ಧಾರವಾಡಕ್ಕೂ ಟಿಪ್ಪುವಿಗೂ ಒಂದು ರೀತಿಯ ನಂಟಿದೆ. ಟಿಪ್ಪು ಸುಲ್ತಾನ್ ಆಡಳಿತ ಅವಧಿಯಲ್ಲಿ ಅನೈತಿಕ, ಅವ್ಯವಹಾರಕ್ಕೆ ಅವಕಾಶ ಇರಲಿಲ್ಲ. ವಿಶೇಷವಾಗಿ ಹೇಳಬೇಕೆಂದರೆ ಶುಕ್ರವಾರಪೇಟೆಯಲ್ಲಿ ಸ್ವತಃ ವೆಂಕಟೇಶ್ವರ ದೇವರ ಮೂರ್ತಿಯನ್ನು ಟಿಪ್ಪು ಸುಲ್ತಾನ್ ಪ್ರತಿಷ್ಠಾಪಿಸಿದರು ಎಂದು ನಗರದ ಅಂಜುಮನ್ ಕಾಲೇಜಿನಲ್ಲಿ ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಯುವಜನರ ಪಾತ್ರ ಘೋಷವಾಕ್ಯದಲ್ಲಿ ಹಮ್ಮಿಕೊಂಡಿದ್ದ ‘ವಿಚಾರ ಸಂಕೀರ್ಣ’ ಕಾರ್ಯಕ್ರಮದಲ್ಲಿ ಪ್ರೊ. ಎ.ವಾಯ್.ಸಾವಂತ್ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಂಜುಮನ್ ಇಸ್ಲಾಂ ಸಂಸ್ಥೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರವೀರ ಟಿಪ್ಪು ಸುಲ್ತಾನ್ ಯುವ ಮಂಡಳ, ಇಂಡಿಪೆಂಡೆಂಟ್ ಸಂಗ್ರಾಮ್ ನ್ಯೂಸ್ ಟ್ರಸ್ಟ್, ಈದಿನ.ಕಾಮ್ ಡಿಜಿಟಲ್ ಮಾಧ್ಯಮ, ಕನ್ನಡ ಸಾಹಿತ್ಯ ವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆ, ಸ್ಟಾರ್ 74 ನ್ಯೂಸ್ ಚಾನೆಲ್ ಇವರ ಸಂಯುಕ್ತಾಶ್ರಯದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಮತ್ತು ರಾಷ್ಟ್ರವೀರ ದೇಶಪ್ರೇಮಿ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ವೇಳೆ ಮಾತನಾಡುತ್ತಾ, ಟಿಪ್ಪು ಸುಲ್ತಾನ್ ವೆಂಕಟೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಪೂಜಾರಿಯನ್ನು ನೇಮಿಸಿದರು. ಮತ್ತು ದೇವಸ್ಥಾನಕ್ಕಾಗಿ ನವಲೂರಿನಲ್ಲಿ 4 ಎಕರೆ ಜಮೀನು ದಾನ ಮಾಡಿದರು. ಅದರ ಜೊತೆಗೆ ಟಿಪ್ಪು ಭೂಮಾಪನ ವ್ಯವಸ್ಥೆಯನ್ನು ಧಾರವಾಡದಲ್ಲಿ ಮೊಟ್ಟಮೊದಲಿಗೆ ಜಾರಿಗೆ ತಂದರು. ಮೊಟ್ಟಮೊದಲಿಗೆ ಕ್ಷಿಪಣಿ ಪ್ರಯೋಗವನ್ನು ಪ್ರಾರಂಭಿಸಿದ್ದು ಟಿಪ್ಪು. ವಿದೇಶಿಗರು ನೇರವಾಗಿ ನಮ್ಮ ರಾಜ್ಯಕ್ಕೆ ಬರಬಾರದು ಎಂಬ ಉದ್ದೇಶದಿಂದ ಕಾರವಾರದಲ್ಲಿ ಸೀ-ಬರ್ಡ್ ನೌಕಾಲಯವನ್ನು ನಿರ್ಮಿಸಿದರು ಎಂದು ಮೋಡಿ ಲಿಪಿಯ ಮೂಲಕ ಟಿಪ್ಪುವಿನ ಇತಿಹಾಸವನ್ನು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕನ್ನಡ ಪ್ರೇಮಿ ಟಿಪ್ಪು ಸುಲ್ತಾನ್ ಅವರ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು. ಅವರು ಆದರ್ಶದ ವ್ಯಕ್ತಿಯಾಗಿದ್ದು, ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕು. ಮತ್ತು ಎಲ್ಲ ಧರ್ಮಗಳು ಒಗ್ಗಟ್ಟಾಗಿ ಬದುಕುವುದನ್ನು ಕಲಿಸುತ್ತವೆ ಎಂದು ಹೇಳಿದರು.
ಇದನ್ನೂ ಓದಿ ಧಾರವಾಡ | ಕನ್ನಡಿಗರು ಭಾಷೆ, ಸಂಸ್ಕೃತಿಯ ಬಗ್ಗೆ ಉದಾಸೀನ ಮನೋಭಾವ ಹೊಂದಬಾರದು: ಡಾ. ಮಹೇಶ ವಾಳ್ವೇಕರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಎಮ್ ಕೆ ನದಾಫ್, ಕುಮಾರಿ ಮುಸ್ಕಾನ್ ನದಾಫ್, ಮಹಮ್ಮದ ಅಲಿ ಗುಡೂಭಾಯಿ, ಅಶ್ರಫ್ ಕಲಘಟಗಿ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಸಿದ್ದರು. ಪ್ರಮೀಳಾ ಜಕ್ಕಣ್ಣವರ್ ಭಾವೈಕ್ಯತೆಯ ಗೀತೆಯನ್ನು ಹಾಡಿದರು. ಅನಿಲ್ ಮೈತ್ರಿ ಮತ್ತು ಸಂಗಡಿಗರು ಟಿಪ್ಪು ಸುಲ್ತಾನ್ ಲಾವಣಿ ಪದಗಳನ್ನು ಹಾಡುವುದರ ಜೊತೆಗೆ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಸಾಪ ತಾಲೂಕು ಅಧ್ಯಕ್ಷ ಮಹಾಂತೇಶ್ ನರೇಗಲ್ ನಿರೂಪಿಸಿದರು.





