ಧೈರ್ಯ, ದೇಶಭಕ್ತಿ ಮತ್ತು ಮಹಿಳಾ ಶೌರ್ಯದ ಸಂಕೇತವೇ ಒನಕೆ ಓಬವ್ವ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಭಿಪ್ರಾಯಪಟ್ಟರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದಲ್ಲಿ ಏರ್ಪಡಿಸಿದ್ದ ಒನಕೆ ಓಬವ್ವ ಜಯಂತೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒನಕೆ ಓಬವ್ವ ಅವರ ತ್ಯಾಗ ಮತ್ತು ಸಾಹಸವು ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದು, ಸಮಾಜದಲ್ಲಿ ಮಹಿಳೆಯರ ಗೌರವ ಮತ್ತು ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಸ್ವಾಭಿಮಾನದಿಂದ ಶತ್ರುಗಳ ವಿರುದ್ಧ ಹೋರಾಡಿ ಹುತಾತ್ಮಳಾದ ಓಬವ್ವನ ಬಲಿದಾನವು ಕನ್ನಡದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಾಗಿ ಉಳಿದಿದೆ ಎಂದು ಸ್ಮರಿಸಿದರು. ಇಂದಿನ ಸಮಾಜದಲ್ಲಿ ಓಬವ್ವನಂತಹ ಶೌರ್ಯ, ಆತ್ಮಸಮ್ಮಾನ ಮತ್ತು ದೇಶಾಭಿಮಾನ ತುಂಬಿದ ಮಹಿಳೆಯರ ಅಗತ್ಯವಿದೆ ಎಂದರು.
ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ದೃಢನಿಶ್ಚಯದಿಂದ ಮುನ್ನಡೆಯುವುದು ಅತ್ಯಂತ ಅಗತ್ಯವಾಗಿದೆ. ಮಹಿಳೆಯರು ಕೇವಲ ಕುಟುಂಬದ ಅಸ್ತಿತ್ವದ ಕೇಂದ್ರೀಯ ಶಕ್ತಿ ಮಾತ್ರವಲ್ಲದೆ, ಶಿಕ್ಷಣ, ವಿಜ್ಞಾನ, ಆಡಳಿತ, ರಾಜಕೀಯ, ಕ್ರೀಡೆ, ಕಲಾ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ತಾವು ಸಮಾನವಾಗಿ ಯಶಸ್ಸು ಸಾಧಿಸಬಲ್ಲರು ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ ಎಂದು ಹೇಳಿದರು.
ಮಹಿಳೆಯರು ಸ್ವಾವಲಂಬಿ ಹಾಗೂ ಸಬಲರಾಗಲು ಶಿಕ್ಷಣವೇ ಪ್ರಮುಖ ಆಯುಧವಾಗಿದೆ. ಶಾಲಾ ಹಂತದಿಂದಲೇ ವಿದ್ಯಾರ್ಥಿನಿಯರಿಗೆ ಆತ್ಮವಿಶ್ವಾಸ, ನಾಯಕತ್ವ ಗುಣ, ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಕೆಲಸ ಶಿಕ್ಷಕರು ಮಾಡಬೇಕು. ಅವರಿಗೆ ತಮ್ಮ ಕನಸುಗಳನ್ನು ಬೆಳೆಸಲು ಪ್ರೇರಣೆ ನೀಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು
ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಭಾರತಿ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಉಪನ್ಯಾಸ ನೀಡುತ್ತಾ, ಕರ್ನಾಟಕದ ಇತಿಹಾಸದಲ್ಲಿ ಓಬವ್ವ ತನ್ನ ಸ್ವಾಮಿನಿಷ್ಠೆ ತೋರಿ ನಾಡನ್ನು ರಕ್ಷಿಸುವ ಮೂಲಕ ಅಜರಾಮರಳಾಗಿದ್ದಾಳೆ ಎಂದು ತಿಳಿಸಿದ ಅವರು, ಓಬವ್ವದ ಸಾಹಸ ಗಾಥೆಯನ್ನು ಎಳೆ-ಎಳೆಯಾಗಿ ಬಿಡಿಸಿ ವಿವರಿಸಿದರು.
ಶಿಕ್ಷಣ ಕ್ಷೇತ್ರ, ಸಮಾಜ ಸೇವೆ, ವಿಜ್ಞಾನ ಅಥವಾ ರಾಜಕಾರಣದಲ್ಲಿ–ಯಾವ ಕ್ಷೇತ್ರವಾಗಿದ್ದರೂ ಮಹಿಳೆಯರು ಓಬವ್ವನಂತಹ ದೃಢಸಂಕಲ್ಪ ಮತ್ತು ದೇಶಭಕ್ತಿ ಮನೋಭಾವದಿಂದ ಮುಂದೆ ಬರಬೇಕು. ಒನಕೆ ಓಬವ್ವ ಜಯಂತಿಯನ್ನು ಆಚರಿಸುವುದು ಕೇವಲ ಅವರ ನೆನಪಿಗಾಗಿ ಅಲ್ಲ– ಅದು ನಮ್ಮಲ್ಲಿ ಧೈರ್ಯ, ಸತ್ಯ ಮತ್ತು ನಿಷ್ಠೆಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಜಿ., ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು.ಮಿರ್ಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಬಿ.ಜಿ.ಎಸ್ ವೃತ್ತದಿಂದ ಎಂ.ಜಿ.ರಸ್ತೆ, ಗುಂಚಿ ಚೌಕ, ಚರ್ಚ್ ವೃತ್ತ, ಅಶೋಕ ರಸ್ತೆ ಮೂಲಕ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೂ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಅಲಂಕೃತ ಬೆಳ್ಳಿರಥದಲ್ಲಿ ಒನಕೆ ಓಬವ್ವ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಸಾಧಕರ ಸನ್ಮಾನ :
ಜಾನಪದ ಕ್ಷೇತ್ರದಿಂದ ತಿಪಟೂರು ತಾಲ್ಲೂಕು ಅರಳಗುಪ್ಪೆಯ ದೇವರಾಜಮ್ಮ ಕೋಂ ಚಂದ್ರಶೇಖರಯ್ಯ, ಪಾವಗಡ ತಾಲ್ಲೂಕು ಚನ್ನಕೇಶವಪುರದ ಚಿಕ್ಕವ್ವ, ತುಮಕೂರು ತಾಲ್ಲೂಕು ದಿಬ್ಬೂರಿನ ನಂಜಮ್ಮ ಕೋಂ ಲೇ.ಕುಂಬಯ್ಯ, ಗುಬ್ಬಿ ತಾಲ್ಲೂಕು ಉದ್ದೇಹೊಸಕೆರೆಯ ಭಾಗ್ಯಮ್ಮ ಕೋಂ ತಿಮ್ಮಯ್ಯ, ತುಮಕೂರು ತಾಲ್ಲೂಕು ದೊಮ್ಮನಕುಪ್ಪೆಯ ಡಿ.ಸಿ. ಕುಮಾರ್ ಬಿನ್ ಲೇ.ಚಿಕ್ಕಹನುಮಯ್ಯ, ಗುಬ್ಬಿ ತಾಲ್ಲೂಕು ನಾಗಸಂದ್ರದ ಗಂಗಾಧರಯ್ಯ ಬಿನ್ ಲೇ.ಕಾಳಯ್ಯ; ಶಿಕ್ಷಣ ಕ್ಷೇತ್ರದಿಂದ ತುಮಕೂರು ತಾಲ್ಲೂಕು ಭೂಪಸಂದ್ರದ ಡಾ. ಬಿ.ಯು. ಸುಮಾ; ಸಾಹಿತ್ಯ ಕ್ಷೇತ್ರದಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಲಕ್ಕೇನಹಳ್ಳಿ ಗ್ರಾಮದ ಲ.ಪು.ಕರಿಯಪ್ಪ ಬಿನ್ ಲೇ.ಪುಟ್ಟಯ್ಯ; ಹೋರಾಟ ಕ್ಷೇತ್ರದಿಂದ ಕುಣಿಗಲ್ ತಾಲ್ಲೂಕು ಅಣತಿಹಳ್ಳಿಯ ಬೆಟ್ಟಮ್ಮ; ಸಂಘಟನೆ ಹಾಗೂ ಹೋರಾಟ ಕ್ಷೇತ್ರದಿಂದ ತುಮಕೂರಿನ ಸದಾಶಿವನಗರದ ಹೆಚ್.ಎಸ್. ಸಂಪತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.





