ಹವಾಮಾನ ಬದಲಾವಣೆಯಿಂದ ಉಂಟಾಗುವ ಅನಿಶ್ಚಿತತೆಯು ಕೃಷಿ ವಲಯಕ್ಕೆ ದೊಡ್ಡ ಸವಾಲಾಗಿದ್ದು, ಸರ್ಕಾರ ಮತ್ತು ಕೃಷಿ ಇಲಾಖೆಯು ತಕ್ಷಣ ಬೆಳೆನಷ್ಟ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ, ಬೆಳೆವಿಮೆ ಒದಗಿಸಬೇಕು.
ಕೋಲಾರ ಜಿಲ್ಲೆಯ ಎಲ್ಲ ಬಹುತೇಕ ರೈತರು ರಾಗಿ ಹೊಲಗಳಲ್ಲಿ ಸಾಲು ಸಾಲು ಅವರೆ, ತೊಗರಿ, ಅಲಸಂದೆ ಬೆಳೆ ಹಾಕಿದ್ದು, ಮಳೆ ಆಶ್ರಯಿಸಿ ಬಿತ್ತನೆ ಮಾಡಿದ್ದಾರೆ. ಹವಾಮಾನ ವೈಪರೀತ್ಯದಿಂದ ಅವರೆ ಮತ್ತು ತೊಗರಿ ಹೂಗಳು ಉದುರುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ದೀಪಾವಳಿ ಬಳಿಕ ಆರಂಭವಾಗುವ ಚಳಿಯ ವಾತಾವರಣಕ್ಕೆ ಅವರೆ ಗಿಡದ ತುಂಬಾ ಹೂಗಟ್ಟಿದ್ದು, ಹೊಲದಲ್ಲಿರುವ ಅವರೆ, ತೊಗರಿ ಗಿಡಗಳು ಮುತ್ತಿನ ಮಣಿ ಪೋಣಿಸಿದಂತೆ ಕಾಣುತ್ತಿದ್ದವು. ಆದರೆ, ಈ ವರ್ಷ ಹೆಚ್ಚಾಗಿ ಮೋಡ ಕವಿದ ವಾತಾವರಣ, ತುಂತುರು ಮಳೆ ಸುರಿದ ಕಾರಣ ಗಿಡಗಳಲ್ಲಿನ ಹೂವುಗಳು ಉದುರಿ ಬರೀ ಕಡ್ಡಿಗಳು ನಿಂತಿವೆ. ರೈತರಿಗೆ ಈ ಬೆಳೆಯೂ ಕೈಕೊಡುವಂತಾಗಿದ್ದು, ಆತಂಕ ಎದುರಾಗಿದೆ.
ಕೋಲಾರ ಜಿಲ್ಲೆಯಲ್ಲಷ್ಟೇ ಅಲ್ಲದೆ ಕೆಲವು ಜಿಲ್ಲೆಗಳಲ್ಲಿಯೂ ಅವರೆ ಮತ್ತು ತೊಗರಿಯನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯಲಾಗುತ್ತದೆ. ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ರಾಗಿ, ಶುಂಠಿ, ಜೋಳ ಸೇರಿದಂತೆ ಇತರೆ ಬೆಳೆಗಳ ನಡುವೆ ಅವರೆ-ತೊಗರಿ ಬೆಳಯನ್ನು ಮಿಶ್ರ ಬೆಳೆಯಾಗಿ ಬಿತ್ತನೆ ಮಾಡಲಾಗುತ್ತದೆ.
ಅಕ್ಟೋಬರ್ ಮೊದಲ ವಾರದಲ್ಲಿ ಉತ್ತಮ ಮಳೆಯಾಯಿತು. ನವೆಂಬರ್ ತಿಂಗಳ ಎರಡನೇ ವಾರದಿಂದ ರಾತ್ರಿ ತಾಪಮಾನ 10 ಡಿಗ್ರಿಯಿಂದ 12 ಡಿಗ್ರಿಗೆ ಇಳಿದಿದೆ. ಅಧಿಕ ಮಂಜು ಬೀಳುತ್ತಿದೆ. ಅಲ್ಲದೆ ಮೋಡ, ತುಂತುರು ಮಳೆಯಾದ ಕಾರಣ ಅವರೆ-ತೊಗರಿ ಹೂವುಗಳು ಒಂದೇ ದಿನದಲ್ಲಿ ಕಪ್ಪಾಗಿ ಉದುರಿದವು. ಈಗ ಗಿಡದಲ್ಲಿ ಒಂದೇ ಒಂದು ಕಾಯಿಯೂ ಉಳಿದಿಲ್ಲ. ಹಾಗಾಗಿ ರೈತರು ಈ ಬೆಳೆಯನ್ನೂ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಒಂದು ಎಕರೆಗೆ ಕನಿಷ್ಠವೆಂದರೂ 10 ಕ್ವಿಂಟಲ್ ಅವರೆಕಾಯಿ ಬೆಳೆದು ಮಾರಾಟ ಮಾಡುತ್ತಿದ್ದ ರೈತ, ಈ ಬಾರಿ 5 ಕ್ವಿಂಟಲ್ ಬೆಳೆ ತೆಗೆಯುವುದೂ ಕಷ್ಟವೆನಿಸಿದೆ. ಕಳೆದ ವರ್ಷ ಕೆಜಿ ಅವರೆಕಾಯಿಗೆ 50ರಿಂದ 60, 70ರ ತನಕ ದರ ಸಿಕ್ಕಿತ್ತು. ಬೆಳೆ ಚೆನ್ನಾಗಿ ಬಂದರೆ ಈ ವರ್ಷ ರೈತರಿಗೆ ಪ್ರಾರಂಭದಲ್ಲಿ ಕೆಜಿಗೆ 60ರಿಂದ 70 ರೂಪಾಯಿ ಬೆಲೆ ಸಿಗುತ್ತಿತ್ತು. ಆದರೆ, ಇಳುವರಿ ಕಡಿಮೆಯಾಗುವುದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಪ್ರಾಂತ ರೈತ ಸಂಘದ ಮುಖಂಡ ನವೀನ್ ಕುಮಾರ್ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶ್ರೀನಿವಾಪುರ ತಾಲೂಕು ಮಾವಿನ ನಗರಿ ಎಂದೇ ಹೆಸರುವಾಸಿಯಾಗಿದೆ. ಇಲ್ಲಿ ಮಾವಿನ ತೋಟದಲ್ಲಿ ಸಪೋಟ ಗಿಡಗಳು ಇವೆ. ಅದರೊಳಗೆ ತೊಗರಿ ಮತ್ತು ಅವರೆ ಬೆಳೆಯನ್ನು ಮಿಶ್ರ ಬೆಳೆಯನ್ನಾಗಿ ಬಿತ್ತನೆ ಮಾಡಲಾಗುತ್ತದೆ. ಕಳೆದ 15-20 ದಿನಗಳಿಂದ ವಿಪರೀತ ಮಂಜು ಬೀಳುತ್ತಿರುವುದರಿಂದ ಹೂವುಗಳ ಸುತ್ತಲೂ ಕಪ್ಪು ಕರೆಗಟ್ಟಿದಂತಾಗಿದೆ. ಬಿಸಿಲು ಇಲ್ಲದಿದ್ದರೆ ಕಾಯಿಗಟ್ಟಲೂ ಬಿಡುವುದಿಲ್ಲ. ಇರುವ ಹೂವುಗಳೂ ಉದರಿಹೋಗುತ್ತವೆ. ಈಗ ಬಂದಿರುವ ಕಾಯಿಗಳು ಬಲಿಷ್ಠವಾಗಿಲ್ಲ. ಕಾಳುಗಳೆಲ್ಲವೂ ಒಳಗಡೆ ಕರಗಿವೆ. ತೆಗೆದುಕೊಳ್ಳುವವರಿಗೂ ಕಷ್ಟವಾಗುತ್ತದೆ. ಮಾರುವವರಿಗೂ ಕಷ್ಟವಾಗುತ್ತದೆ. ಈಗ ಒಂದು ಸುತ್ತು ಹೂವು ಉದುರಿವೆ. ಮತ್ತೆ ಹೊಸ ಚಿಗುರು ಬಂದು ಅದರಲ್ಲಿ ಕಾಯಿಗಳು ಹೇಗೆ ಬರುತ್ತವೆ ಎಂಬುದನ್ನು ನೋಡಬೇಕು. ಅದರ ಮೇಲೆ ಬೆಲೆ ನಿರ್ಧಾರವಾಗುತ್ತದೆ. ಈ ಸದ್ಯ 50-60 ರೂಪಾಯಿ ಬೆಲೆ ಇದೆ. ಆದರೆ ಕಾಯಿಯೂ ಇಲ್ಲ, ಇರುವ ಕಾಯಿಗಳು ಕಾಳುಗಟ್ಟಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಈ ಬಾರಿ ಮಾವಿಗೂ ಬೆಂಬಲ ಬೆಲೆ ಇಲ್ಲದೆ ಹಣ್ಣುಗಳನ್ನು ಬೀದಿಗೆ ಸುರಿದು ಪ್ರತಿಭಟನೆ ನಡೆಸಿದೆವು. ಹಣ್ಣು ಕಟಾವು ಮಾಡಿದ ಕೂಲಿ ಕೊಡುವಷ್ಟು ಬೆಲೆ ಇಲ್ಲದ ಕಾರಣ ಹಣ್ಣುಗಳನ್ನು ಮರದಲ್ಲಿಯೇ ಬಿಡಲಾಯಿತು. ಇದೀಗ ಅವರೆ ಸ್ಥಿತಿ ಹೀಗಾಗಿದೆ. ರೈತರು ಬದುಕುವುದೇ ಕಷ್ಟವಾಗಿದೆ. ಒಂದೆಡೆ ಹವಾಮಾನ ವೈಪರೀತ್ಯ, ಇನ್ನೊಂದೆಡೆ ಸರ್ಕಾರಗಳಿಂದ ಸಿಗದ ಬೆಂಬಲ ಬೆಲೆ, ಸಂತ್ರಸ್ತರ ಕೈಗೆ ಸಿಗದ ಪರಿಹಾರ ಇವೆಲ್ಲವನ್ನೂ ನೋಡಿದರೆ ರೈತರು ಕೃಷಿಯನ್ನು ಮಾಡುವುದೇ ಬೇಡ ಎನ್ನುವಷ್ಟರ ಮಟ್ಟಿಗೆ ಅನಿಸಿಬಿಟ್ಟಿದೆ. ಹಾಗಾಗಿ ಯಾವುದೇ ಸರ್ಕಾರಗಳಿರಲಿ ರೈತರಿಗೆ ಬೆನ್ನೆಲುಬಾಗಿ ನಿಲ್ಲಬೇಕು, ರೈತರನ್ನು ಪ್ರೋತ್ಸಾಹಿಸಬೇಕು” ಎಂದು ಮನವಿ ಮಾಡಿದರು.
ದುಬಾರಿ ವೆಚ್ಚ
ಅವರೆ ಬೇಸಾಯಕ್ಕೆ ಬಳಸುವ ರಸಗೊಬ್ಬರ, ಔಷಧ, ಕೂಲಿ ಮತ್ತಿತರ ಸಾಮಗ್ರಿಗಳ ವೆಚ್ಚವೂ ದುಬಾರಿಯಾಗಿದೆ. ಆದರೂ ರೈತರು ಕಷ್ಟಪಟ್ಟು ಬೆಳೆ ಬೆಳೆದಿದ್ದಾರೆ. ಪ್ರಾರಂಭದಲ್ಲಿ ಉತ್ತಮ ಹದವಾದ ಮಳೆ ಬಂದ ಕಾರಣ ಬೆಳೆಯೂ ಉತ್ತಮವಾಗಿ ಬಂದಿತ್ತು. ಆದರೆ ಕಳೆದ ಒಂದು ವಾರದಿಂದ ಚಂಡುಮಾರುತ ಪ್ರಭಾವದಿಂದ ಚಳಿ ಮತ್ತು ಮಳೆಯ ಕಾರಣ ಗಿಡದಲ್ಲಿರುವ ಹೂವು ಉದುರುತ್ತಿರುವುದರಿಂದ ರೈತರಿಗೆ ನಷ್ಟವನ್ನು ಉಂಟುಮಾಡಿದೆ.

ಅಲ್ಲದೆ ಜಿಲ್ಲೆಯ ಹಲವು ಕಡೆ ಬೆಳೆಗೆ ನವಿಲುಗಳ ಹಾವಳಿ ಹೆಚ್ಚಾಗಿದೆ. ಬಿತ್ತನೆಯಾಗಿ ಮೊಳಕೆಯೊಡೆಯುವ ಸಮಯದಲ್ಲಿ ನವಿಲು ಇತರೆ ಪಕ್ಷಿಗಳು ಜಮೀನುಗಳಿಗೆ ನುಗ್ಗಿ ಮೊಳಕೆಯನ್ನೇ ತಿಂದು ಬೆಳೆ ಹಾಳು ಮಾಡಿವೆ. ಯಾವುದೇ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಿದರೂ ನವಿಲುಗಳು ಹೆಕ್ಕುವುದರಿಂದ, ಅವುಗಳಿಗೆ ಹೊಡೆಯುವುದು-ಕೊಲ್ಲುವುದು ಅಪರಾಧವಾಗಿರುವುದರಿಂದ ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ರೈತರಿಗೆ ಸಂಜೆಯವರೆಗೆ ಜಮೀನಿನಲ್ಲಿ ನವಿಲುಗಳನ್ನು ಕಾಯುವುದೇ ಒಂದು ಕಾಯಕವಾಗಿದೆ.
ಮೂರು ರಾಜ್ಯಗಳಿಗೆ ಪೂರೈಕೆ
ಜಿಲ್ಲೆಯಲ್ಲಿ ಬೆಳೆಯುವ ಅವರೆಕಾಯಿಗೆ ಚೆನ್ನೈ, ಆಂಧ್ರ ಪ್ರದೇಶದ ವಿಜಯವಾಡ ಮತ್ತು ವಿಶಾಖಪಟ್ಟಣಂ ಹಾಗೂ ಬೆಂಗಳೂರು ನಗರಗಳಲ್ಲಿ ಹೆಚ್ಚು ಬೇಡಿಕೆ ಇದೆ. ಜತೆಗೆ ಬೇಕರಿ ತಿನಿಸುಗಳಿಗೆ ಹೆಚ್ಚು ಅವರೆಕಾಳು ಬಳಸುತ್ತಾರೆ.
“ಈ ವರ್ಷ ಉತ್ತಮವಾಗಿ ಅವರೆಕಾಯಿ ಇಳುವರಿ ಬರುವಂತಹ ಎಲ್ಲ ಲಕ್ಷಣಗಳು ಇದ್ದವು. ಚಂಡುಮಾರುತದ ಪರಿಣಾಮವಾಗಿ ಹದಿನೈದು ದಿನಗಳ ಕಾಲ ಸೂರ್ಯನ ಬೆಳಕು ಬೀಳದೆ, ತುಂತುರು ಮಳೆ, ಮೋಡ ಕವಿದ ವಾತಾವರಣದಿಂದ ತರಕಾರಿ ಬೆಳೆ, ಅವರೆ, ತೊಗರಿ ಗಿಡದಲ್ಲಿ ಹೂವುಗಳು ಉದುರುತ್ತಿವೆ. ಇದರಿಂದ ಬೆಳೆ ಕುಂಠಿತವಾಗುತ್ತಿದೆ. ಸಾಲ ಮಾಡಿ ಬೆಳೆ ಬೆಳದರೂ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಹಾಗಾಗಿ ಇರುವ ಬೆಳೆಗಾದರೂ ಬೆಂಬಲ ಬೆಲೆ ನೀಡಬೇಕು. ಸಂಕಷ್ಟಕ್ಕೆ ಒಳಗಾಗಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕಿದೆ” ಎಂಬುದು ಅವರೆ ಬೆಳೆಗಾರರ ಮನವಿಯಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸುಮಾರು 1.5 ಲಕ್ಷ ಹೆಕ್ಟೇರಿಗೂ ರಾಗಿ ಮತ್ತು ಮಾವಿನ ಬೆಳೆ ಪ್ರದೇಶದಲ್ಲಿ ಮಿಶ್ರ ಬೆಳೆ ಬೆಳೆಯಲಾಗಿದೆ. ಇದರಲ್ಲಿ ಶೇ.70ರಿಂದ 75ರಷ್ಟು ಪ್ರದೇಶದಲ್ಲಿ ಅವರೆ ಮತ್ತು ತೊಗರಿ ಬೆಳೆ ಗಂಭೀರ ಹಾನಿಗೊಳಗಾಗಿದೆ. ನವೆಂಬರ್-ಡಿಸೆಂಬರ್‌ನಲ್ಲಿ ರಾತ್ರಿ ತಾಪಮಾನ ಅತ್ಯಂತ ಕಡಿಮೆ(9-12° ಸೆಲ್ಸಿಯಸ್)
ಭಾರೀ ಮಂಜು ಮತ್ತು ತಂಪು ಗಾಳಿ ಬೀಸುವಂತಹ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಅವರೆ ಮತ್ತು ತೊಗರಿ ಸಸ್ಯಗಳು ಹೂ ಬಿಡುವ ಸಮಯದಲ್ಲಿ ಇಂತಹ ಹವಾಮಾನ ಬದಲಾವಣೆಯಾಗುವುದರಿಂದ ಹೂವು-ಕಾಯಿ ಉದುರಿಹೋಗುತ್ತವೆ. ಈ ಬಾರಿ ತಾಪಮಾನದ ಏರಿಳಿತ ಅತ್ಯಂತ ತೀವ್ರವಾಗಿದೆ. ಅವರೆ ಮತ್ತು ತೊಗರಿ ಸಸ್ಯಗಳು 15 ಡಿಗ್ರಿಗಿಂತ ಕಡಿಮೆ ತಾಪಮಾನದಲ್ಲಿ ಹೂವಿನ ಪರಾಗ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದಾಗಿ ಶೇ.80-90ರಷ್ಟು ಫಲವತ್ತತೆಯಲ್ಲಿ ಏರಿಳಿತವಾಗುತ್ತದೆ. ಇದು ಹವಾಮಾನ ಬದಲಾವಣೆಯಿಂದ ಉಂಟಾಗುತ್ತದೆ.
ಎಕರೆಗೆ ಸುಮಾರು 4ರಂದ 5 ಕ್ವಿಂಟಲ್ ಅವರೆ/ತೊಗರಿ ಬೆಳೆ ಬರಬೇಕಿತ್ತು. ಆದರೆ ಈ ಬಾರಿ 1 ಕ್ವಿಂಟಲ್ ಬರುವುದೂ ಕೂಡ ಕಷ್ಟಕರವಾಗಿದೆ. ಪ್ರತಿ ಎಕರೆಗೆ ಬಿತ್ತನೆ ಬೀಜ, ಗೊಬ್ಬರ, ಕೂಲಿ ಖರ್ಚು ಸೇರಿದಂತೆ ಇತರೆ ಖರ್ಚುಗಳಿಗೆ ₹40,000ದಿಂದ ₹50,000 ನಷ್ಟವಾಗುವ ಸಾಧ್ಯತೆಯಿದೆ.
ಅವರೆಕಾಳು ಚಳಿಗಾಲದ ರುಚಿ ಮತ್ತು ಆರೋಗ್ಯದ ಖಜಾನೆ: ಹವಾಮಾನ ವೈಪರೀತ್ಯಕ್ಕೆ ಬೆಳೆ ಕುಂಠಿತ
ಚಳಿಗಾಲ ಬಂದರೆ ಮಾರುಕಟ್ಟೆಗಳಲ್ಲಿ ಅವರೆಕಾಯಿ(ಅವರೆಕಾಳು) ಹೇರಳವಾಗಿ ಲಭ್ಯವಾಗುತ್ತದೆ. ಈ ಕಾಳು ಕೇವಲ ರುಚಿಕರವಲ್ಲ, ಆರೋಗ್ಯಕ್ಕೂ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಬೆಂಗಳೂರು ಮತ್ತು ಮೈಸೂರು ಪ್ರದೇಶದಲ್ಲಿ ʼಅವರೆಕಾಳು ಮೇಳʼ ಕೂಡ ನಡೆಯುತ್ತದೆ. ಅಲ್ಲಿ ಈ ಕಾಳಿನಿಂದ ಮಾಡಿದ ನಾನಾ ಭಕ್ಷ್ಯಗಳು ತುಂಬಾ ರುಚಿಕರವಾಗಿರುತ್ತವೆ. ಆದರೆ, ಈ ಬಾರಿ ಉತ್ತಮ ಗುಣಮಟ್ಟ ಮತ್ತು ಹೇರಳವಾದ ಅವರೆ ಕಾಳು ಲಭ್ಯವಾಗದಿರುವ ಕಾರಣ ರೈತರಂತೆ ಗ್ರಾಹಕರಿಗೂ ನಿರಾಸೆಯಾಗಿದೆ.
ಅವರೆಕಾಳಿನ ಪೌಷ್ಟಿಕಾಂಶಗಳು
ಅವರೆಕಾಳು ಪ್ರೋಟೀನ್, ಫೈಬರ್, ವಿಟಮಿನ್‌ಗಳು(ವಿಟಮಿನ್ ಸಿ, ಬಿ-ಕಾಂಪ್ಲೆಕ್ಸ್, ಫೋಲೇಟ್) ಮತ್ತು ಖನಿಜಾಂಶಗಳ(ಕಬ್ಬಿಣ, ತಾಮ್ರ, ಮ್ಯಾಂಗನೀಸ್, ಜಿಂಕ್) ಸಮೃದ್ಧ ಮೂಲವಾಗಿದೆ. 100 ಗ್ರಾಂ ಒಣ ಅವರೆಕಾಳಿನಲ್ಲಿ ಸುಮಾರು 22 ಗ್ರಾಂ ಪ್ರೋಟೀನ್, ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೊರಿ ಇರುತ್ತದೆ. ಆದರೆ, ಈ ಬಾರಿ ಈ ಅಂಶಗಳು ಉತ್ತಮ ರೀತಿಯಲ್ಲಿ ಸಿಗಂತಾಗಿದೆ.
ಆರೋಗ್ಯ ಪ್ರಯೋಜನಗಳು
ಅವರೆ ಕಾಳಿನಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಮಲಬದ್ಧತೆ ತಡೆಯುತ್ತದೆ.
ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ, ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್(LDL) ಕಡಿಮೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣವಾಗುತ್ತದೆ. ಕ್ಯಾಲ್ಸಿಯಂ, ಪಾಸ್ಫರಸ್ ಮತ್ತು ಪೊಟ್ಯಾಷಿಯಂ ಅಂಶಗಳಿಂದ ಮೂಳೆಗಳನ್ನು ಬಲಪಡಿಸುತ್ತದೆ, ಸ್ನಾಯು ಸೆಳೆತ ತಡೆಗಟ್ಟಬಹುದು. ಉತ್ಕರ್ಷಣ ನಿರೋಧಕಗಳು(ಆಂಟೀಆಕ್ಸಿಡೆಂಟ್ಸ್) ಮತ್ತು ವಿಟಮಿನ್ ಸಿ ಇರುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜತೆಗೆ ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಪ್ರೋಟೀನ್ ಇರುವುದರಿಂದ ತೂಕ ಇಳಿಸಲು ಸಹಾಯ ಮಾಡುತ್ತದೆ. ರಕ್ತಹೀನತೆ ತಡೆಗಟ್ಟಲು ಹಾಗೂ ಮಾನಸಿಕ ಆರೋಗ್ಯಕ್ಕೆ ಉತ್ತಮ ಆಹಾರ ಪದಾರ್ಥವಾಗಿದೆ.
ಕೋಲಾರ ಜಿಲ್ಲೆಯ ರೈತರು ರಾಗಿ ಹೊಲಗಳಲ್ಲಿ ಅವರೆ, ತೊಗರಿ ಮತ್ತು ಅಲಸಂದೆಯಂತಹ ದ್ವಿದಳ ಧಾನ್ಯಗಳನ್ನು ಸಾಂಪ್ರದಾಯಿಕವಾಗಿ ಬೆಳೆದು, ಮಳೆಯಾಶ್ರಿತ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಇತ್ತೀಚಿನ ಹವಾಮಾನ ವೈಪರೀತ್ಯ, ಮೋಡ ಕವಿದ ವಾತಾವರಣ, ಚಳಿ ಮತ್ತು ತುಂತುರು ಮಳೆಯಿಂದ ಅವರೆ ಹಾಗೂ ತೊಗರಿ ಬೆಳೆಗಳ ಹೂವುಗಳು ಉದುರುತ್ತಿವೆ. ಕಾಯಿ ಕೊರಕ ಮತ್ತು ಕೀಟ ಬಾಧೆ ಹೆಚ್ಚಾಗಿ ಉತ್ಪಾದನೆಯಲ್ಲಿ ಭಾರೀ ನಷ್ಟ ಉಂಟುಮಾಡಿದೆ. ಇದರಿಂದ ರೈತರು ಆರ್ಥಿಕವಾಗಿ ಕಂಗಾಲಾಗಿ, ಸಾಲದ ಬಾಧೆ ಮತ್ತು ಕುಟುಂಬದ ಜೀವನೋಪಾಯಕ್ಕೆ ತೀವ್ರ ಸವಾಲು ಎದುರಾಗಿದೆ.
ಇದನ್ನೂ ಓದಿದ್ದೀರಾ? ನುಗ್ಗೆಕಾಯಿ ಕೆಜಿಗೆ ₹700: ಬಹುದೊಡ್ಡ ಬೇಡಿಕೆ ಬರಲು ಕಾರಣವೇನು?
ಅವರೆ, ತೊಗರಿ ಬೆಳೆಗಳು ಹೂ ಬಿಡುವ ಹಾಗೂ ಕಟಾವು ಹಂತದಲ್ಲಿವೆ. ಆದರೆ ಮೋಡ ಕವಿದ ವಾತಾವರಣ, ಚಳಿ ಹಾಗೂ ತುಂತರು ಮಳೆಯಂತಹ ಹವಾಮಾನ ವೈಪರೀತ್ಯದಿಂದ ಕಾಯಿ ಕೊರಕ, ಕೀಟಬಾಧೆ ಹೆಚ್ಚಾಗುವುದರಿಂದ ಬೆಳೆಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಯಾವ ರೀತಿಯ ಔಷಧಗಳನ್ನು ಸಿಂಪಡಿಸಬೇಕು ಎಂಬುದರ ಕುರಿತು ಕೃಷಿ ವಿಜ್ಞಾನಿಗಳು, ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಬೇಕು ಎಂಬುದು ಬೆಳೆಗಾರರ ನಿರೀಕ್ಷೆಯಾಗಿದೆ.
ಹವಾಮಾನ ಬದಲಾವಣೆಯಿಂದ ಉಂಟಾಗುವ ಅನಿಶ್ಚಿತತೆಯು ಕೃಷಿ ವಲಯಕ್ಕೆ ದೊಡ್ಡ ಸವಾಲಾಗಿದ್ದು, ಸರ್ಕಾರ ಮತ್ತು ಕೃಷಿ ಇಲಾಖೆಯು ತಕ್ಷಣ ಬೆಳೆನಷ್ಟ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ, ಬೆಳೆವಿಮೆ ಒದಗಿಸಬೇಕು. ಅಲ್ಲದೆ, ರೈತರು ಭವಿಷ್ಯದಲ್ಲಿ ಹವಾಮಾನ ನಿರೋಧಕ ಬೆಳೆಗಳು ಮತ್ತು ಸುಧಾರಿತ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಇಂತಹ ಸಂಕಷ್ಟಗಳನ್ನು ಎದುರಿಸಲು ಸಿದ್ಧರಾಗಬೇಕು. ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆಯಲ್ಲ, ಬದಲಾಗುತ್ತಿರುವ ಹವಾಮಾನದಲ್ಲಿ ಕೃಷಿಯ ಸ್ಥಿರತೆಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾದ ಅಗತ್ಯತೆ ಇದೆ.





