿಟ್ಟರು. ಸ್ಥಳೀಯರು ಹೇಳುವಂತೆ, ಕೆಎಸ್ಆರ್ಟಿಸಿ ಅಧಿಕಾರಿಗಳ ಅಸಮರ್ಪಕ ನಿರ್ವಹಣೆ ಹಾಗೂ ನಿರ್ಲಕ್ಷ್ಯದಿಂದ ಪ್ರತಿದಿನ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಬಸ್‌ಗಳು ಸಮಯಕ್ಕೆ ಬಾರದ ಕಾರಣ, ಕೆಲಸದವರು, ವಿದ್ಯಾರ್ಥಿಗಳು, ಮಹಿಳೆಯರು ದೊಡ್ಡ ಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ಜನಸಾಮಾನ್ಯರು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ, ಶಿವಮೊಗ್ಗ–ಭದ್ರಾವತಿ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ ಸಂಚಾರದ ಅವ್ಯವಸ್ಥೆ ಜನರ ದೈನಂದಿನ ಜೀವನದ ಅವಿಭಾಜ್ಯ ಸಮಸ್ಯೆಯಾಗಿದೆ. ಬಸ್‌ಗಳು ಸಮಯಕ್ಕೆ ಬಾರದಿದ್ದರೆ, ಕೆಲವೊಮ್ಮೆ ಒಟ್ಟಾಗಿ ಹಲವು ಬಸ್‌ಗಳು ಬರುತ್ತವೆ ಎಂಬ ಅಸಮಂಜಸ ಪರಿಸ್ಥಿತಿ ಮುಂದುವರಿದಿದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು, ಕೆಲಸಗಾರರು, ವೃದ್ಧರು ಹಾಗೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಾಧ್ಯಮಗಳು ಹಲವು ಬಾರಿ ಈ ವಿಷಯವನ್ನು ಎತ್ತಿಹಿಡಿದರೂ ಯಾವುದೇ ಬದಲಾವಣೆ ಕಾಣಿಸದಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ. ಜನತೆ ಈಗ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಸ್ವತಃ ಹಸ್ತಕ್ಷೇಪಿಸಿ ಶಾಶ್ವತ ಪರಿಹಾರ ಒದಗಿಸುವ ನಿರೀಕ್ಷೆಯಲ್ಲಿ ಇದ್ದಾರೆ. ಇದರೊಂದಿಗೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ಶಿವಮೊಗ್ಗ ವಿಭಾಗಕ್ಕೆ ನಿಯೋಜಿಸುವುದು ಮಾತ್ರವೇ ಜನರ ವಿಶ್ವಾಸವನ್ನು ಮರುಸ್ಥಾಪಿಸುವ ಮೊದಲ ಹೆಜ್ಜೆಯಾಗಲಿದೆ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...