ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಕುಂಚಿಟಿಗ ಒಕ್ಕಲಿಗರನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕೆಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಅವರಿಗೆ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮನವಿ ಮಾಡಿದರು.
ಇಂದು ಸಮುದಾಯದ ಮುಖಂಡರೊಂದಿಗೆ ಎಚ್.ಡಿ. ದೇವೇಗೌಡರನ್ನು ಭೇಟಿಯಾದ ಮುರಳೀಧರ ಹಾಲಪ್ಪ, “ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸ್ಸನ್ನು ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರದ ಜೊತೆ ಚರ್ಚಿಸಬೇಕು. ಮಾರ್ಚ್ 08 ರಂದು ಈಗಾಗಲೇ ಪ್ರಧಾನ ಮಂತ್ರಿಗಳ ಭೇಟಿಗೆ ಸಮಯ ನಿಗಧಿ ಪಡಿಸಿರುವ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿ, ಕುಂಚಿಟಿಗ ಒಕ್ಕಲಿಗ ಸಮುದಾಯವನ್ನು ಕೇಂದ್ರ ಒಬಿಸಿ ಜಾತಿ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಲಾಗುವುದು” ಎಂದರು.
“ಕುಂಚಿಟಿಗ ಒಕ್ಕಲಿಗರನ್ನು ಹೊರತು ಪಡಿಸಿ, ಒಕ್ಕಲಿಗ ಸಮುದಾಯಕ್ಕೆ ಸೇರಿದ ಇತರೆ ಎಲ್ಲಾ ಉಪ ಪಂಗಡಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಬಿಸಿ ಜಾತಿಪಟ್ಟಿಯಲ್ಲಿವೆ. ರಾಜ್ಯದಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಮೈಸೂರು ಸೇರಿಂದತೆ ಸುಮಾರು 17 ಜಿಲ್ಲೆಗಳ 37 ತಾಲೂಕುಗಳಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕುಂಚಿಟಿಗ ಸಮುದಾಯದ ಮುಖ್ಯ ಕಸುಬು ವ್ಯವಸಾಯ ಮತ್ತು ಪಶುಸಂಗೋಪನೆ. ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡಿನಲ್ಲೂ ಕುಂಚಿಟಿಗ ಸಮುದಾಯದ ಜನ ಇದ್ದಾರೆ. ಉಳಿದೆಲ್ಲಾ ರಾಜ್ಯಗಳಲ್ಲಿ ಕುಂಚಿಟಿಗ ಸಮುದಾಯ ಕೇಂದ್ರ ಒಬಿಸಿ ಪಟ್ಟಿಯಲ್ಲಿದ್ದರೆ, ಕರ್ನಾಟಕದ ಕುಂಚಿಟಿಗರನ್ನು ಮಾತ್ರ ಕೇಂದ್ರ ಒಬಿಸಿ ಪಟ್ಟಿಯಿಂದ ಕೈಬಿಡಲಾಗಿದೆ” ಎಂದರು.

ಈ ಅಸಮತೋಲನವನ್ನು ಸರಿಪಡಿಸುವ ನಿಟ್ಟಿನಲ್ಲಿ ಹಲವಾರು ವರ್ಷಗಳ ಹೋರಾಟ ಪ್ರಯತ್ನಗಳು ಜನಾಂಗದ ಮುಖಂಡರಿಂದಲೂ ಹಾಗೂ ಕುಲಶಾಸ್ತ್ರ ಅಧ್ಯಯನ ವರದಿ ರಾಜ್ಯ ಸರ್ಕಾರದಿಂದಲೂ ನಡೆದಿದೆ. ಕೇಂದ್ರ ಒಬಿಸಿ ಪಟ್ಟಿಯಲ್ಲಿ ಕುಂಚಿಟಿಗ ಸಮುದಾಯ ಸೇರ್ಪಡೆಗೊಂಡರೆ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಜನಾಂಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕೇಂದ್ರ ಸರ್ಕಾರದ ಎಲ್ಲಾ ಹುದ್ದೆಗಳಲ್ಲಿ ಮೀಸಲಾತಿ ದೊರೆಯಲಿದೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ ದೇವರಾಜ ಅರಸು ಸಂಶೋಧನಾ ಕೇಂದ್ರ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಜಂಟಿಯಾಗಿ, ಮೈಸೂರು ವಿವಿ ಸಹಯೋಗದಲ್ಲಿ ಕುಂಚಿಟಿಗ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಈಗಾಗಲೇ ರಾಜ್ಯ ಸರ್ಕಾರ ಕುಂಚಿಟಿಗ ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿ ಕಳುಹಿಸಲಾಗಿದೆ.
ಇದನ್ನೂ ಓದಿ: ತುಮಕೂರು | ದ್ವಿತೀಯ ಪಿ.ಯು.ಸಿ ಪರೀಕ್ಷೆ ಪ್ರಾರಂಭ : ಪಾರದರ್ಶಕತೆ ಕಾಯ್ದುಕೊಳ್ಳಲು ವೆಬ್‌ಕಾಸ್ಟಿಂಗ್
ರಾಜ್ಯ ಸರ್ಕಾರದ ಶಿಫಾರಸ್ಸನ್ನು ಒಪ್ಪಿಕೊಂಡು ಜಾರಿಗೆ ತರುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಹಿರಿಯರು, ಮುತ್ಸದ್ದಿ ರಾಜಕಾರಣಿಯಾದ ಎಚ್.ಡಿ. ದೇವೇಗೌಡರು ಸುದೀರ್ಘ ಚರ್ಚೆ ನಡೆಸಿದ್ದು, ಮಾರ್ಚ್ 8ರ ಶನಿವಾರ ಕುಂಚಿಟಿಗ ಸಮುದಾಯದ ಮುಖಂಡರು ದೆಹಲಿಗೆ ಬರುವಂತೆ ಸಲಹೆ ನೀಡಿದ್ದಾರೆ. ಇದಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೂ, ಕುಲಶಾಸ್ತ್ರೀಯ ಅಧ್ಯಯವನ್ನು ಪರಾಮರ್ಶಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ರಾಜ್ಯ ಸರ್ಕಾರಕ್ಕೂ ಕೃತಜ್ಞತೆ ಸಲ್ಲಿಸುವುದಾಗಿ ಮುರುಳೀಧರ ಹಾಲಪ್ಪ ತಿಳಿಸಿದರು.





