ಕರ್ನಾಟಕದಲ್ಲಿ ಕನ್ನಡ ಅನಾಥವಾಗಬಾರದು, ಕನ್ನಡಿಗರು ಜಾಗೃತರಾಗಬೇಕು. ಬಸವಾದಿ ಶರಣರು, ದಾಸರು, ದಾರ್ಶನಿಕರು ಕಟ್ಟಿಬೆಳೆಸಿದ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರದಾಗಬೇಕು. ಈ ಕಾರ್ಯದಲ್ಲಿ ವಿದ್ಯಾರ್ಥಿಗಳು, ಪೋಷಕರು ಪ್ರಧಾನ ಪಾತ್ರ ವಹಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ್ ಬಿಳಿಮಲೆ ತಿಳಿಸಿದರು.
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ‘ವೀರ ಸೌಧಾಮಿನಿ ಚಿತ್ರಸಂಪುಟ;’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸ್ಥಳೀಯ ಮಟ್ಟದಲ್ಲಿ ಕನ್ನಡವನ್ನು ಉಳಿಸುವ ಕೆಲಸಗಳು ಆಗಬೇಕಾಗಿದೆ. ಕನಿಷ್ಠ ಐದನೆಯ ತರಗತಿವರೆಗಾದರೂ ಕನ್ನಡ ಭಾಷೆ ಮಾಧ್ಯಮದ ಭಾಷೆಯಾಗಬೇಕು. ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಿ, ಆದರೆ ಮಾಧ್ಯಮ ಕನ್ನಡವೇ ಆಗಿರಲಿ. ಕನ್ನಡ ಭಾಷೆಯ ಕಲಿಕೆಗೆ ಹಾಗೂ ಉಳಿಯುವಿಕೆಗೆ ಪೋಷಕರ ಪಾತ್ರವೇ ಬಹಳ ಮುಖ್ಯವಾಗಿದೆ. ನಮ್ಮ ಸ್ಥಳೀಯ ನೆಲೆಗಳಲ್ಲಿ ಸ್ಥಳನಾಮಗಳನ್ನು ಮೂಲ ರೂಪದಲ್ಲಿಯೇ ಉಳಿಸಿಕೊಳ್ಳಬೇಕು. ಇದನ್ನು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೂ ಆಂದೋಲನದ ರೀತಿಯಲ್ಲಿ ರೂಪಿಸಬೇಕು. ಅದಕ್ಕೆ ಸ್ಥಳೀಯರು ಕೈಜೋಡಿಸಬೇಕು” ಎಂದು ತಿಳಿಸಿದರು.
ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮಿಜಿ ಮಾತನಾಡಿ, “ಕರ್ನಾಟಕದ ಇತಿಹಾಸದಲ್ಲಿ ಕಿತ್ತೂರು ಸಂಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ರಾಣಿ ಚನ್ನಮ್ಮ ಕನ್ನಡ ನಾಡಿನ ವೀರಮಹಿಳೆ. ಬ್ರಿಟೀಷರ ವಿರುದ್ಧ ಹೋರಾಡುವುದರ ಮೂಲಕ ಹೆಣ್ಣುಮಕ್ಕಳಿಗೆ ಆದರ್ಶಪ್ರಿಯರಾಗಿದ್ದ ಇಂತಹ ವೀರಮಹಿಳೆಯ ಜೀವನ ಸಾಧನೆಗಳನ್ನು ಚಿತ್ರಸಂಪುಟದಲ್ಲಿ ಹಿಡಿದಿಟ್ಟಿರುವ ಸಂತೋಷ ಹಾನಗಲ್‌ರವರ ಪ್ರಯತ್ನ ಸಾರ್ಥಕವಾಗಿದೆ” ಎಂದು ತಿಳಿಸಿದರು.
“ಕನ್ನಡ ಭಾಷೆಯ ಬೆಳವಣಿಗೆಯ ಉದ್ದೇಶದಿಂದಲೇ ನಮ್ಮ ಹಿರಿಯ ಶ್ರೀಗಳು ಕನ್ನಡ ಪಂಡಿತ್ ಕಾಲೇಜು ತೆರೆದರು. ಗ್ರಾಮೀಣ ಹೆಣ್ಣುಮಕ್ಕಳು ಹೆಚ್ಚು ಹೆಚ್ಚು ವಿದ್ಯಾವಂತರಾಗಬೇಕೆಂಬ ದೂರದೃಷ್ಟಿಯಿಂದ ನಮ್ಮ ಸಂಸ್ಥೆಯ ಬಹುತೇಕ ಶಾಲೆಗಳನ್ನು ಗ್ರಾಮಾಂತರ ಪ್ರದೇಶದಲ್ಲಿಯೇ ಪ್ರಾರಂಭಿಸಿದರು. ಈ ಎಲ್ಲಾ ಶಾಲೆಗಳೂ ಕನ್ನಡ ಮಾಧ್ಯಮ ಶಾಲೆಗಳಾಗಿದ್ದು ಶ್ರೀಗಳವರ ಕನ್ನಡ ಭಾಷೆಯ ಅಭಿಮಾನದ ದ್ಯೋತಕಗಳಾಗಿವೆ” ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, “ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕಾದರೆ ಕನ್ನಡ ಶಾಲೆಗಳು ಉಳಿದು ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಥಿಗಳು ಕಲಿಯಬೇಕು. ರಾಜ್ಯದಲ್ಲಿರುವ ಕನ್ನಡ ಶಿಕ್ಷಕರ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಬೇಕು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಶಿಷ್ಯವೇತನ ನೀಡಬೇಕು” ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್, ಅನನ್ಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ ತಾಲ್ಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಸಂಚಾಲಕ ಕೆ.ಎಸ್.ಉಮಾಮಹೇಶ್ ಇನ್ನಿತರರು ಇದ್ದರು.




