ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಿ ದಾಸರಹಟ್ಟಿ ಗ್ರಾಮ ಸಮಸ್ಯೆಗಳ ಗೂಡಾಗಿದೆ. ಆರು ವರ್ಷದೊಳಗಿನ ಪುಟಾಣಿ ಮಕ್ಕಳಿಗೆ ಪೌಷ್ಠಿಕ ಆಹಾರ, ಆರೋಗ್ಯ ತಪಾಸಣೆ, ಚುಚ್ಚುಮದ್ದು ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣ ಒದಗಿಸುವ ಹೊಣೆ ಹೊತ್ತಿರುವ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮೂಲಸೌಕರ್ಯಗಳೇ ಇಲ್ಲ.
ಕಡೂರಿನಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿ ಇರುವ ಹುಲ್ಲೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ. ದಾಸರಹಟ್ಟಿಯಲ್ಲಿ ಉಪ್ಪಾರ ಸಮುದಾಯದ 55–60 ಕುಟುಂಬಗಳು ವಾಸಿಸುತ್ತಿವೆ. ಹಲವು ವರ್ಷಗಳಿಂದ ಇಲ್ಲಿ ಅಂಗನವಾಡಿ ಕಾರ್ಯನಿರ್ವಹಿಸುತ್ತಿದ್ದರೂ, ಕೇಂದ್ರದ ಅಸ್ತಿತ್ವವನ್ನು ತೋರಿಸುವ ಫಲಕವನ್ನೇ ಇನ್ನೂ ಸ್ಥಾಪಿಸಲು ಸಾಧ್ಯವಾಗಿಲ್ಲ.

ಅಂಗನವಾಡಿ ಕೇಂದ್ರದಲ್ಲಿ ದಿನವೂ 8-10 ಮಕ್ಕಳು ಪಾಠಕ್ಕೆ ಬರುತ್ತವೆ. ಆ ಮಕ್ಕಳು ಬರುವ ರಸ್ತೆಯೂ ಸರಿಯಾಗಿಲ್ಲ. ಮಳೆಗಾಲದಲ್ಲಿ ಹಳ್ಳ, ಬೇಸಿಗೆಯಲ್ಲಿ ಧೂಳಿನ ಕಂದಕವಾಗುತ್ತದೆ ಎನ್ನುವುದು ಗ್ರಾಮಸ್ಥರ ಆರೋಪ. ಶುದ್ಧ ಕುಡಿಯುವ ನೀರು, ವಿದ್ಯುತ್ ಯಾವ ಸೌಲಭ್ಯವೂ ಇಲ್ಲ. ಇದು ಸಾಲದೆಂಬಂತೆ ಅಂಗನವಾಡಿ ಆವರಣದ ಸುತ್ತ ಹಾವುಗಳ ಹಾವಳಿ. ಹುಲ್ಲು, ಗಂಟಿಗಳಿಂದ ತುಂಬಿರುವ ಪ್ರದೇಶದಲ್ಲಿ ಹಾವು ಕಾಣುವುದು ಸಾಮಾನ್ಯ. ಆದರೆ ಇದೇ ಸ್ಥಳದಲ್ಲಿ ಮಕ್ಕಳು ದಿನವೂ ಸಮಯ ಕಳೆಯುತ್ತಿರುವುದು ಇದಕ್ಕಿಂತ ಭಯಾನಕ ಎನ್ನುವುದು ಪೋಷಕರ ಇನ್ನೊಂದು ಆತಂಕ.
ಅಂಗನವಾಡಿ ಸಹಾಯಕಿ ಹಾಗೂ ಕಾರ್ಯಕರ್ತೆಯರ ಕೊರತೆಯಿಂದ ಸೇವೆಗಳ ಗುಣಮಟ್ಟ ಕೂಡ ಕುಸಿದಿದೆ. ಪೌಷ್ಠಿಕ ಆಹಾರ ವಿತರಣೆ, ಆರೋಗ್ಯ ತಪಾಸಣೆ, ಚುಚ್ಚುಮದ್ದಿನ ಮಾಹಿತಿ ಎಲ್ಲವೂ ಕಾಗದದಲ್ಲಿ ಮಾತ್ರ ನಡೆಯುವಂತಾಗಿದೆ.

ಸಮಸ್ಯೆ ಕುರಿತು ಈ ದಿನಕ್ಕೆ ಪ್ರತಿಕ್ರಿಯಿಸಿದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಗೀತಾ, “ಸಮಸ್ಯೆಗಳ ಕುರಿತು ಅನೇಕ ಬಾರಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸರಿಯಾದ ಸ್ಪಂದನೆ ಇಲ್ಲ. ಅಂಗನವಾಡಿ ಕೇಂದ್ರಕ್ಕೆ ನಾಮಫಲಕ ಹಾಕಿಸಿಕೊಡಿ, ರಸ್ತೆ ದುರಸ್ತಿ ಮಾಡಿಕೊಡಿ ಎಂದು ಸಾಕಷ್ಟು ಬಾರಿ ಅವಲತ್ತುಕೊಂಡಿದ್ದೇವೆ. ಬಲ್ಬ್ ಹೋಗಿದೆ, ಹೊಸ ಬಲ್ಬ್ ಕೊಡಿಸಿ ಎಂದರೆ, ಕೊಡೋಣ, ಅಷ್ಟು ಅರ್ಜೆಂಟ್ ಏನು? ಎನ್ನುತ್ತಾರೆ. ಹಲವು ದಿನಗಳಿಂದ ಇದೇ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಮಕ್ಕಳಿಗೆ ಸುಂದರ ಭವಿಷ್ಯ ರೂಪಿಸಬೇಕಾದ ಅಧಿಕಾರಿಗಳೇ ಹೀಗೇ ಬೇಜವಾಬ್ದಾರಿ ತೋರಿದರೆ, ಸಮಸ್ಯೆ ಹೇಳುವುದಾದರೂ ಯಾರಿಗೆ?” ಎಂದು ಅಳಲು ತೋಡಿಕೊಂಡರು.

“ಅಂಗನವಾಡಿ ಸುತ್ತಲೂ ಹಾವುಗಳು ಬರುತ್ತಿವೆ. ಮೊನ್ನೆ ಕೂಡ ಹಾವು ಬಂದಿತ್ತು. ಇದರಿಂದ ಮಕ್ಕಳು ಭಯ ಪಡುತ್ತಿದ್ದಾರೆ. ಆವರಣದ ಸುತ್ತಲೂ ಪೊದೆ, ಗಿಡ ಗಂಟಿಗಳೇ ತುಂಬಿವೆ. ಎರಡ ಮೂರು ಬಾರಿ ಕಳೆ ನಾಶಕ ಸಿಂಪಡಿಸಿದ್ದೆವು. ಸ್ವಚ್ಛಗೊಳಿಸಿ ಕೊಡಿ ಎಂದು ಕೇಳಿದರೆ, ಉಡಾಫೆ ಉತ್ತರ ನೀಡುತ್ತಾರೆ. ಈ ಅಂಗನವಾಡಿಯಲ್ಲಿ ನಾನೇ ಶಿಕ್ಷಕಿ ಮತ್ತು ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಸದ್ದಿಲ್ಲದೇ ವಿಷಜಂತುಗಳು ಒಳಗೆ ನುಗ್ಗಿ ಮಕ್ಕಳಿಗೆ ತೊಂದರೆ ಮಾಡಿದರೆ ಯಾರು ಹೊಣೆ? ಪೋಷಕರು ನಮ್ಮ ಮೇಲೆ ನಂಬಿಕೆ ಇರಿಸಿ ಮಕ್ಕಳನ್ನು ಕಳಿಸುತ್ತಾರೆ. ಗೊತ್ತಿಲ್ಲದೇ ಅನಾಹುತಗಳಾದರೆ ಯಾರನ್ನ ದೂರಬೇಕು?” ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮದ ನಿವಾಸಿ, ರೈತ ಮುಖಂಡ ಚಂದ್ರ ಶೇಖರ್ ಮಾತನಾಡಿ, “ಈ ಹಿಂದೆ ನಮ್ಮೂರಲ್ಲಿ ಶಾಲೆ ಐದನೇ ತರಗತಿವರೆಗೆ ಚನ್ನಾಗಿ ನಡೆಯುತ್ತಿತ್ತು. ಶಿಕ್ಷಕರ ಬೇಜವಾಬ್ದಾರಿ ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದ ಈಗ ಶಾಲೆ ಮುಚ್ಚಿದ್ದಾರೆ. ಶಾಲೆ ಮುಚ್ಚಿದ ಹಾಗೆ ಈ ಅಂಗನವಾಡಿಯನ್ನೂ ಮುಚ್ಚುವ ಹುನ್ನಾರ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ. ಈ ಊರಲ್ಲಿ ವಯಸ್ಸಾದವರು ಓಡಾಡಲೂ ರಸ್ತೆ ಸರಿಯಾಗಿಲ್ಲ. ಮಳೆಗಾಲದಲ್ಲಂತೂ ಜನ ಜೀವನ ಅಸ್ತವ್ಯಸ್ತವಾಗುತ್ತದೆ. ಎಷ್ಟೋ ಜನ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಮಾನಗೆಟ್ಟ ಅಧಿಕಾರಿಗಳು, ಆಳ್ವಿಕೆ ಮಾಡುತ್ತಿರುವ ಶಾಸಕರಿಗೇನಾಗಬೇಕು. ಬಡವರು ಸಾಯುತ್ತಿರುವುದು ಇಲ್ಲಿ, ಶ್ರೀಮಂತರು ಚನ್ನಾಗಿಯೇ ಇದ್ದಾರೆ. ಇವ್ರಿಗೆ ಮಾರ್ರ್ಯಾದೆ ಅನ್ನೋದು ಇದ್ರೆ ನಮಗೆ ಸಿಗಬೇಕಿದ್ದ ಹಕ್ಕು ಸೌಲಭ್ಯವನ್ನು ಒದಗಿಸಬೇಕಿತ್ತು” ಎಂದು ಆಕ್ರೋಶ ಹೊರಹಾಕಿದರು.

“ತುಂಬು ಗರ್ಭಿಣಿಯರನ್ನು ಈ ರಸ್ತೆಯಲ್ಲಿ ಕರೆದುಕೊಂಡು ಹೋಗುವಾಗ ಸಾಕಷ್ಟು ಬಾರಿ ಅನಾಹುತಗಳಾಗಿವೆ. ಶಾಲೆಗೆ ಹಾಗೂ ಅಂಗನವಾಡಿಗೆ ಹೋಗುವಂತಹ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಸೂಕ್ತವಾದ ಕಾಂಕ್ರೀಟ್ ರಸ್ತೆ ಮಾಡಿಕೊಡಿ ಎಂದು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಇಲ್ಲಿವರೆಗೂ ನಮ್ಮೂರಿಗೆ ಡಾಂಬರ್ ಕಾಣದ ರಸ್ತೆಯಿಂದ ಕಂಗಾಲಾಗಿದ್ದೇವೆ. ಓಟ್ ಕೇಳಾಕ್ ಮಾತ್ರ ಬರ್ತಾರೆ ಅಷ್ಟೆ. ಬಾಕಿ ಸಮಯದಲ್ಲಿ ಇತ್ತ ತಿರುಗಿಯೂ ನೋಡಲ್ಲ” ಎನ್ನುತ್ತಾರೆ ಗ್ರಾಮದ ವೃದ್ಧೆಯೊಬ್ಬರು.

“ನಮ್ಮ ಮತ ತೆಗೆದುಕೊಂಡು ಆಯ್ಕೆಯಾಗಿರುವ ಶಾಸಕರು ಕೂಡ ನಮ್ಮ ಹಳ್ಳಿಗೆ ಬಂದಿಲ್ಲ. ನಮ್ಮೂರಿನ ಸಮಸ್ಯೆ ಹಾಗೂ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೆಂದು ಅವರ ನಡಯೇ ತೋರುತ್ತಿದೆ. ಇನ್ನಾದರೂ ನಮ್ಮೂರಿಗೆ ಡಾಂಬರ್ ರಸ್ತೆ ಹಾಗೂ ಅಂಗನವಾಡಿಗೆ ಸಿಗಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ನಮ್ಮ ಗ್ರಾಮಸ್ಥರೆಲ್ಲ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಮಾಡುತ್ತೇವೆ” ಎಂದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ರಾಸಾಯನಿಕ ಸಿಂಪರಣೆ; ಸಾವಿರಾರು ಜೇನು ಹುಳುಗಳು ಸಾವು
ವರ್ಷಗಳಿಂದಲೂ ಮಾಡುತ್ತಿರುವ ಮನವಿಗಳಿಗೆ ಅಧಿಕಾರಿಗಳ ಪ್ರತಿಕ್ರಿಯೆ ಕೇವಲ ನಿರ್ಲಕ್ಷ್ಯ ಎಂದಾದರೆ ಆ ಸ್ಥಾನದಲ್ಲಿದ್ದು ಮಾಡುವುದಾದರೂ ಏನು? ಬಿ. ದಾಸರಹಟ್ಟಿಯಂತಹ ಗ್ರಾಮಗಳು ಅಭಿವೃದ್ಧಿಯ ಮುಖ್ಯ ವಾಹಿನಿಗೆ ಬರುವುದು ಯಾವಾಗ? ಎನ್ನುವುದು ಸದ್ಯದ ಪ್ರಶ್ನೆ. ಚಿಕ್ಕದೋ ದೊಡ್ಡದೋ ಸಮಸ್ಯೆಯಂತೂ ಸಮಸ್ಯೆಯೇ. ಸಂಬಂಧಪಟ್ಟವರು ಅಸಡ್ಡೆ ತೋರುವುದಂತೂ ಸಲ್ಲದು. ಈ ಗ್ರಾಮಸ್ಥರ ಅಳಲನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳು ಆದ್ಯತೆ ಮೇರೆಗೆ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯ. ಪುಟಾಣಿ ಮಕ್ಕಳ ಹಕ್ಕುಗಳನ್ನು ಕಾಪಾಡುವುದು ಸರ್ಕಾರದ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರಾಥಮಿಕ ಜವಾಬ್ದಾರಿ. ಇದು ಅಂಗನವಾಡಿಯ ವಿಷಯ ಮಾತ್ರವಲ್ಲ, ಗ್ರಾಮೀಣ ಮಕ್ಕಳ ಭವಿಷ್ಯದ ಪ್ರಶ್ನೆ ಎನ್ನುವುದನ್ನು ಸದಾ ನೆನಪಿನಲ್ಲಿಡಬೇಕು ಎನ್ನುತ್ತಾರೆ ಗ್ರಾಮಸ್ಥರು.





