- ಫೆ.1ರಂದು ನಡೆಯಲಿರುವ ಬ್ಯಾರಿ ಕೂಟದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ
- ಬಿಸಿಸಿ, ಬ್ಲಡ್ ಡೋನರ್ಸ್, ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ರಕ್ತದಾನ ಶಿಬಿರ
ರಕ್ತದಾನ ಮಹಾದಾನ. ರಕ್ತದಾನದ ಬಗ್ಗೆ ಹಲವರಲ್ಲಿ ಬಹಳಷ್ಟು ಆತಂಕವಿದೆ. ರಕ್ತ ಕೊಟ್ಟರೆ ದೇಹದಲ್ಲಿ ರಕ್ತ ಕಡಿಮೆ ಆಗಬಹುದು ಎಂದು ಹಲವು ಮಂದಿ ರಕ್ತ ನೀಡುವುದಕ್ಕೆ ಹಿಂಜರಿಯುತ್ತಾರೆ. ಈ ಭಯ, ಆತಂಕ ಹೋಗಲಾಡಿಸಬೇಕಾದರೆ ರಕ್ತದಾನದ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ನಾರಾಯಣ ಹೃದಯಾಲಯ ಬ್ಲಡ್ ಬ್ಯಾಂಕ್ ವಿಭಾಗದ ಮುಖ್ಯಸ್ಥರಾದ ಭಾನು ಪ್ರಕಾಶ್ ತಿಳಿಸಿದರು.
ಅವರು ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು(ರಿ), ಬ್ಲಡ್ ಡೋನರ್ಸ್ ಮಂಗಳೂರು, ನಾರಾಯಣ ಹೃದಯಾಲಯ ಬ್ಲಡ್ ಬ್ಯಾಂಕ್ ಇದರ ಸಹಯೋಗದೊಂದಿಗೆ ಬ್ಯಾರಿ ಕೂಟದ ಪ್ರಚಾರಾರ್ಥವಾಗಿ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿರುವ ಬಿಸಿಸಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
“ಬಿಸಿಸಿ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಹಲವು ಸ್ನೇಹಿತರು ಕಳೆದ ಏಳೆಂಟು ವರ್ಷಗಳಿಂದ ನಾರಾಯಣ ಹೃದಯಾಲಯದ ಜೊತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಕೋವಿಡ್ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇದ್ದಾಗ ರಕ್ತದಾನಿಗಳನ್ನು ಸಂಪರ್ಕಿಸಿ, ಹಲವು ರೋಗಿಗಳಿಗೆ ನೆರವಾಗಿದ್ದಾರೆ. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಕೂಡ ಇಂತಹ ಶಿಬಿರಗಳ ಮೂಲಕ ಮಾಡುತ್ತಿದ್ದಾರೆ. ಇಂತಹ ಸಹಕಾರವಿದ್ದಾಗಲಷ್ಟೇ ಸೌಹಾರ್ದದ ಸಮಾಜ ನಿರ್ಮಿಸಲು ಸಾಧ್ಯ. ರಕ್ತದಾನದಂತಹ ಸಮಾಜ ಸೇವೆಯು ನಿರಂತರವಾದದು. ಫೆ.1ರಂದು ಬ್ಯಾರಿ ಕೂಟದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿ ಸೇವೆ ಮಾಡುತ್ತಿರುವುದು ಸಂತಸದ ಸಂಗತಿ” ಎಂದು ಭಾನು ಪ್ರಕಾಶ್ ತಿಳಿಸಿದರು.
ಈ ವೇಳೆ ಮಾತನಾಡಿದ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಹಾರಿಸ್ ಜಿ.ಎಸ್.ಕೆ, “ನಾರಾಯಣ ಹೃದಯಾಲಯ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಸಂಘಟನೆಯ ಸಹಕಾರದಿಂದ ಇಂತಹ ಸಮಾಜಸೇವೆ ಮಾಡಲು ಸಾಧ್ಯವಾಗುತ್ತಿದೆ. ಯಾವುದೇ ತುರ್ತು ಸಂದರ್ಭಗಳಲ್ಲಿಯೂ ಕೂಡ ನಮಗೆ ರಕ್ತದ ಅವಶ್ಯಕತೆ ಇದ್ದಾಗ ನೆರವು ನೀಡುತ್ತಿದ್ದಾರೆ. ಅದಕ್ಕಾಗಿ ಬಿಸಿಸಿಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ. ಅವರ ಸಹಕಾರವು ಇನ್ನು ಮುಂದೆಯೂ ಹೀಗೆ ಇರಲಿ” ಎಂದು ಹೇಳಿದರು.

ಶಿಬಿರದಲ್ಲಿ ಭಾನು ಪ್ರಕಾಶ್ ಅವರಿಗೆ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು(ರಿ) ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಕಿರುಕಾಣಿಕೆಯನ್ನು ನೀಡಿ, ಗೌರವಿಸಲಾಯಿತು. ಶಿಬಿರದಲ್ಲಿ ಒಟ್ಟು ನೂರಕ್ಕೂ ಅಧಿಕ ಮಂದಿ ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಸಹಕಾರ ನೀಡಿದರು. ಎಲ್ಲ ರಕ್ತದಾನಿಗಳಿಗೆ ಇದೇ ವೇಳೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್; ಸರ್ಕಾರದ ಹೆಂಗರುಳಿನ ಯೋಜನೆಗೆ ಬೇಕಿದೆ ಅಧಿಕಾರಿಗಳ ಬದ್ಧತೆ
ಈ ಸಂದರ್ಭದಲ್ಲಿ ಬೆಂಗಳೂರು ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಶಬೀರ್ ಬ್ರಿಗೇಡ್, ಉಪಾಧ್ಯಕ್ಷರಾದ ಸಲೀಂ ಸಿ.ಎಂ, ಶಂಶುದ್ದೀನ್, ಶಿಬಿರದ ಸಂಚಾಲಕರಾದ ಅಶ್ರಫ್ ಉಪ್ಪಿನಂಗಡಿ, ಬಿಸಿಸಿಯ ಕಾನೂನು ಸಲಹೆಗಾರರಾದ ಅಡ್ವೊಕೇಟ್ ಕಲಂದರ್ ಕೊಯಿಲ, ಬ್ಲಡ್ ಡೋನರ್ಸ್ ಮಂಗಳೂರು ಇದರ ಮುಖಂಡರಾದ ಬಶೀರ್ ಬೆಳ್ಳಾರೆ, ಇರ್ಫಾನ್ ಕಲ್ಲಡ್ಕ, ನಾರಾಯಣ ಹೃದಯಾಲಯದ ಡಾ. ರಚನಾ, ಸಿಬ್ಬಂದಿಗಳಾದ ರಾಜೇಶ್.ವಿ, ಸುನಿಲ್ ಕುಮಾರ್, ನೇಹಾ ಬಿಎಂ, ದೀಪಕ್, ಚೇತನ್, ಬಿಸಿಸಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶಫೀಕ್ ಮಲ್ಲೇಶ್ವರಂ, ಹಾರಿಸ್, ಕಲಂದರ್, ಶಿಹಾಬ್ ಕಾಟಿಪಳ್ಳ, ಇಕ್ಬಾಲ್ ಡಿಫೈನ್, ನವಾಝ್ ಸೇರಿದಂತೆ ಮತ್ತಿತತರರು ಉಪಸ್ಥಿತರಿದ್ದರು.







