“ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿ, ಶಾಸ್ತ್ರೀಯ ಸ್ಥಾನಮಾನ ಗಳಿಸಿದ ನಮ್ಮ ಹೆಮ್ಮೆಯ ಕನ್ನಡ ಮಾತೃ ಭಾಷೆಯಾಗಿ ಕನ್ನಡಿಗರ ಸ್ವಪ್ನದಲ್ಲಿ ಸಹ ಕನ್ನಡವೇ ಪ್ರಾಧಾನ್ಯತೆ ಪಡೆದುಕೊಂಡಿದೆ” ಎಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ತಿಳಿಸಿದರು.
ಗುಬ್ಬಿ ಪಟ್ಟಣಕ್ಕೆ ಆಗಮಿಸಿದ ಹೆಸರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಕನ್ನಡ ಜ್ಯೋತಿ ಸುವರ್ಣ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, “ನೂರಾರು ಕನ್ನಡ ಸಾಹಿತಿಗಳು, ಕವಿಗಳು ಕನ್ನಡ ಭಾಷೆಯನ್ನು ಹೆಮ್ಮೆಯಿಂದ ಬಣ್ಣಿಸಿದ್ದಾರೆ. ಇಂಥಹ ನಮ್ಮ ನಾಡಿಗೆ ಕರ್ನಾಟಕ ಎಂಬ ನಾಮಕರಣವಾಗಿ 50 ವರ್ಷ ಸಂದ ಹಿನ್ನಲೆಯಲ್ಲಿ ಈ ಕನ್ನಡಜ್ಯೋತಿ ರಾಜ್ಯದಲ್ಲಿ ಸಂಚರಿಸಿದೆ. ಇದಕ್ಕೆ ನಮ್ಮ ನಾಡ ಪ್ರೇಮ ಅನಾವರಣಗೊಳಿಸುವ ಜವಾಬ್ದಾರಿ ಎಲ್ಲರದ್ದಾಗಿದೆ” ಎಂದು ಕರೆ ನೀಡಿದರು.
ಜಾಗೃತರಾಗಿರಲಿ ಅಥವಾ ಮಲಗಿರಲಿ ಎಲ್ಲೆಲ್ಲೂ ಕನ್ನಡವೇ ಕಾಣುತ್ತಿದೆ. ನಮ್ಮ ನಾಡಲ್ಲಿ ಕನ್ನಡವೇ ಸಾರ್ವಭೌಮತ್ವ ಮೆರೆದಿದೆ. ವ್ಯಾವಹಾರಿಕ ಭಾಷೆಯಾಗಿದೆ. ಆಡಳಿತ ಭಾಷೆಯಾಗಿದೆ. ಈಗ ನ್ಯಾಯಾಂಗ ಇಲಾಖೆಯಲ್ಲಿ ಕನ್ನಡ ಮುನ್ನೆಲೆಗೆ ಬಂದಿದೆ. ಮುಂದಿನ ದಿನಗಳಲ್ಲಿ ಕನ್ನಡ ಉದ್ಯೋಗ ಸೃಷ್ಟಿಸುವ ಅನ್ನದ ಭಾಷೆಯಾಗಲಿದೆ ಎಂದ ಅವರು, ಕನ್ನಡ ಕಾರ್ಯಕ್ರಮ ಎಂದ ಕೂಡಲೇ ಮೈನವಿರೇಳಿಸುವ ವ್ಯಕ್ತಿತ್ವ. ನಮಗೆ ಮಾತೃಭಾಷೆ ಕಲಿಸಿದೆ. ಕನ್ನಡ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳದೆ ಕನ್ನಡದಲ್ಲೇ ಸಾಧನೆ ಮಾಡುವ ಅವಕಾಶ ಇದೆ. ಇಂದಿನ ಮಕ್ಕಳು ಶಿಕ್ಷಣವನ್ನು ಮಾತೃಭಾಷೆಯಲ್ಲೇ ಮುಗಿಸಿ, ಬೇರೆ ಭಾಷೆ ಅವಶ್ಯಕತೆಗೆ ತಕ್ಕಷ್ಟು ಕಲಿತು ಬದುಕು ಕಟ್ಟಿಕೊಳ್ಳಿ ಎಂದು ಕರೆ ನೀಡಿದರು.

ತಹಶೀಲ್ದಾರ್ ಬಿ.ಆರತಿ ಮಾತನಾಡಿ, ಕುಣಿಗಲ್ ತಾಲೂಕಿನ ಮೂಲಕ ಬಂದ ಕನ್ನಡ ಜ್ಯೋತಿ ರಥವನ್ನು ಸಿ.ಎಸ್.ಪುರ ಗ್ರಾಮದಲ್ಲಿ ಭವ್ಯ ಸ್ವಾಗತ ಕೋರಿ ನಂತರ ಗುಬ್ಬಿ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಗಿದೆ. ಈ ಕನ್ನಡ ಕೆಲಸಕ್ಕೆ ಹಲವು ಸಂಘ ಸಂಸ್ಥೆಗಳು, ಜನ ಪ್ರತಿನಿಧಿಗಳು, ಕನ್ನಡಾಭಿಮಾನಿಗಳು ಸಾಥ್ ನೀಡಿದ್ದಾರೆ. ಮಳೆಯಲ್ಲೂ ರಥಯಾತ್ರೆ ಯಶಸ್ವಿಗೆ ಸಹಕರಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಧನ್ಯವಾದ ತಿಳಿಸುವುತ್ತೇನೆ ಎಂದು ಹೇಳಿದರು.
ಗುಬ್ಬಿ ಪಟ್ಟಣದ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ನಾಸಿಕ್ ವಾದ್ಯ ವೃಂದ, ಡಿಜೆ ಸೌಂಡ್ಸ್ ಹಾಗೂ ಶಾಲಾ ಮಕ್ಕಳ ನೃತ್ಯ ತಂಡದೊಂದಿಗೆ ಮೆರವಣಿಗೆ ನಡೆಯಿತು. ಈ ಮಧ್ಯೆ ಮಕ್ಕಳ ನೃತ್ಯ, ಆರೋಗ್ಯ ಇಲಾಖೆಯ ಬೀದಿ ನಾಟಕ ಪ್ರದರ್ಶನ ಆಕರ್ಷಣೀಯವಾಗಿ ಮೂಡಿ ಬಂತು. ಜಡಿ ಮಳೆಯಲ್ಲಿ ಮಕ್ಕಳು ಕುಣಿದು ಕುಪ್ಪಳಿಸಿ ಕನ್ನಡಕ್ಕೆ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ತಾಪಂ ಇಓ ಪರಮೇಶ್ ಕುಮಾರ್, ಬಿಇಓ ಪಾಲಾಕ್ಷಪ್ಪ, ಪಪಂ ಸದಸ್ಯರಾದ ಮಹಮ್ಮದ್ ಸಾದಿಕ್, ಕುಮಾರ್, ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ, ಶಶಿಕುಮಾರ್, ಮುಖಂಡರಾದ ಸಿ.ಆರ್.ಶಿವಕುಮಾರ್, ಜಿ.ಆರ್.ರಮೇಶ್, ಕುಮಾರ್, ಶಿವಪ್ಪ, ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ಯಲ್ಲಪ್ಪ, ರೈತಸಂಘದ ಲೋಕೇಶ್, ನಾಗಸಂದ್ರ ವಿಜಯ್ ಕುಮಾರ್ ಸೇರಿದಂತೆ ಕರುನಾಡ ವಿಜಯಸೇನೆ ಪದಾಧಿಕಾರಿಗಳು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಇತರರು ಇದ್ದರು.





