ಸರ್ಕಾರಿ ನೌಕರರು ಒತ್ತಡಗಳ ನಡುವೆ ಕೆಲಸ ಮಾಡುವುದರಿಂದ ತಮ್ಮ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ದೈಹಿಕವಾಗಿ ಸದೃಢರಾಗಲು ಕ್ರೀಡೆ ಅತ್ಯಗತ್ಯ ಎಂದು ತುಮಕೂರು ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಅಭಿಪ್ರಾಯಪಟ್ಟರು.
ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ 2023-24ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರು.
“ಕಳೆದ ಬಾರಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಮಾಡಲಾಗಿತ್ತು, ಇದರಿಂದ ಜಿಲ್ಲೆಗೆ ರಾಜ್ಯ ಮಟ್ಟದಲ್ಲಿ ಒಳ್ಳೆಯ ಹೆಸರು ಬಂದಿತ್ತು. ಅದೇ ರೀತಿಯಲ್ಲಿ ಈ ಬಾರಿಯೂ ಕೂಡ ಜಿಲ್ಲಾಡಳಿತದ ಸಂಪೂರ್ಣ ಸಹಕಾರ ಸಂಘಕ್ಕೇ ನೀಡಲಾಗುವುದು” ಎಂದರು.
“ರಾಜ್ಯದ ಅನೇಕ ಕಡೆಯಲ್ಲಿ ಕ್ರೀಡಾಕೂಟಗಳು ನಡೆದ ಸಂದರ್ಭದಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆ ಇರುತ್ತವೆ. ಆದರೆ ನಮ್ಮ ಜಿಲ್ಲೆಯ ಸರ್ಕಾರಿ ನೌಕರರಲ್ಲಿ ಒಳ್ಳೆಯ ಪ್ರತಿಭಾವಂತ ಕ್ರೀಡಾಪಟುಗಳು ಇರುವುದು ಸಂತಸ. ಜಿಲ್ಲಾ ಮಟ್ಟದಲ್ಲಿ ಗೆದ್ದು ರಾಜ್ಯ ಮಟ್ಟದಲ್ಲೂ ಪ್ರಶಸ್ತಿಗಳನ್ನು ಗೆದ್ದು ಬನ್ನಿ” ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್ ನರಸಿಂಹರಾಜು ಮಾತನಾಡಿ, “ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ, ಗೆಲ್ಲುವುದಲ್ಲ. ಎಲ್ಲರೂ ಶಾಂತಿಯುತವಾಗಿ ಆಟ ಆಡಿ, ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ” ಎಂದು ತಿಳಿಸಿದರು.
“ಪ್ರತಿ ವರ್ಷವೂ ಕೂಡ ಹೊಸ ಹೊಸ ರೀತಿಯಲ್ಲಿ ಕ್ರೀಡಾಕೂಟವನ್ನು ಮಾಡಲಾಗುತ್ತಿದೆ. ಎಲ್ಲ ಕ್ರೀಡಾಪಟುಗಳಿಗೆ ಎರಡು ದಿನಗಳ ಕಾಲ ಊಟದ ವ್ಯವಸ್ಥೆ ಮಾಡಲಾಗಿದೆ. ವೇಳಾಪಟ್ಟಿಯಲ್ಲಿ ನಿಯೋಜನೆ ಮಾಡಿರುವ ಸ್ಥಳಗಳಲ್ಲಿ ಸಮಯಕ್ಕೆ ಸರಿಯಾಗಿ ಆಟಗಳು ಪ್ರಾರಂಭಗೊಳ್ಳುತ್ತವೆ. ವೇಳಾಪಟ್ಟಿಯ ಪ್ರಕಾರ ಕ್ರೀಡಾ ಪಟುಗಳು ತಮ್ಮ ತಮ್ಮ ಆಟಗಳಲ್ಲಿ ಭಾಗವಹಿಸಬಹುದು. ಜಿಲ್ಲಾ ಮಟ್ಟದಲ್ಲಿ ಗೆದ್ದ ಅಭ್ಯರ್ಥಿಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಕಳುಹಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಾಲ್ಯ ವಿವಾಹ ಹೆಚ್ಚಳ; ಸುಮೊಟೊ ಪ್ರಕರಣ ದಾಖಲಿಸಲು ಡಿಸಿ ಸೂಚನೆ
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ಟಿ ಆರ್, ರಾಜ್ಯ ಸರ್ಕಾರಿ ನೌಕರರ ಸಂಘ ಮಧುಗಿರಿ ಶೈಕ್ಷಣಿಕ ಜಿಲ್ಲೆ ಜಿಲ್ಲಾಧ್ಯಕ್ಷ ಜಯರಾಮಯ್ಯ ಜಿ, ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಕಾರ್ಯದರ್ಶಿ ಟಿ ಎನ್ ಜಗದೀಶ್, ಖಜಾಂಚಿ ಲಕ್ಷ್ಮಿನರಸಿಂಹಯ್ಯ ಬಿ ಎನ್, ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ರಾಜ್ಯ ಪರಿಷತ್ ಸದಸ್ಯ ನರಸಿಂಹಮೂರ್ತಿ ಹೆಚ್ ಕೆ, ಕುಣಿಗಲ್ ತಾಲೂಕು ಅಧ್ಯಕ್ಷ ವೆಂಕಟೇಶ್ ಜಿ ಆರ್, ಸಿರಾ ತಾಲೂಕು ಅಧ್ಯಕ್ಷ ಬಿ ಎಂ ಲಕ್ಷ್ಮೀಶ, ತುರುವೇಕೆರೆ ತಾಲೂಕು ಅಧ್ಯಕ್ಷ ಎನ್ ರಾಜು, ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷ ಆರ್ ಪರಶಿವಮೂರ್ತಿ, ಕೊರಟಗೆರೆ ತಾಲೂಕು ಅಧ್ಯಕ್ಷ ಎಚ್ ಎಂ ರುದ್ರೇಶ್, ಪಾವಗಡ ತಾಲೂಕು ಅಧ್ಯಕ್ಷ ಜಿ ಕಿರಣ್, ಗುಬ್ಬಿ ತಾಲೂಕು ಅಧ್ಯಕ್ಷ ಕರುಣಾಕರಶೆಟ್ಟಿ ಪಿ ಸೇರಿದಂತೆ ಜಿಲ್ಲೆಯ ಸರ್ಕಾರಿ ನೌಕರ ಕ್ರೀಡಾ ಪಟುಗಳು ಇದ್ದರು.





