ಒಳಮೀಸಲಾತಿಗಾಗಿ ಒತ್ತಾಯಿಸಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿ ಸ್ಥಳದಿಂದ ಹೊರಟಿರುವ ಕ್ರಾಂತಿಕಾರಿ ಪಾದಯಾತ್ರೆ ಬುಧವಾರ ಶಿರಾ ತಾಲೂಕಿಗೆ ಆಗಮಿಸಿದ್ದು, ತಾಲೂಕಿನ ತಾವರೆಕೆರೆಗೆ ಪಾದಯಾತ್ರೆ ಆಗಮಿಸುತ್ತಿದ್ದು, ಪಾದಯಾತ್ರೆಯಲ್ಲಿದ್ದ ಸುಮಾರು 8 ಮಂದಿ ಅಸ್ವಸ್ಥರಾಗಿ ಶಿರಾ ನಗರದ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ತೀವ್ರ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವ ಒಳಮೀಸಲಾತಿ ಹೋರಾಟಗಾರರ ಆರೋಗ್ಯ ವಿಚಾರಿಸಿ ಮಾತನಾಡಿದ ಒಳಮೀಸಲಾತಿ ಹೋರಾಟ ಸಮಿತಿಯ ನೇತೃತ್ವ ವಹಿಸಿರುವ ಬಿ.ಆರ್.ಭಾಸ್ಕರ್ ಪ್ರಸಾದ್, ಮಾದಿಗ ಸಮುದಾಯ ಸುಮಾರು 30 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ ಫಲವಾಗಿ ಸುಪ್ರಿಂ ಕೋರ್ಟಿನ 7 ನ್ಯಾಯಾಧೀಶರ ಪೀಠ 2024ರ ಆಗಸ್ಟ್ 01 ರಂದು ಒಳಮೀಸಲಾತಿ ಜಾರಿ ಅಯಾಯ ರಾಜ್ಯ ಸರ್ಕಾರಗಳು ಮಾಡಬಹುದು ಎಂಬ ತೀರ್ಪು ನೀಡಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂಪೇರಿಕಲ್ ಡಾಟಾ ಹೆಸರಿನಲ್ಲಿ ಒಳಮೀಸಲಾತಿ ಜಾರಿ ಮಾಡದೆ ವಿಳಂಭ ಧೋರಣೆ ಅನುಸರಿಸುತ್ತಿದೆ. ಈ ಸರ್ಕಾರಕ್ಕೆ ಸ್ವಲ್ಪವೂ ಮಾನವೀಯತೆ ಇಲ್ಲ. ಒಳಮೀಸಲಾತಿ ಹೋರಾಟಗಾರರು ಸರ್ಕಾರವನ್ನು ಎಚ್ಚರಿಸಲು ಪ್ರತಿಭಟನಾ ರೂಪವಾಗಿ ಮೊನ್ನೆ ರಕ್ತದಾನ ಮಾಡಿದ್ದೆವು. ರಕ್ತದಾನ ಮಾಡಿಯೂ ಪಾದಯಾತ್ರೆ ಮುಂದುವರೆಸಿರುವ ಕಾರಣ ಕೆಲವರು ಅಸ್ವಸ್ಥರಾಗಿದ್ದಾರೆ. ಇದಕ್ಕೆ ನಾವು ಹೆದರುವುದಿಲ್ಲ. ಈಗಾಗಲೇ ನಾವು ನಮ್ಮ ಮನೆಗಳಲ್ಲಿ ಹೇಳಿ ಬಂದಿದ್ದೇವೆ. ನಾವು ಒಳಮೀಸಲಾತಿ ಜಾರಿ ಮಾಡಿಸಿ ಮನೆಗೆ ಬರುತ್ತೇವೆ. ಇಲ್ಲವಾದರೆ ನಮ್ಮ ಹೆಣಗಳು ಮನೆಗೆ ಬರುತ್ತವೆ ಎಂದು ಹೇಳಿದ್ದಾರೆ. ನಮ್ಮ ಪ್ರಾಣ ಹೋದರೂ ಸಹ ನಾವೂ ಒಳಮೀಸಲಾತಿ ಜಾರಿಯಾಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಳಮೀಸಲಾತಿ ಹೋರಾಟದ ಪಾದಯಾತ್ರೆಯಲ್ಲಿ ಅಸ್ವಸ್ಥರಾದವರನ್ನು ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಎನ್.ಮೂರ್ತಿ, ದಲಿತ ಮುಖಂಡರಾದ ಕೊಟ್ಟ ಶಂಕರ್, ಗುಮ್ಮನಹಳ್ಳಿ ಮಂಜುನಾಥ್ ಸೇರಿದಂತೆ ಹಲವರು ಆಗಮಿಸಿ ಆರೋಗ್ಯ ವಿಚಾರಿಸಿದರು.





