ಎಸ್‌ಐಆರ್(ವಿಶೇಷ ತೀವ್ರ ಪರಿಷ್ಕರಣೆ) ಮೂಲಕ ಭಾರತ ಚುನಾವಣಾ ಆಯೋಗ ಪರೋಕ್ಷವಾಗಿ ಭಾರತೀಯರ ಪೌರತ್ವದ-ಹಕ್ಕನ್ನು ಪ್ರಶ್ನಿಸುತ್ತಿದೆ. ಆ ಅಧಿಕಾರ ಭಾರತ ಚುನಾವಣಾ ಆಯೋಗಕ್ಕಿಲ್ಲ. ಇದನ್ನು ಸುಪ್ರೀಂ ಕೋರ್ಟ್ ಕೂಡ ಚುನಾವಣಾ ಆಯೋಗಕ್ಕೆ ಈಗಾಗಲೇ ಸ್ಪಷ್ಟವಾಗಿ ನಿರ್ದೇಶಿಸಿದೆ. ಆದರೂ, ಬಿಹಾರದಲ್ಲಿ ಕಳೆದ ಎರಡು-ಮೂರು ತಿಂಗಳುಗಳ ಹಿಂದೆ ಚುನಾವಣಾ ಆಯೋಗದಿಂದ ಪ್ರಾರಂಭಿಸಲಾದ ಈ ಎಸ್‌ಐಆರ್ ಪ್ರಕ್ರಿಯೆಯನ್ನು ಈಗ ದೇಶಾದ್ಯಂತ ಪ್ರಾರಂಭಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಎಸ್‌ಐಆರ್ ಮೂಲಕ ಹಿಂಬಾಗಿಲಿಂದ ಮತಾಧಿಕಾರ ಕಸಿಯುವ ಹುನ್ನಾರ ಎಂದು ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಕಳವಳ ವ್ಯಕ್ತಪಡಿಸಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ ಎಸ್‌ಐಆರ್ ಜಾರಿ ಕುರಿತು ಸಮಾನ-ವಿರೋಧ ಹೊಂದಿರುವ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ವೆಲ್’ಫೇರ್ ಪಾರ್ಟಿ ಇಂಡಿಯಾ, ಆಮ್ ಆದ್ಮಿ ಪಾರ್ಟಿ, ಬಹುಜನ ಸಮಾಜವಾದಿ ಪಕ್ಷ, ಸರ್ವೋದಯ ಪಕ್ಷ ಹಾಗೂ ರೈತಪರ ಸಂಘಟನೆಗಳು, ಮಹಿಳಾಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಕಾರ್ಮಿಕ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳೆಲ್ಲ ಒಗ್ಗೂಡಿ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಎಸ್‌ಐಆರ್ ವಿರೋಧ ಯಾಕೆ…. ಎಂಬುದನ್ನು ವಿವರವಾಗಿ ವಿಶ್ಲೇಷಿಸುತ್ತ ಮಾತನಾಡಿದರು.
“ಈ ದೇಶದ ಯಾವುದೇ ಒಬ್ಬ ನಾಗರಿಕ ತಾನು ಮತದಾನಕ್ಕೆ ಅರ್ಹನಾಗಿದ್ದರೂ ಕೂಡ, ತನ್ನ ಪೌರತ್ವವನ್ನು ಸಿದ್ಧಪಡಿಸದ ಹೊರತು ಮತ ಚಲಾಯಿಸಲು ಹಕ್ಕುದಾರನಾಗಿರುವುದಿಲ್ಲ ಎಂಬುದಾಗಿದೆ. ಅಂದರೆ, ಪೌರತ್ವ-ಹಕ್ಕಿನ ಕಾಯ್ದೆಯನ್ವಯ ಸಲ್ಲಿಸಬೇಕಾದ ದಸ್ತಾವೇಜುಗಳನ್ನು ಈಗ ಈ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಲ್ಲಿಸಿ ಮತ್ತೆ ಹೊಸದಾಗಿ ಮತದಾನದ ಹಕ್ಕನ್ನು ಪಡೆಯಬೇಕಾದ ತುರ್ತು ಈಗ ಒದಗಿಬಂದಿದೆ” ಎಂದರು.

“ಬಡವರು, ಹಿಂದುಳಿದವರು, ದಲಿತರು, ಆದಿವಾಸಿ-ಅಲೆಮಾರಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಬಹುಪಾಲು ಬಡವರು ಮತ್ತು ಅನಕ್ಷರಸ್ಥರೇ ತುಂಬಿರುವಾಗ ತಮ್ಮ ತಾತ-ಮುತ್ತಾತಂದಿರ ಕಾಲದ ದಸ್ತಾವೇಜುಗಳನ್ನು ಹೊಂದಿರಲು ಅವರಿಂದ ಸಾಧ್ಯವೇ ಇಲ್ಲ. ಮತ್ತದನ್ನು ಈಗ ತಂದು ಚುನಾವಣಾ ಆಯೋಗದ ಈ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರಸ್ತುತಪಡಿಸುವುದು ದೂರದ ಮಾತೇ ಸರಿ. ಈ ವಾಸ್ತವಾಂಶಗಳ ಬಗ್ಗೆ ಅರಿವಿದ್ದೂ ಕೂಡ ಭಾರತ ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ಜಾರಿ ಮಾಡುತ್ತಿರುವುದರ ಹಿಂದಿನ ಹುನ್ನಾರವೇನೆಂದು ಪರಿಶೀಲಿಸಿದರೆ, ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿರುವ ಚುನಾವಣಾ ಆಯೋಗವು ಆದಿವಾಸಿ-ಅಲೆಮಾರಿ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳನ್ನು ಮತದಾನದಿಂದ ಹೊರಗಿಡುವ ಬಿಜೆಪಿ ಪಕ್ಷದ ಹಿಡನ್-ಅಜೆಂಡಾವನ್ನೇ ಜಾರಿ ಮಾಡುತ್ತಿದೆ” ಎಂಬ ಅನುಮಾನ ಬರುತ್ತಿದೆ.

“ಇಲ್ಲಿ ಮತದಾರ-ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಮತದಾರ-ಪಟ್ಟಿಯಿಂದ ಹೆಸರುಗಳನ್ನು ಕೈ-ಬಿಡುವುದೇ ಮುಖ್ಯವಾಗಿದೆ. ಒದಗಿಸಲಾಗದ ದಸ್ತಾವೇಜುಗಳನ್ನು ಅಪೇಕ್ಷಿಸುತ್ತಿರುವ ಚುನಾವಣಾ ಆಯೋಗವು, ಬಡವರು ಮತ್ತು ಅಂಚಿನ ಜನರ ಮತದಾನದ-ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಲು ಆರಂಭಿಸಿದೆ. ಇದು ಬಿಜೆಪಿ ಪಕ್ಷದ ಹಿಡನ್-ಅಜೆಂಡಾ ಜಾರಿಯೇ ಹೊರತು, ಜನಪರವಾದ ಕೆಲಸವಲ್ಲ” ಎಂದು ಸ್ಪಷ್ಟಪಡಿಸಿದರು.
“ಬಡವರು ಮತ್ತು ಅಲಕ್ಷಿತರನ್ನು ಹೀಗೆ ಮೂಲೆಗುಂಪು ಮಾಡುವ ತಂತ್ರ ನಮ್ಮ ದೇಶಕ್ಕೆ ಅಪಾಯಕಾರಿ. ಪ್ರಜಾಪ್ರಭುತ್ವಕ್ಕೆ ಮಾರಕ. ಸಾಂವಿಧಾನಿಕ ಆಶಯಗಳಿಗೆ ಹಾನಿಕಾರಕ. ಹಾಗಾಗಿ ಎಸ್‌ಐಆರ್ ಜಾರಿಗೆ ನಮ್ಮ ತೀವ್ರ ವಿರೋಧವಿದೆ. ಕೇರಳ ಸರ್ಕಾರ ತನ್ನ ರಾಜ್ಯದಲ್ಲಿ ಚುನಾವಣಾ ಆಯೋಗದ ಎಸ್‌ಐಆರ್-ಪ್ರಕ್ರಿಯೆ ನಡೆಸುವುದಿಲ್ಲವೆಂದು ವಿಧಾನಸಭೆಯಲ್ಲಿ ಅಂಗೀಕಾರ ನಿರ್ಣಯಿಸಿ ಎಸ್‌ಐಆರ್ ಜಾರಿಯನ್ನು ತಡೆದಿದೆ. ಇದೇ ನೀತಿಯನ್ನನುಸರಿಸಿ, ಕರ್ನಾಟಕ ಸರ್ಕಾರವೂ ಕೂಡ ತನ್ನ ವಿಧಾನಸಭೆಯಲ್ಲಿ ಎಸ್‌ಐಆರ್ ಅಂಗೀಕಾರ ನಿರ್ಣಯಿಸಿ, ಕರ್ನಾಟಕದಲ್ಲಿಯೂ ಎಸ್‌ಐಆರ್ ಜಾರಿಯಾಗದಂತೆ ತಡೆಯಬೇಕು” ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದರು.

ಪ್ರಗತಿಪರ ಚಿಂತಕ ಕೆ ದೊರೈರಾಜು ಮಾತನಾಡಿ, “ಬಲಹೀನರು ಮತ್ತು ಬಡವರ ಪರವಾಗಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೇವಲ ಉಳ್ಳವರ ಪರ ಮಾಡಿಡುವ ಕುತಂತ್ರ ಕಳೆದ ಒಂದು ದಶಕದಿಂದಲೂ ನಡೆಯುತ್ತಲೇ ಇದೆ. ಇದರ ಮುಂದುವರಿಕೆಯ ಭಾಗವಾಗಿ ಈಗ ಈ ಎಸ್‌ಐಆರ್-ಜಾರಿ ಮಾಡಲಾಗುತ್ತಿದೆ. ಇದು, ಬಡವರು ಮತ್ತು ಬಲಹೀನರ ಮತದಾನದ-ಹಕ್ಕನ್ನು ಕಸಿಯಲು ನೇರವಾಗಿ ಹೂಡಿರುವ ಹುನ್ನಾರವಾಗಿದೆ. ಇದು ಆಗಕೂಡದು ಎಂದಾದರೆ, ನಮ್ಮ ರಾಜ್ಯ ಸರ್ಕಾರ ಇದರ ವಿರುದ್ಧ ನಿರ್ಣಯವನ್ನು ಅಂಗೀಕರಿಸಿ ಕರ್ನಾಟಕದಲ್ಲಿ ಇದು ಜಾರಿಯಾಗದಂತೆ ತಡೆಯಬೇಕು. ಹಾಗೂ ಜಾತ್ಯತೀತ-ಪಕ್ಷಗಳೆಂದು ಹೇಳಿಕೊಳ್ಳುವ ಸಾಫ್ಟ್-ಕೋಮುವಾದಿಗಳು ಮೈ-ಚಳಿಬಿಟ್ಟು ಬಹಿರಂಗದಲ್ಲಿ ಬಂದು ಇದರ ವಿರುದ್ಧ ಮಾತನಾಡಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಕೆಡಿಸಿಸಿ ಬ್ಯಾಂಕ್ ಚುನಾವಣೆ: ಮಂಕಾಳ ವೈದ್ಯರ ಅವಿರೋಧ ಆಯ್ಕೆ ಬಹುತೇಕ ಖಚಿತ
ದುಂಡುಮೇಜಿನ ಸಭೆಯಲ್ಲಿ, ಕೆ ದೊರೈರಾಜು, ಯತಿರಾಜು, ನಟರಾಜಪ್ಪ, ಜವಾಹರ್, ಅನುಪಮಾ, ಸಮೀಉಲ್ಲಾ, ಅಲ್ಲಾಬಕ್ಷ್, ಅಶ್ವತಯ್ಯ, ಕಲ್ಪನಾ, ತಿರುಮಲಯ್ಯ, ತಹಸೀನ್ ಮೈಸೂರಿ, ನಯಾಜ಼್ ಅಹಮದ್, ರಾಮಾಂಜಿನಪ್ಪ, ಶಂಬಣ್ಣ, ಮೂರ್ತಿ, ಬಿ ಉಮೇಶ್, ಷಣ್ಮುಗಪ್ಪ, ಕಮಲ, ಬಾಬು ಮನಸೇ, ಕಿಶೋರ್, ವಸೀಮ್, ರಾಜಮ್ಮ, ಭೋಜರಾಜು, ಅಜ್ಜಪ್ಪ, ಅಪ್ಸರ್, ರಾಘವೇಂದ್ರ, ಲಕ್ಷ್ಮಿಕಾಂತು ಮುಂತಾದವರು ಇದ್ದರು.
ಸಭೆಯಲ್ಲಿ, ಜನಪರ ಹೋರಾಟಗಾರರು, ರಾಜಕೀಯ ಮುಖಂಡರು, ಪಕ್ಷ-ಪ್ರಮುಖರು, ಮಹಿಳಾಪರ, ದಲಿತಪರ, ರೈತಪರ, ಕಾರ್ಮಿಕಪರ ಚಳವಳಿಗಾರರು, ಪ್ರಗತಿಪರರು, ಚಿಂತಕರು, ಬರಹಗಾರ-ಲೇಖಕರು ಮತ್ತು ಪತ್ರಕರ್ತರು ಭಾಗವಹಿಸಿದ್ದರು.
ವರದಿ : ಸಂಚಲನ, ಚಿಕ್ಕನಾಯಕನ ಸೀಮೆಯಿಂದ





