ಧಾರವಾಡದ ಹೃದಯಭಾಗದಲ್ಲಿ ಕಡಪಾ ಮೈದಾನದಲ್ಲಿ ನಿರ್ಮಾಣಗೊಂಡ ಖ್ಯಾತ ಸಂಗೀತಗಾರ ಡಾ. ಮಲ್ಲಿಕಾರ್ಜುನ ಮನಸೂರ ಹೆಸರಿನ ಕಲಾಭವನ ಸುಮಾರು 15 ವರ್ಷಗಳಿಂದ ಯಾವುದೇ ಉಪಯೋಗಕ್ಕೆ ಬಾರದೆ ಮುಚ್ಚಿತ್ತು. ಈ ಕುರಿತು ಈದಿನ.ಕಾಮ್ ವರದಿಯನ್ನೂ ಪ್ರಕಟ ಮಾಡಿತ್ತು. ಇದೀಗ ಭವನದ ಕಾಯಕಲ್ಪಕ್ಕೆ ಯೋಜಿಸಲಾಗಿದ್ದು, ಶಾಸಕ ಅರವಿಂದ ಬೆಲ್ಲದ್ ಅವರು 2 ಕೋಟಿ ವೆಚ್ಚದಲ್ಲಿ ಕಲಾಭವನ ದುರಸ್ತಿ ಮಾಡಲು ಮಹಾನಗರ ಪಾಲಿಕೆಗೆ ಸೂಚನೆ ನೀಡಿದ್ದಾರೆ.
ಸಾವಿರಾರು ಕಲಾವಿದರಿಗೆ ವೇದಿಕೆಯಾಗಿದ್ದ ಕಲಾಭವನಕ್ಕೆ ಈ ಹಿಂದೆ ನಡೆದ ದುರಸ್ತಿಯಲ್ಲಿ ಹೈಟೆಕ್ ಸ್ಪರ್ಶ ನೀಡಲಾಗಿತ್ತು. ಆಗ ಬಾಡಿಗೆಯೂ ದುಬಾರಿಯಾಯ್ತು. ಇದರಿಂದ ಬಡ ಕಲಾವಿದರಿಗೆ ಸಾಕಷ್ಟು ತೊಂದರೆ ಉಂಟಾಗತೊಡಗಿತು. ಮತ್ತು ಯಾರೂ ಇದರ ಟೇಂಡರ್ ತೆಗೆದುಕೊಳ್ಳಲು ಮುಂದೆ ಬರುತ್ತಿರಲಿಲ್ಲ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಕಲಾಭವನ ಯಾವುದೇ ಉಪಯೋಗಕ್ಕೆ ಬಾರದೇ ಸಂಪೂರ್ಣ ಮುಚ್ಚಿತ್ತು.

ಈ ಕುರಿತು ಕಳೆದ ಅಕ್ಟೋಬರ್ 31 ರಂದು ವಿಡಿಯೋ ಸುದ್ಧಿ ಹಾಗೂ ವೆಬಸೈಟ್ ಸುದ್ದಿ ʼಈದಿನʼದಲ್ಲಿ ಪ್ರಕಟಗೊಳಿಸಿ, ಅಧಿಕಾರಿಗಳ ಹಾಗೂ ಶಾಸಕ ಅರವಿಂದ ಬೆಲ್ಲದ್ ಅವರ ಗಮನಕ್ಕೆ ತರಲಾಗಿತ್ತು. ಇದೀಗ ಅವರು ಮುತುವರ್ಜಿ ವಹಿಸಿ ಕಲಾಭವನಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. 2 ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಾಸಕ ಬೆಲ್ಲದ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಮೇಯರ್ ಜ್ಯೋತಿ ಪಾಟೀಲ್ ಇನ್ನಿತರ ಅಧಿಕಾರಿಗಳು ಒಳಪ್ರವೇಶ ಮಾಡಿದಾಗ; ಮೇಲ್ಛಾವಣಿಗೆ ಹೊಂದಿಸಿದ್ದ ಪಿಓಪಿಯು ಕುಸಿದು ಬೀಳುತ್ತಿರುವುದು ಕಂಡುಬಂದಿದೆ. ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಈದಿನ.ಕಾಮ್ ವರದಿ ಹಿನ್ನೆಲೆ ನಗರದ ಕಲಾವಿದರು ಸಹಿತ ಎಚ್ಚೆತ್ತುಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದ್ದರು. ಈ ಕೂಡಲೇ ಕಲಾಭವನ ದುರಸ್ಥಿಗೊಳಿಸಿ ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಒಟ್ಟಿನಲ್ಲಿ ಸುಮಾರು ವರ್ಷಗಳಿಂದ ಬಾಗಿಲು ತೆರೆಯದೆ ಮುಚ್ಚಿಕೊಂಡಿದ್ದ ಕಲಾಭವನವು ಇದೀಗ ದುರಸ್ತಿಗೆ ಸಿದ್ಧವಾಗಿದೆ.


ಇದನ್ನೂ ಓದಿ: ಧಾರವಾಡ | ಚಕ್ಕಡಿಗೆ ಹಿಂಬದಿಯಿಂದ ಕಾರು ಡಿಕ್ಕಿ; ಜೋಡೆತ್ತು ಸ್ಥಳದಲ್ಲೇ ಸಾವು
ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, “ಪಾಲಿಕೆಯಿಂದ ಕಲಾಭವನ ದುರಸ್ಥಿಗೆ 92 ಲಕ್ಷ ರೂಪಾಯಿ ಕೊಟ್ಟಿದ್ದಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಸಭೆ ಕರೆಯಿಸಿ ಕೂಡಲೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಆ ಪ್ರಕಾರ 2-3 ತಿಂಗಳಿನಲ್ಲಿ ದುರಸ್ಥಿ ಕಾರ್ಯವನ್ನು ಪ್ರಾರಂಭಿಸಲಾಗುವುದು. ಮತ್ತು ಕಲಾಭವನ ತೆರೆಯಲು ಕಾರ್ಯೊನ್ಮುಖರಾಗುತ್ತೇವೆ” ಎಂದು ತಿಳಿಸಿದರು.
ಈ ಕ್ರಮದಿಂದ ಕಲಾವಿದರಲ್ಲಿ ಕಲಾಭವನದಲ್ಲಿ ಮತ್ತೆ ಜೀವ ತುಂಬಿಕೊಳ್ಳುವ ನಿರೀಕ್ಷೆ ಮೂಡಿದೆ. ಬಡ ಹಾಗೂ ಯುವ ಕಲಾವಿದರಿಗೆ ಇದು ಪುನಃ ಸೃಜನಾತ್ಮಕ ವೇದಿಕೆಯಾಗುವ ಸಾಧ್ಯತೆ ಇದೆ. ಅಧಿಕಾರಿಗಳ ಸಮಯೋಚಿತ ಸ್ಪಂದನೆ ಶ್ಲಾಘನೀಯ. ಆದರೆ ದುರಸ್ತಿ ನಂತರವೂ ನಿರ್ವಹಣೆಯ ಕೊರತೆಯಾದರೆ ಹಳೆಯ ಸ್ಥಿತಿಯೇ ಮರಳಿ ಬರುವ ಭೀತಿ ಇದೆ. ಕಲಾಭವನದ ನವೀಕರಣದೊಂದಿಗೆ ಸಂಸ್ಕೃತಿಯ ಸಿರಿವಂತಿಕೆಗೆ ಹೊಸ ಬಾಗಿಲು ತೆರೆದುಕೊಳ್ಳಲಿ ಎಂಬುದು ಕಲಾಪ್ರೇಮಿಗಳ ಆಶೆ.





