ಒಂದೂವರೆ ತಿಂಗಳಿನಿಂದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಸರ್ವರ್ ಸಮಸ್ಯೆಯಿಂದ ಹಲವಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ನೆರವಿಗಾಗಿ ಇಲಾಖೆಯ ಕಚೇರಿಗಳನ್ನು ಅಲೆಯುತ್ತಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ. ನಂದಿಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ರಮ್ಯ, ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ ಮೊದಲ ವರ್ಷದ ಬಿಎ ಪದವಿಗೆ (HEP) ಗೆ ಪ್ರವೇಶ ಪಡೆದಿದ್ದಾರೆ. ತುಮಕೂರು ನಗರದ ಹಾಸ್ಟೆಲ್‌ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುವ ಯೋಜನೆಯಲ್ಲಿದ್ದರು.
ಈ ವಿದ್ಯಾರ್ಥಿನಿ ಇವರ ಕುಟುಂಬದಲ್ಲೇ ಪದವಿ ಓದಲು ಬಂದಿರುವ ಮೊದಲ ಹೆಣ್ಣು ಮಗಳು. ಈಕೆಗೆ ಸಮಾಜ ಕಲ್ಯಾಣ ಇಲಾಖೆ ನೆರವಾಗಬೇಕಿದೆ. ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಸಲಾಗದೆ ತನ್ನದಲ್ಲದ ತಪ್ಪಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಜಂಟಿ ನಿರ್ದೇಶಕರನ್ನು ಭೇಟಿಯಾದರೂ ಕೂಡ ಅವರಿಂದ ದೊರೆತದ್ದು ಅಸಹಾಯಕತೆ ಉತ್ತರ ಬಿಟ್ಟರೆ ಯಾವುದೇ ಭರವಸೆ ಮೂಡಿಲ್ಲ.
“ಮೊಬೈಲ್ ಮತ್ತು ಲ್ಯಾಪ್ ಟಾಪ್ ನಲ್ಲಿ ಹಲವು ಬಾರಿ ಹಾಸ್ಟೆಲದದ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿದ್ದೇವೆ. ಸೈಬರ್ ಸೆಂಟರ್‍ಗಳಲ್ಲೂ ಪ್ರಯತ್ನಿಸಿದ್ದೇವೆ. ಆದರೂ ಕೊನೆಗೂ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ನಮ್ಮ ಕುಟುಂಬದಲ್ಲೇ ಮೊದಲ ಬಾರಿಗೆ ಪದವಿ ಓದಲು ಬಂದಿರುವ ನನಗೆ ಹಾಸ್ಟಲ್ ಸೀಟು ಸಿಕ್ಕರೆ ತುಂಬಾ ಅನುಕೂಲವಾಗುತ್ತದೆ” ಎನ್ನುತ್ತಾರೆ ವಿದ್ಯಾರ್ಥಿನಿ ರಮ್ಯ ಎನ್. ಕೆ.
ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನಲ್ಲೇ ಓದುತ್ತಿರುವ ಚಿಂದಿಗೆರೆಯ ದಿಶಾ, ಬೆಳ್ಳಾವಿಯ ರೋಹಿತ್ ಅವರಿಗೂ ಕೂಡ ಇದೇ ಸಮಸ್ಯೆ ಆಗಿದೆ. ಜಿಲ್ಲಾ ಕೆಂದ್ರಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂದು ಕನಸು ಕಂಡಿರುವ ಇವರಿಗೆ ದಿಕ್ಕೇ ತೋಚದಂತಾಗಿದೆ.
ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು ಆನ್‌ಲೈನ್ ಅರ್ಜಿ ಹಾಕುವುದನ್ನು ಬಿಟ್ಟರೆ ನಮ್ಮಲ್ಲಿ ಬೇರೆ ಅವಕಾಶವಿಲ್ಲ ಎಂದಿದ್ದಾರೆ.
ಇದನ್ನು ಓದಿದ್ದೀರಾ? ಬೀದರ್ | ಸ್ಮಶಾನದ ಬಳಿ ಆಸ್ಪತ್ರೆ : ಮಗುವಿಗೆ ಕೇಡಾಗುತ್ತೆ ಎಂಬ ಕಾರಣಕ್ಕೆ ಹೆರಿಗೆಗೆ ಬಾರದ ಗರ್ಭಿಣಿಯರು!
ಒಟ್ಟಾರೆ, ಅಕ್ಷರದ ಬೆಳಕನ್ನು ಕಾಣದೇ ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಸಮುದಾಯದ ಕುಟುಂಬದ ಮಕ್ಕಳು ಧೈರ್ಯ ಮಾಡಿ, ಶಿಕ್ಷಣ ಪಡೆಯಲು ಮುಂದೆ ಬಂದಿದ್ದಾರೆ. ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಸಾವಿರ ಕನಸನೊತ್ತು ಓದಲು ಬರುತ್ತಿದ್ದಾರೆ. ಇವರ ಪೋಷಣೆಗೆಂದೆ ಇರುವ ಸಮಾಜ ಕಲ್ಯಾಣ ಇಲಾಖೆ ತಾಂತ್ರಿಕ ಸಮಸ್ಯೆ ಮುಂದಿಟ್ಟು ಇವರ ಕನಸಿಗೆ ನೀರೆರಚದೆ, ಹಾಸ್ಟೆಲ್‌ನಲ್ಲಿ ಸೀಟು ಕೊಟ್ಟು ಇವರ ವಿದ್ಯಾಭ್ಯಾಸಕ್ಕೆ ನೆರವಾಗಬೇಕಿದೆ.





