ʼಸಚಿವ ಸಂಪುಟದ ಸಹೋದ್ಯೋಗಿ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬದವರ ಬಗ್ಗೆ ಆರ್‌ಎಸ್‌ಎಸ್ ಪ್ರಾಯೋಜಿತ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ʼಎಕ್ʼ ಖಾತೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಬಲಿಸಿ ಮಾಹಿತಿ ಹಂಚಿಕೊಂಡಿರುವ ಅವರು, ʼಪ್ರಿಯಾಂಕ್ ಖರ್ಗೆ ಅವರು ಯಾವುದೆ ಗೊಡ್ಡು ಬೆದರಿಕೆಗಳಿಗೆ ಅಂಜುವುದೂ ಇಲ್ಲ, ಅಳುಕುವುದೂ ಇಲ್ಲ. ಆದರೆ ಅವರ ವಿರುದ್ಧ ಬಳಸಲಾಗಿರುವ ಅಸಾಂವಿಧಾನಿಕ ಪದಗಳನ್ನು ಯಾವುದೇ ನಾಗರಿಕ ಸಮಾಜ ಒಪ್ಪುವುದಿಲ್ಲ. ನಾವೆಲ್ಲರೂ ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ನಿಲ್ಲುತ್ತೇವೆʼ ಎಂದು ಸ್ಪಷ್ಟಪಡಿಸಿದ್ದಾರೆ.
ʼಆರ್‌ಎಸ್‌ಎಸ್ ಅಂಧ ಭಕ್ತರ, ಇಂತಹ ಅಸಹ್ಯ, ಅತಿರೇಕದ, ಸರ್ವಾಧಿಕಾರಿ ವರ್ತನೆ ಅವರ ನಿಜ ಬಣ್ಣ ಬಯಲು ಮಾಡಿದೆ. ನಿಂದಕರು ಹಾಗೂ ಅವರ ಹಿಂದಿರುವ ಶಕ್ತಿ ಯಾರೆಂದು ಪತ್ತೆ ಹಚ್ಚಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕುʼ ಸಚಿವ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.





