ಪಿಕ್ನಿಕ್ಗೆ ತೆರಳಿದ್ದ 15 ಮಂದಿಯ ತಂಡದಲ್ಲಿ ಸುಮಾರು 7 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ತುಮಕೂರು ಜಿಲ್ಲೆಯ ಮಾರ್ಕೊನಹಳ್ಳಿ ಅಣೆಕಟ್ಟಿನ ಬಳಿ ನಡೆದಿದೆ. ಒಬ್ಬರನ್ನು ರಕ್ಷಿಸಲಾಗಿದೆ. ನಾಲ್ವರ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರು ಮತ್ತು ಇತರರನ್ನು ಅಮೃತೂರು ಠಾಣೆಯ ಎಎಸ್‍ಐ ಜಿಲಾನಿ ಅವರ ಸಂಬಂಧಿಗಳು ಎಂದು ಗುರುತಿಸಲಾಗಿದೆ. ಮಾಗಡಿಯಲ್ಲಿರುವ ಜಿಲಾನಿ ಅವರ ಮನೆಗೆ ಅವರ ಸಂಬಂಧಿಗಳು ಬಂದಿದ್ದರು. ಮಂಗಳವಾರ ಸಂಜೆ, ಕುಣಿಗಲ್ ತಾಲೂಕಿನಲ್ಲಿರುವ ಮಾರ್ಕೊನಹಳ್ಳಿ ಅಣೆಕಟ್ಟು ವೀಕ್ಷಿಸಲು ತೆರಳಿದ್ದರು ಎಂದು ವರದಿಯಾಗಿದೆ.
ಅಣೆಕಟ್ಟಿನ ಮುಂಭಾಗದ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ, ಸೈಫನ್ ವ್ಯವಸ್ಥೆಯು ಇದ್ದಕ್ಕಿದ್ದಂತೆ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದೆ. ನೀರಿನ ಹರಿವು ಏಕಾಏಕಿ ಹೆಚ್ಚಾಗಿದ್ದರಿಂದ, 7 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಹೇಳಲಾಗಿದೆ.
ಈ ಲೇಖನ ಓದಿದ್ದೀರಾ?: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ಪ್ರಯತ್ನ- ಭಾರತದ ಆರದ ಗಾಯ
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 7 ಮಂದಿ ಕೊಚ್ಚಿ ಹೋಗಿದ್ದಾರೆ. ಅವರಲ್ಲಿ, ಒಬ್ಬರನ್ನು ರಕ್ಷಿಸಲಾಗಿದೆ. ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಉಳಿದವರಿಗಾಗಿ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ ಎಂದು ತುಮಕೂರಿನ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ತಿಳಿಸಿದ್ದಾರೆ.
ಅಣೆಕಟ್ಟು ಎಂಜಿನಿಯರ್‌ಗಳ ಪ್ರಕಾರ, ನೀರಿನ ಹರಿವಿನಲ್ಲಿ ಹಠಾತ್ ಹೆಚ್ಚಳದಿಂದಾಗಿ ಈ ಘಟನೆ ಸಂಭವಿಸಿದೆ. ಆದರೂ ಸೈಫನ್ ಬಿಡುಗಡೆಗೆ ನಿಖರವಾದ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.




