ಹಿಂದುತ್ವ ಎಂದು ಪದೇ ಪದೆ ಮಾತನಾಡುವವರಿಗೆಲ್ಲ ಹಿಂದುತ್ವದ ಬಗ್ಗೆ ಏನು ಗೊತ್ತಿದೆ? ಹಿಂದುತ್ವ ಎಂದು ಬಡಾಯಿ ಕೊಚ್ಚಿಕೊಳ್ಳುವವರು ಬಾಯಿ ಮುಚ್ಕೊಂಡು ಇರಲಿ ಎಂದು ವಿರೋಧ ಪಕ್ಷದ ನಾಯಕರ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿನ ನೂತನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
“ಅಜೀಂ ಪ್ರೇಮ್‌ಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹಣ ನೀಡಿದ್ದಾರೆ. ಅವರು ಯಾರ ಜಾತಿ ನೋಡಿಲ್ಲ. ಎಲ್ಲ ಮಕ್ಕಳಿಗೂ ಬಾಳೆಹಣ್ಣು, ಮೊಟ್ಟೆ ಕೊಡಲು ಒಪ್ಪಿ ಧನ ಸಹಾಯ ಮಾಡಿದ್ದಾರೆ. ಹಿಂದೆ ಎಸ್ ಬಂಗಾರಪ್ಪನವರು ಹಳ್ಳಿಗಳಲ್ಲಿ ದೇವಸ್ಥಾನಗಳ ಅಭಿವೃದ್ಧಿಗಾಗಿ ಆರಾಧನಾ ಯೋಜನೆ ತಂದಿದ್ದರು. ಹಾಗೇ ಅಜೀಂ ಪ್ರೇಮ್‌ಜಿ ಕೂಡ ಹಳ್ಳಿ ಮಕ್ಕಳು ಶೈಕ್ಷಣಿಕವಾಗಿ ಬಲಗೊಳ್ಳಲು ಸಹಾಯ ಮಾಡಿದ್ದಾರೆ. ಸರ್ಕಾರದ ಮಹತ್ತರ ಯೋಜನೆಯಾದ ಗ್ಯಾರಂಟಿ ಯೋಜನೆಗಳಿಂದ ಪುರುಷರಿಗೆ ಯಾವುದೇ ಬೇಸರ ಇಲ್ಲ. ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಅನುಕೂಲವಾಗಿವೆ” ಎಂದರು.
“ವಿರೋಧ ಪಕ್ಷಗಳ ಟೀಕೆಗಳಿಗೆ ನಾವು ತಲೆಕೆಡಿಸಿಕೊಂಡಿಲ್ಲ. ನನ್ನ ಕೂದಲು ಕಟಿಂಗ್ ಬಗ್ಗೆ ಕೂಡ ಮಾಡಿದ ಟೀಕೆ ಟಿಪ್ಪಣಿಗೂ ನಾನು ಹೆಚ್ಚು ಮಹತ್ವ ಕೊಡಲ್ಲ. ನನ್ನ ಹೇರ್ ಸ್ಟೈಲ್ ಇರುವುದೇ ಹೀಗೆ ನನ್ನ ಬಗ್ಗೆ ಟೀಕೆ ಮಾಡುವವರು ಟೀಕೆ ಮಾಡಲಿ. ನನ್ನ ಹೇರ್ ಸ್ಟೈಲ್ ಮಕ್ಕಳು ಮಾಡಿಕೊಳ್ಳುತ್ತಾರೆ ಎಂದೆಲ್ಲಾ ಟೀಕೆ ಮಾಡಿದ್ದರು. ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮಕ್ಕಳು ಶಿಸ್ತಿನಿಂದ ಶಾಲೆಗೆ ಬರಲಿ. ಸ್ಟೈಲ್ ಈಗ ಬೇಡ ಮುಂದೆ ಕಾಲೇಜ್‌ಗೆ ಹೋಗುವಾಗ ನನ್ನಂತೆ ಸ್ಟೈಲ್ ಮಾಡಿಸಿಕೊಳ್ಳಲಿ” ಎಂದರು.
ಇದನ್ನೂ ಓದಿ: ಕೊಪ್ಪಳ | ಪತ್ರಕರ್ತರಿಗೆ ನೈತಿಕತೆ ಮುಖ್ಯ: ಶಿವಕುಮಾರ್ ಮೆಣಸಿನಕಾಯಿ
ಬಿಜೆಪಿಯ ಯಾವುದೇ ಟೀಕೆಗೆ ನಾನು ಬಗ್ಗುವುದಿಲ್ಲ. ನಾನು ಸಚಿವನಾಗಿ ಯಾವ ಕೆಲಸ ಮಾಡಬೇಕು ಏನು ಮಾಡಬೇಕು ಎಂಬುದು ನಮಗೆ ಗೊತ್ತಿದೆ. ಸರ್ಕಾರ 11 ತಿಂಗಳಲ್ಲಿ 12,500 ಶಿಕ್ಷಕರ ನೇಮಕಾತಿ ಮಾಡಿದೆ. ನಮ್ಮದು ಎಲ್ಲ ವರ್ಗದವರ ಪರವಾಗಿ ಕೆಲಸ ಮಾಡುವ ಸರ್ಕಾರ” ಎಂದು ಹೇಳಿದರು.





