ಅತೀ ಹಿಂದುಳಿದ ವರ್ಗಗಳ ಪೈಕಿ ಸವಿತಾ ಸಮಾಜ ಎಲ್ಲ ರೀತಿ ಹಿಂದುಳಿದು ಮುಖ್ಯವಾಹಿನಿಗೆ ಬರುವಲ್ಲಿ ಯಾವ ಸರ್ಕಾರವೂ ಸಹಕಾರ ನೀಡಿಲ್ಲ. ಈಗಿನ ಸರ್ಕಾರ ನಮ್ಮನ್ನು ಗುರುತಿಸಿ ಸಾಮಾಜಿಕ ಸಬಲತೆ ತುಂಬಿಕೊಡುವಂತೆ ತಾಲೂಕು ಸವಿತಾ ಸಮಾಜದ ಬಂಧುಗಳು ಒಕ್ಕೊರಲಿನ ಮನವಿ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸವಿತಾ ಮಹರ್ಷಿಗಳ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ನಾದ ಸ್ವರ ಲಹರಿ ಮೂಲಕ ಭಕ್ತಿ ಸಮರ್ಪಣೆ ಮಾಡಿ ನಂತರ ಸವಿತಾ ಸಮಾಜದ ಮೂಲಕ ಮನವಿ ಪತ್ರ ಸಲ್ಲಿಸಿದರು.
ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಜಿ.ಆರ್.ಪ್ರಕಾಶ್ ಮಾತನಾಡಿ, ಸರ್ಕಾರ ಎಲ್ಲಾ ಸಮುದಾಯವನ್ನು ಗುರುತಿಸಿ ಮೀಸಲಾತಿ ನೀಡುತ್ತಿದೆ. ಆದರೆ, ಅತೀ ಸಣ್ಣ ಸಮುದಾಯವಾದ ಸವಿತಾ ಸಮಾಜವನ್ನು ಕಡೆಗಣಿಸಲಾಗುತ್ತಿದೆ. ನಮಗೂ ಶೇಕಡಾ 1 ರಷ್ಟು ಮೀಸಲಾತಿ ನೀಡಿದರೆ ಮುಂದಿನ ಪೀಳಿಗೆ ಶೈಕ್ಷಣಿಕ ಪ್ರಗತಿ ಕಾಣಲಿದೆ. ಕುಲ ಕಸುಬು ನಂಬಿ ಬದುಕು ನಡೆಸುವ ನಮ್ಮಲ್ಲಿ ಬಡ ಕುಟುಂಬಗಳೇ ಹೆಚ್ಚಾಗಿವೆ. ಆರ್ಥಿಕವಾಗಿ ಹಿಂದುಳಿದ ನಮಗೆ ಸರ್ಕಾರವೇ ಸಹಕಾರ ನೀಡಿ ಮುಖ್ಯವಾಹಿನಿಗೆ ತರಬೇಕು ಎಂದು ಮನವಿ ಮಾಡಿದರು.
ನಿಟ್ಟೂರು ಗೋವಿಂದರಾಜ್ ಮಾತನಾಡಿ ರಾಜ್ಯದಲ್ಲಿ ಯಾವುದೇ ಗ್ರಾಮದಲ್ಲೂ ಕಾಣಸಿಗುವ ಸವಿತಾ ಸಮಾಜದ ಬಂಧುಗಳ ಸಂಖ್ಯೆ ಮಾತ್ರ ಅತೀ ಕಡಿಮೆ ಇರುತ್ತಾರೆ. ಸಂಘಟನೆಯಲ್ಲಿ ಸಹ ಹಿಂದುಳಿದಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಹೋಬಳಿ ಘಟಕ ಮೂಲಕ ನಮ್ಮಗಳ ಸಂಘಟನೆ ಮಾಡಿದ್ದೇವೆ. ತಾಲ್ಲೂಕು ಆಡಳಿತ ನಮ್ಮ ಸವಿತಾ ಸಮಾಜಕ್ಕೆ ನಿವೇಶನ ನೀಡಿ ನಮ್ಮ ಅಭಿವೃದ್ಧಿಗೆ ಸಹಕರಿಸಬೇಕು. ಈ ನಿಟ್ಟಿನಲ್ಲಿ ಚೇಳೂರು, ಹಾಗಲವಾಡಿ ಹೋಬಳಿಯಿಂದ ಮನವಿಪತ್ರ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಸವಿತಾ ಸಮಾಜದ ಹಿರಿಯ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೇಡ್-2 ತಹಸೀಲ್ದಾರ್ ಶಶಿಕಲಾ ವಹಿಸಿದ್ದರು. ವೇದಿಕೆಯಲ್ಲಿ ಕಡಬ ಗೋಪಾಲ್, ಹಾಗಲವಾಡಿ ರಾಜಣ್ಣ, ಗುಬ್ಬಿ ನಾಗರಾಜ್, ಚೇಳೂರು ಗಿರೀಶ್, ಅನಿಲ್, ಸುನಿಲ್, ಉಪ ತಹಸೀಲ್ದಾರ್ ಪ್ರಕಾಶ್, ಕಂದಾಯ ನಿರೀಕ್ಷಕ ಕುಮಾರ್ ಇತರರು ಇದ್ದರು.




