ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಸ್ಲಂ ಜನರ ಬೇಡಿಕೆ ಈಡೇರಿಸಲು ಒತ್ತಾಯಿಸಿ ತುಮಕೂರು ಸ್ಲಂ ಸಮಿತಿಯಿಂದ 500ಕ್ಕೂ ಹೆಚ್ಚು ಸ್ಲಂ ನಿವಾಸಿಗಳು ಡಿಸೆಂಬರ್ 15ರಂದು ಬೆಳಗಾವಿಯಲ್ಲಿ ಪ್ರತಿಟಿಭಟನಾ ಸಭೆ ನಡೆಸಲು ಬೆಳಗಾವಿ ಚಲೋ ನಡೆಸುವುದಾಗಿ ತಿಳಿಸಿದೆ.
ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ-ಕರ್ನಾಟಕ ವತಿಯಿಂದ ಬೆಳಗಾವಿ ಅಧಿವೇಶನದಲ್ಲಿ ಸ್ಲಂ ನಿವಾಸಿಗಳ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾ ಸಭೆ ಸಂಬಂಧ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಆ ಕುರಿತ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಾವಿತ್ರಿ ಬಾ ಫುಲೆ ಮಹಿಳಾ ಸಂಘಟನೆಯ ಸಂಚಾಲಕಿ ಅನುಪಮಾ ಅವರು ಸಭೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, “ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಸ್ಲಂ ನಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಡಿಸೆಂಬರ್ 15ರಂದು ಸ್ಲಂ ಜನಾಂದೋಲನ ಕರ್ನಾಟಕದಿಂದ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯ ಕನ್ನಡ ಭವನದಲ್ಲಿ ರಾಜ್ಯ ಮಟ್ಟದ ಪ್ರತಿಭಟನಾ ಸಭೆಗೆ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ 500ಕ್ಕೂ ಹೆಚ್ಚು ಸ್ಲಂ ನಿವಾಸಿಗಳು ಭಾಗವಹಿಸುವಂತೆ ಜಿಲ್ಲಾ ಮಟ್ಟದ ಸ್ಲಂ ನಿವಾಸಿಗಳ ಸಭೆಯಲ್ಲಿ ಕರೆ ನೀಡಲಾಗಿದೆ. ಸ್ಲಂ ನಿವಾಸಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತುರ್ತು ಗಮನಹರಿಸಲಿ. ನುಡಿದಂತೆ ನಡೆಯುತ್ತೇವೆ ಎನ್ನುವ ರಾಜ್ಯ ಸರ್ಕಾರ ಪ್ರಣಾಳಿಕೆಯಲ್ಲಿ ನುಡಿದಂತೆ ನಡೆಯಲಿ” ಎಂದು ಒತ್ತಾಯಿಸಿದರು.
ಸ್ಲಂ ಸಮಿತಿಯ ಅರುಣ್ ಮಾತನಾಡಿ, “ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಜನರ ಆಹವಾಲುಗಳನ್ನು ಸ್ವೀಕರಿಸುತ್ತಿರುವುದು ಅಭಿನಂದನೀಯ. ಆದರೆ ಮನವಿಗಳಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ, ಅದಿವೇಶನ ಜನರ ದಿಕ್ಕು ತಪ್ಪಿಸದೇ ಹುಸಿ ಭರವಸೆಗಳಿಗೆ ಸೀಮಿತವಾಗದೆ, ರಾಜ್ಯದ ಜನರಿಗೆ ಜನಪರವಾದ ಮತ್ತು ಸಂವಿಧಾನದ ಸಮಪಾಲು ಆಶಯವನ್ನು ಸರ್ವರಿಗೂ ತಲುಪಿಸುವಂತಾಗಲಿ. ರಾಜ್ಯದ ಸ್ಲಂ ನಿವಾಸಿಗಳಿಗೆ ವಸತಿ, ಹಕ್ಕುಪತ್ರ, ಭೂಮಿಹಕ್ಕು ನೀಡಬೇಕು. ಖಾಸಗಿ ಒಡೆತನದಲ್ಲಿರುವ 705 ಸ್ಲಂಗಳ ಘೋಷಣೆಗೆ ತೊಡಕಾಗಿರುವ ಸುತ್ತೋಲೆಯನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿದ್ದೀರಾ? ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ, ಪರ-ವಿರೋಧ ಚರ್ಚೆ: ಸಮಸ್ಯೆಗೆ ಪ್ರತ್ಯೇಕ ರಾಜ್ಯ ಪರಿಹಾರವೇ?
ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಪದಾಧಿಕಾರಿಗಳಾದ ತಿರುಮಲಯ್ಯ, ಶಂಕ್ರಯ್ಯ, ಕಣ್ಣನ್, ಕೃಷ್ಣಮೂರ್ತಿ, ಧನಂಜಯ್, ಮುಬಾರಕ್, ಕೆಂಪಣ್ಣ, ಮುರುಗನ್, ಸಾವಿತ್ರಿ ಬಾ ಫುಲೆ ಮಹಿಳಾ ಸಂಘಟನೆಯ ಪದಾಧಿಕಾರಿಗಳಾದ ಪೂರ್ಣಿಮಾ, ವಸಂತಮ್ಮ, ಗಂಗಮ್ಮ, ಸುಹೇಲ್ ಜಾಬೀರ್‌ಖಾನ್ ಸೇರಿದಂತೆ ಇತರರು ಇದ್ದರು.





