ಎಲ್ಲಾ ಸರ್ಕಾರಿ ಸಾರ್ವಜನಿಕ ಪ್ರದೇಶದಲ್ಲಿ ಆರ್‌ಎಸ್‌ಎಸ್ ಚಟವಟಿಕೆಗಳನ್ನು ನಿರ್ಬಂಧಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದನ್ನು ಖಂಡಿಸಿ ಬಿಜೆಪಿ ನಾಯಕರು ನಡೆಸಿದ್ದ ʼಪೋಸ್ಟರ್ʼ ಅಭಿಯಾನಕ್ಕೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿಗಳು ಬುಧವಾರ ʼಪೋಸ್ಟರ್ʼ ಅಭಿಯಾನದ ಮೂಲಕವೇ ತಿರುಗೇಟು ನೀಡಿದ್ದಾರೆ.
ಕಲಬುರಗಿಯ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಂವಿಧಾನ ಪೀಠಿಕೆ ಹಾಗೂ ಪೋಸ್ಟರ್‌ಗಳೊಂದಿಗೆ ಜಮಾಯಿಸಿದ ಮಹಿಳಾ ಕಾಂಗ್ರೆಸ್ ಜಿಲ್ಲಾ ಮುಖಂಡರು, ಕಾರ್ಯಕರ್ತರು ಬಸ್, ಆಟೊ, ಗೋಡೆ, ಫಲಕಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಿದರು. ಆರ್‌ಎಸ್‌ಎಸ್‌ಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲೆಡೆ ಅಂಟಿಸಿ ಪೋಸ್ಟರ್‌ನಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವವರು ದೇಶಪ್ರೇಮಿಗಳುʼ, ʼಯಾರು ಸಂವಿಧಾನವನ್ನು ಪ್ರೀತಿಸುತ್ತಾರೋ, ಅವರು ದೇಶವನ್ನೂ ಪ್ರೀತಿಸುತ್ತಾರೆʼ, ʼಯಾರು ದೇಶವನ್ನು ಪ್ರೀತಿಸುತ್ತಾರೋ ಅವರು ಆರ್‌ಎಸ್‌ಎಸ್ ಅನ್ನು ಧಿಕ್ಕರಿಸುತ್ತಾರೆʼ ಎಂದು ಬರೆಯಲಾಗಿದ್ದು, ಸಂವಿಧಾನ ಪೀಠಿಕೆ, ಬುದ್ಧ, ಬಸವ, ಅಂಬೇಡ್ಕರ್ ಜೊತೆಗೆ ಪ್ರಿಯಾಂಕ್ ಖರ್ಗೆ ಚಿತ್ರವಿದೆ.
ಇದನ್ನೂ ಓದಿ : ಸರ್ದಾರ್ ವಲ್ಲಭಬಾಯಿ ಪಟೇಲ್ ಆರ್‌ಎಸ್‌ಎಸ್ ಎರಡು ಬಾರಿ ಬ್ಯಾನ್ ಮಾಡಿದ್ರು : ಸಚಿವ ಸಂತೋಷ ಲಾಡ್
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರೇಣುಕಾ ಸಿಂಗೆ ಮಾತನಾಡಿ, ʼಸಚಿವ ಪ್ರಿಯಾಂಕ್ ಅವರು ಆರ್‌ಎಸ್‌ಎಸ್ ಕುರಿತು ರಾಜ್ಯದ ಜನರ ಕೊರಳ ಧ್ವನಿಯಾಗಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಅವರೇನೂ ಆರ್‌ಎಸ್‌ಎಸ್ ನಿಷೇಧಿಸಿ ಎಂದಿಲ್ಲ. ಸಚಿವ ಪ್ರಿಯಾಂಕ್ ಅವರನ್ನು ಬೆಂಬಲಿಸಿ ನಾವೂ ಆರ್‌ಎಸ್‌ಎಸ್ ನಿಷೇಧಿಸುವಂತೆ ಆಗ್ರಹಿಸಿ ಪ್ರಧಾನಿ ಹಾಗೂ ಕೇಂದ್ರ ಗೃಹಸಚಿವರಿಗೆ ಪತ್ರ ಬರೆಯುತ್ತೇವೆʼ ಎಂದರು.





