ಸಂವಿಧಾನ, ಪ್ರಜಾಸತ್ತೆ ಮತ್ತು ಬಹುತ್ವ ಇವುಗಳ ಉಳವಿಗಾಗಿ ಬಿಜೆಪಿಯನ್ನು ಸೋಲಿಸಿ, ದೇಶ ಉಳಿಸಿ ಆಂದೋಲನವನ್ನು ಸಿಪಿಐ ರಾಷ್ಟ್ರದಾದ್ಯಂತ ಹಮ್ಮಿಕೊಂಡಿದ್ದು,ಇದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ರಾಜಕೀಯ ಸಮಾವೇಶಗಳನ್ನು ಹಮ್ಮಿಕೊಂಡಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದರು.
ತುಮಕೂರು ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಸಿಪಿಐ ಪಕ್ಷದ ರಾಜಕೀಯ ಸಮಾವೇಶದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಹಾಗೂ ಏತಕಾಗಿ ಬಿಜೆಪಿ ಸೋಲಿಸಬೇಕು ಎಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸ್ವಾತಂತ್ರ ಭಾರತದಲ್ಲಿ 2024ರ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದಾಗಿದ್ದು, ಈ ದೇಶದ ಸಂವಿಧಾನ,ಪ್ರಜಾಸತ್ತೆ ಮತ್ತು ಬಹುತ್ವದ ಭಾರತವನ್ನು ಉಳಿಸುವ ನಿಟ್ಟಿನಲ್ಲಿ ಬಿಜೆಪಿಯೇತರ ಪಕ್ಷಗಳು ಒಗ್ಗೂಡಿ ಕೆಲಸ ಮಾಡುತ್ತಿವೆ ಎಂದರು.
ಬಿಜೆಪಿ ಸಂಸದರು ಆಗಿಂದಾಗ್ಗೆ ಸಂವಿಧಾನ ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ. ಇಂದು ಕೂಡ ಉತ್ತರಪ್ರದೇಶದ ಸಂಸದರೊಬ್ಬರು ಸಂವಿಧಾನ ಬದಲಾಯಿಸುವ ಮಾತುಗಳನ್ನು ಪುನರುಚ್ಚರಿಸಿದ್ದಾರೆ. ಇಂದು ಈ ದೇಶದ ದಲಿತರು, ಆದಿವಾಸಿಗಳು, ಬಡವರು, ಹಿಂದುಳಿದ ವರ್ಗಗಳ ಜನರು ಕೊಂಚ ಉಸಿರಾಡುತ್ತಿದ್ದರೆ ಆದು ಬಾಬಾ ಸಾಹೇಬರು ನೀಡಿದ ಸಂವಿಧಾನದಿಂದ ಮಾತ್ರ. ಅಂತಹ ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನು ಪದೇ ಪದೇ ಕೇಳುತ್ತಿದ್ದಾರೆ. ಬಿಜೆಪಿ ಮತ್ತು ಆರ್.ಎಸ್.ಎಸ್.ಎಂದಿಗೂ ಬಾಬಾ ಸಾಹೇಬರ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ಸಂವಿಧಾನದ ಬದಲು ಮನಸ್ಮೃತಿ ಯನ್ನು ಜಾರಿಗೆ ತರುವುದು ಬಿಜೆಪಿಯ ಹಿಡನ್ ಅಜೆಂಡಾವಾಗಿದೆ. ಹಾಗಾಗಿ ಸಂವಿಧಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ದೇಶದಲ್ಲಿ ಪ್ರಜಾಸತ್ತತೆ ಎಂಬುದು ನಾಶವಾಗಿದೆ. ಇದಕ್ಕೆ 17ನೇ ಲೋಕಸಭೆಯ ಕೊನೆಯ ಅಧಿವೇಶನವೇ ಸಾಕ್ಷಿ, ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದ ಸುಮಾರು 200ಕ್ಕೂ ಹೆಚ್ಚು ಸಂಸದರನ್ನು ಅಮಾನತ್ತಿನಲ್ಲಿಟ್ಟು, ನೂರಾರು ದೇಶಕ್ಕೆ ಅಪಾಯಕಾರಿಯಾಗಿರುವ ಕಾಯ್ದೆಗಳನ್ನು ಪಾರ್ಲಿಮೆಂಟ್‌ನಲ್ಲಿ ಚರ್ಚೆ ಇಲ್ಲದೇ ಪಾಸು ಮಾಡಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದವರನ್ನು ಐಟಿ, ಇಡಿ, ಸಿಬಿಐ ಮೂಲಕ ಜೈಲಿಗೆ ಕಳುಹಿಸಿ, ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ. ಇದಕ್ಕೆ ದೆಹಲಿ ಸಿ.ಎಂ. ಕೇಜ್ರಿವಾಲ್ ಹಾಗೂ ಹೇಮಂತ ಸೂರೇನ್ ಪ್ರಕರಣ ತಾಜಾ ಉದಾಹರಣೆ. ಈ ದೇಶದಲ್ಲಿ ಪ್ರಜಾಸತ್ತತೆ ಉಳಿಯಬೇಕಾದರೆ ಬಿಜೆಪಿ ಸೋಲಬೇಕಿದೆ ಎಂದು ಸಾತಿ ಸುಂದರೇಶ್ ಹೇಳಿದರು.
ವಿವಿಧೆತೆಯಲ್ಲಿ ಏಕತೆ ಎಂಬುದು ಭಾರತದ ಬಹುದೊಡ್ಡ ಸೌಂದರ್ಯ. ಇಲ್ಲಿ ಹಲವಾರುಭಾಷೆ, ಸಂಸ್ಕೃತಿ, ಪರಂಪರೆ, ಧರ್ಮ, ಜಾತಿಯ ಜನರು ಒಗ್ಗೂಡಿ ಬದುಕುತ್ತಿದ್ದಾರೆ. ಆದರೆ, ಬಿಜೆಪಿ ಒಂದು ದೇಶ, ಒಂದು ಸಂಸ್ಕೃತಿ, ಒಂದು ಚುನಾವಣೆಯ ಹೆಸರಿನಲ್ಲಿ ಈ ದೇಶದ ಬಹುತ್ವವನ್ನು ನುಚ್ಚುನೂರು ಮಾಡಲು ಹೊರಟಿದೆ. ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಜನರ ನಡುವೆಯೇ ದ್ವೇಷ ಹುಟ್ಟುವಂತೆ ಮಾಡಿ, ತಮ್ಮ ಅಧಿಕಾರವನ್ನು ಗಟ್ಟಿ ಮಾಡಿಕೊಳ್ಳಲು ಮುಂದಾಗಿದೆ.ಇದರ ವಿರುದ್ಧ ರಾಷ್ಟ್ರದ ಸುಮಾರು 26ಕ್ಕೂ ಹೆಚ್ಚು ಪಕ್ಷಗಳು ಒಗ್ಗೂಡಿ ಇಂಡಿಯಾ ಮೈತ್ರಿಕೂಟ ರಚಿಸಿಕೊಂಡು, ಬಹುತ್ವವನ್ನು ಕಾಪಾಡಲು ಹೊರಟಿದೆ. ಕೋಮುವಾದಿ, ಸರ್ವಾಧಿಕಾರಿ ಬಿಜೆಪಿ ಸೋತರೇ ಮಾತ್ರ ದೇಶದಲ್ಲಿ ಬಹುತ್ವ ಉಳಿಯಲು ಸಾಧ್ಯ. ಈ ಎಲ್ಲಾ ಅಂಶಗಳನ್ನು ಯುವಜನತೆ ತಿಳಿಸುವ ಉದ್ದೇಶದಿಂದ ಸಿಪಿಐ ಎಲ್ಲಾ ಜಿಲ್ಲೆಗಳಲ್ಲಿ ರಾಜಕೀಯ ಸಮಾವೇಶಗಳ ಮೂಲಕ ಯುವಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ ಎಂದು ಸಾತಿ ಸುಂದರೇಶ್ ತಿಳಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ, ಈ ದೇಶಕ್ಕೆ ಶ್ರೀಮಂತ, ಹಣ ಬಲ, ತೋಳ್ಬಲ ಇರುವ ಸಂಸದರಿಗಿಂತ, ಬಡವರು, ದೀನದಲಿತರು, ಕಾರ್ಮಿಕರು, ರೈತರು, ಆರ್ಥಿಕ ಸಂಕಷ್ಟದಲ್ಲಿರುವ ಜನರ ಕಷ್ಟ ಸುಖಗಳನ್ನು ಅರ್ಥ ಮಾಡಿಕೊಂಡು, ಅವರ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತುವ ಸಂಸದರ ಅಗತ್ಯವಿದೆ. ಈ ಕೆಲಸವನ್ನು 2014ರಿಂದ 2019ರವರೆಗೆ ಸಂಸತ್ ಸದಸ್ಯನಾಗಿ ಬಹಳ ಶಿಸ್ತಿನಿಂದ ಮಾಡಿದ್ದೇನೆ. ಮತ್ತೊಮ್ಮೆ ನೀವು ನಮಗೆ ಅವಕಾಶ ಮಾಡಿಕೊಟ್ಟಲ್ಲಿ ನಿಮ್ಮ ನಂಬಿಕೆಗೆ ಚ್ಯುತಿ ಬರದ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಮತ ನೀಡಿದ ಜನತೆಗೆ,ಅವಕಾಶ ನೀಡಿದ ಪಕ್ಷಕ್ಕೂ ಗೌರವ ತರುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ ಗಟ್ಟಿಯಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 27 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿತ್ತು. ಈ ಬಾರಿಯೂ ಸ್ಪರ್ಧಿಸುವ ಅವಕಾಶವಿದ್ದರೂ, ಕೋಮುವಾದಿ, ಸರ್ವಾಧಿಕಾರಿ ಧೋರಣೆ, ಕಾರ್ಮಿಕ ವಿರೋಧಿ, ಉದ್ದಿಮೆದಾರರ ಪರವಾಗಿ ಬಿಜೆಪಿ ಪಕ್ಷವನ್ನು ಸೋಲಿಸಲೇಬೇಕೆಂಬ ಉದ್ದೇಶದಿಂದ ಇಂಡಿಯಾ ಮೈತ್ರಿಕೂಟದೊಂದಿಗೆ ಬೇರೆತು, ಒಕ್ಕೂಟದ ಅಭ್ಯರ್ಥಿಯಾಗಿರುವ ಮುದ್ದಹನುಮೇಗೌಡರಿಗೆ ಬೆಂಬಲ ವ್ಯಕ್ತಪಡಿಸಿ, ಅವರ ಗೆಲುವಿಗೆ ಕೆಲಸ ಮಾಡಲು ಸಿಪಿಐ ಮುಂದಾಗಿದೆ. ಈ ಸಮಾವೇಶದ ಮೂಲಕ ನಮ್ಮ ಎಲ್ಲಾ ಕಾರ್ಯಕರ್ತರಿಗೆ, ಕಾರ್ಮಿಕರಿಗೆ, ಹಿತೈಷಿಗಳಿಗೆ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗೆ ಮತ ನೀಡುವಂತೆ ಸಿಪಿಐ ಕೇಳಿಕೊಳ್ಳಲಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್‌ಹಾಲ್ ವೃತ್ತದಿಂದ ಬಿ.ಎಚ್. ರಸ್ತೆ ಮೂಲಕ ಕನ್ನಡ ಭವನದ ವರೆಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ಸಿಪಿಐ ರಾಜ್ಯ ಸಮಿತಿ ಸದಸ್ಯ ಕಂಬೇಗೌಡ, ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಎಎಪಿ ಜಿಲ್ಲಾಧ್ಯಕ್ಷ ಜಯರಾಮಯ್ಯ, ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.





