ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾರನಕಟ್ಟೆ ಕೆರೆಯ ಜಾಗದಲ್ಲಿ ಹಲವು ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆ ಕಟ್ಟಡಗಳನ್ನು ಕೆಡವಿ, ಒತ್ತುವರಿ ತೆರವುಗೊಳಿಸಿ ಕರೆಯನ್ನು ಪುನಶ್ಚೇತನಗೊಳಿಸಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ನೈಜ ಹೋರಾಟಗಾರರ ವೇದಿಕೆ, ಕಾಳಜಿ ಫೌಂಡೇಶನ್ ಹಾಗೂ ಮಾಹಿತಿ ಅಧ್ಯಯನ ಕೇಂದ್ರದ ಮುಖಂಡರು ತುಮಕೂರಿನಲ್ಲಿ ಲೋಕಾಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. “ಮಾರನಕಟ್ಟೆ ಕೆರೆಯು ಸುಮಾರು 46 ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ, ಬರೋಬ್ಬರಿ 21 ಎಕರೆಗೂ ಹೆಚ್ಚು ಭೂಮಿಯನ್ನು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಖಾಸಗಿ ಸಂಘ, ಸಂಸ್ಥೆಗಳು ಆಕ್ರಮಿಸಿಕೊಂಡಿವೆ. ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿ ಭಾಗಶಃ ಕೆರೆಯನ್ನೇ ನುಂಗಿಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ.
“ಕಾನೂನುಗಳನ್ನು ಉಲ್ಲಂಘಿಸಿ ಕೆರೆ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಕೆರೆ ಜಾಗದಲ್ಲಿ ನ್ಯಾಯಾಧೀಶರ ವಸತಿಗೃಹ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಕಟ್ಟಡಗಳಿದ್ದು, ಅವುಗಳನ್ನು ತೆರವುಗೊಳಿಸಬೇಕು. ಕೆರೆಯನ್ನು ಪುನಶ್ಚೇತನಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
ದೂರು ನೀಡುವ ವೇಳೆ, ನೈಜ ಹೋರಾಟಗಾರರ ವೇದಿಕೆಯ ಹೆಚ್.ಎಂ ವೆಂಕಟೇಶ್, ಕಾಳಜಿ ಫೌಂಡೇಶನ್‌ನ ಜಿ.ಎಲ್ ನಟರಾಜ್, ಮಾಹಿತಿ ಹಕ್ಕು ರಾಜ್ಯ ವೇದಿಕೆಯ ಹೆಚ್.ಎಸ್ ಸ್ವಾಮಿ, ಮಾಹಿತಿ ಅಧ್ಯಯನ ಕೇಂದ್ರದ ಎಲ್.ಎಸ್ ಮಲ್ಲಿಕಾರ್ಜುನ್ ಇದ್ದರು.




