ಎಸ್‌ಎಸ್‌ಐಟಿ ಕ್ಯಾಂಪಸ್ ನಲ್ಲಿ ಶಿಕ್ಷಣ ಭೀಷ್ಮ ಎಚ್.ಎಂ ಗಂಗಾಧರಯ್ಯನವರ ಸ್ಮರಣಾರ್ಥ ಹಸಿರ ಕ್ಯಾಂಪಸ್‌ನ ಬಯಲು ವೇದಿಕೆಯಲ್ಲಿ ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆ ಗಮನ ಸೆಳೆಯಿತು.

ಸಾಲಾಗಿ ಬಸ್ಸಿನಿಂದಿಳಿದು ಮೈದಾನಕ್ಕೆ ಬಂದು ಗುಂಪಾಗಿ ಕುಳಿತು ಚಿತ್ತಾರ ಬಿಡಿಸುತ್ತಿದ್ದ ಚಿಣ್ಣರು, ಸೂರ್ಯನೇ ತನ್ನ ದಿನಚರಿಯನ್ನು ನಿಧಾನವಾಗಿ ಶುರು ಮಾಡುವ ಹೊತ್ತಿನಲ್ಲಿ ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಸಜ್ಜಾಗಿ ಚಿತ್ರ ಬಿಡಿಸಲು ಬಂದಿದ್ದು, ಚುಮು ಚುಮು ಚಳಿಯನ್ನೂ ಲೆಕ್ಕಸದೇ ಬಣ್ಣ ಬಣ್ಣದ ಪೆನ್ಸಿಲ್ ಗಳನ್ನು ಹಿಡಿದು ತಮಗೆ ಯಾವ ವಿಷಯ ಬರೆಯಲು ಕೊಡಬಹುದು ಎಂದು ಕಾತುರದಿಂದ ಕಾಯುತ್ತಿದ್ದ ಮಕ್ಕಳು ಮತ್ತು ಅವರ ಪೋಷಕರು ಹಾಗೂ ಶಾಲಾ ಶಿಕ್ಷಕರು, ಈ ದೃಶ್ಯ ಕಂಡು ಬಂದಿದ್ದು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ. ಶಿಕ್ಷಣ ಭೀಷ್ಮ ದಿವಂಗತ ಡಾ. ಹೆಚ್.ಎಂ. ಗಂಗಾಧರಯ್ಯನವರ 37ನೇ ವರ್ಷದ ಸ್ಮರಣಾರ್ಥ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಆಯೋಜಿಸಿದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಹಾಸನ ಮಲೆನಾಡು ಕಾಲೇಜಿನ ಪ್ರಾಧ್ಯಾಪಕರು ಹಾಗೂ ಚಿತ್ರಕಲಾವಿದರಾದ ಡಾ. ಸುರೇಶ್ ಬಾಬು ಅವರು ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಫರ್ಧೆಯನ್ನು ದಿವಂಗತ ಸಾಲು ಮರದ ತಿಮ್ಮಕ್ಕ ಅವರ ಚಿತ್ರ ಬಿಡಿಸಿ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಭಾಷೆ ಭಾವನೆಗಳನ್ನು ವ್ಯಕ್ತ ಪಡಿಸುವಂತಹ ಸಾಧನ ಕಲೆಯಾಗಿರುತ್ತದೆ. ಪದಗಳಿಂದ ವರ್ಣಿಸಲು ಸಾಧ್ಯವಾಗದ್ದನ್ನು ಚಿತ್ರಕಲೆ ವರ್ಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಯಾರಿಗೂ ಸುಂದರ ಕ್ಷಣಗಳನ್ನು ಆಸ್ವಾದಿಸುವಂತಹ ತಾಳ್ಮೆಯಿಲ್ಲ, ಇಂತಹ ಧಾವಂತದ ಜೀವನದಲ್ಲಿ ಕಲೆ ಎಂಬುದು ಅತೀ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಮಕ್ಕಳಲ್ಲಿ ಕಲ್ಪನೆಯ ಶಕ್ತಿ ಹೆಚ್ಚಾಗಿರುತ್ತದೆ. ಆದರೆ ಅದನ್ನು ಚಿತ್ರಿಸುವ ಸಾಮರ್ಥ್ಯ ಹೆಚ್ಚಾಗಿ ಇರುವುದಿಲ್ಲ ಆದರೆ ಯುಜಿ (ಪದವಿ ವಿದ್ಯಾರ್ಥಿಗಳು) ಮಕ್ಕಳಲ್ಲಿ ಕಲ್ಪನೆಗೆ ಉಸಿರುಕೊಡುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಹಾಗಾಗಿ ಕಲ್ಪನೆಯ ಗೂಡಿನಿಂದ ಉಸಿರು ಕೊಡುವ ಗೂಡಿನ ತನಕ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇಂತಹ ಅವಕಾಶವನ್ನು ಎಲ್ಲಾ ಮಕ್ಕಳು ಬಳಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ನಂಜುಡಪ್ಪ ಮಾತನಾಡಿ, ಚಿತ್ರಕಲೆ ಎಂಬುದು ನಾಗರೀಕ ಮಾನವನ ಜೊತೆಗೆ ಅವಿನಾಭಾವವಾಗಿ ಬಂದ ಕಲೆಯಾಗಿದೆ. ಈ ಚಿತ್ರಕಲೆ ಲಲಿತ ಕಲೆಗಳಲ್ಲಿ ಒಂದಾಗಿದೆ, ಮನುಷ್ಯ ಭಾಷೆಯನ್ನು ಕಲಿಯುವುದಕ್ಕೂ ಮೊದಲು ಚಿತ್ರಗಳ ಮೂಲಕವೇ ಹೆಚ್ಚಾಗಿ ಸಂವಹನವನ್ನು ನಡೆಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಭಾಷೆಯಲ್ಲಿ ಒಂದು ರೀತಿ ಸಂವಹನ ಸಾಧ್ಯವಾದರೆ, ಚಿತ್ರಕಲೆಯ ಮೂಲಕ ಹಲವು ರೀತಿಯಲ್ಲಿ ಸಂವಹನ ಸಾಧ್ಯವಾಗುತ್ತದೆ. ಚಿತ್ರಕಲೆ ಒಂದು ಶಾಶ್ವತ ಸಂವಹನ ಕಲೆಯಾಗಿದೆ ಇಂತಹ ಒಂದು ಸ್ಪರ್ಧೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲ್ಪನೆಯ ಚಿತ್ರಗಳನ್ನು ಬಿಡಿಸಿ, ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಾಹೇ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಅಶೋಕ್ ಮೆಹ್ತಾ, ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ನಿಯಂತ್ರಕರಾದ ಡಾ. ಗುರುಶಂಕರ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ, ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಜೀವ್ ಕುಮಾರ್ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಸಹನಾ ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ತುಮಕೂರು ಜಿಲ್ಲೆಯ ಸುಮಾರು 120 ಶಾಲೆಯ 5700 ಶಾಲಾ ಮಕ್ಕಳು ಭಾಗವಹಿಸಿದ್ದರು. ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಫರ್ಧೆಗೆ ಈ ಕೆಳಗಿನಂತೆ ವಿಷಯಗಳನ್ನು ನೀಡಲಾಗಿತ್ತು. ನರ್ಸರಿ ಮಕ್ಕಳಿಗೆ ತಮಗೆ ಇಷ್ಟವಾದ ಯಾವುದಾದರೂ ಚಿತ್ರ, 1ರಿಂದ 4ನೇ ತರಗತಿ ಮಕ್ಕಳಿಗೆ ನನ್ನ ಕನಸಿನ ತೋಟ, 5ರಿಂದ 7ನೇ ತರಗತಿ ಮಕ್ಕಳಿಗೆ ತಮ್ಮ ಕಲ್ಪನೆಯ ಕಾರ್ಟೂನ್ ಪಾತ್ರ, 8ರಿಂದ 10ನೇ ತರಗತಿ ಮಕ್ಕಳಿಗೆ ನನ್ನ ಕನಸಿನ ರಸ್ತೆ, ಕಾಲೇಜು ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಡಿಸೆಂಬರ್ ತಿಂಗಳು, ಸಿಬ್ಬಂದಿಗಳಿಗೆ ತಂತ್ರಜ್ಞಾನ ಮತ್ತು ಪರಿಸರ.

ಈ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷ ತಂದಿದೆ. ನಾವು ಶಾಲೆಯಲ್ಲಿ ಈ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಿಂತ ಇಲ್ಲಿ ಬಂದು ಹಚ್ಚ ಹಸಿರಿನ ಪ್ರಕೃತಿಯ ಆವರಣದಲ್ಲಿ ಕಲಿಯುವುದು ವಿಭಿನ್ನ ಏಕೆಂದರೆ ಇಲ್ಲಿ ಬೇರೆ ಶಾಲೆಯ ಮಕ್ಕಳೊಂದಿಗೆ ಬೆರೆತು ಕಲಿಯುವುದರೊಂದಿಗೆ ಹೊಸ ಸ್ನೇಹಿತರ ಪರಿಚಯ ಕೂಡ ಹಾಗುತ್ತದೆ ಅದು ನಮಗೆ ಖುಷಿ ನೀಡುತ್ತದೆ ಎಂದು ವಿದ್ಯಾನಿಕೇತನ ಶಾಲೆಯ ದೀಪ್ತಿ ಡಿ ಎಸ್ ಖುಷಿ ಹಂಚಿಕೊಂಡರು
ನಾನು ಭಾಗವಹಿಸುತ್ತಿದ್ದ ಸ್ಪರ್ಧೆಯಲ್ಲಿ ನನ್ನ ಮಗುವೂ ಪಾಲ್ಗೊಂಡಿದ್ದು ಖುಷಿ ಚಿತ್ರಕಲಾ ಸ್ಪರ್ಧೆಗೆ ನಮ್ಮ ಪುಟ್ಟ ಕಂದಮ್ಮನನ್ನ ಕರೆದುಕೊಂಡು ಬಂದಿದ್ದೇವೆ. ನನ್ನ ಮಗನಿಗೆ 2 ವರ್ಷ 3 ತಿಂಗಳು ಅಷ್ಟೇ. ನಾನು ಸಣ್ಣವನಿದ್ದಾಗ ನಾನು ಬಂದು ಸ್ಪರ್ಧೆಯಯಲ್ಲಿ ಭಾಗವಹಿಸುತ್ತಿದ್ದೆ ಇಂದು ದಿನಪತ್ರಿಕೆಯಲ್ಲಿ ಸ್ಪರ್ಧೆ ಇದೆ ಅನ್ನೋ ಸುದ್ದಿ ನೋಡಿ ನಾನು ನನ್ನ ಮಗನನ್ನ ಕರೆದುಕೊಂಡು ಬಂದಿದ್ದೇನೆ. ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯವರು 37 ವರ್ಷಗಳಿಂದ ಈ ಸ್ಪರ್ಧೆಯನ್ನ ಮಾಡಿಕೊಂಡು ಬಂದಿದ್ದಾರೆ, ನಾನು ಭಾಗವಹಿಸುತ್ತಾ ಇದ್ದ ಸ್ಪರ್ಧೆಗೆ ನನ್ನ ಮಗನನ್ನು ಕರೆದುಕೊಂಡು ಬಂದಿರೋದು ತುಂಬಾ ಸಂತೋಷ ಆಗ್ತಾ ಇದೆ ಎಂದು ಪೋಷಕರಾದ ರವಿ ಹೇಳಿದರು





