ತುಮಕೂರಿನ ರಿಂಗ್ ರಸ್ತೆಗಾಗಿ ಸ್ವಾಧೀನಗೊಂಡ ಜಮೀನಿಗೆ ಹೆಚ್ಚಿನ ಭೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ(ಟೂಡಾ) ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ.
ತುಮಕೂರಿನ 1ನೇ ಅಧಿಕ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಪೀಠೋಪಕರಣಗಳು ವಶಕ್ಕೆ ಪಡೆಯಲಾಗಿದೆ.
2018ರಲ್ಲೇ 82 ಲಕ್ಷ ರೂಪಾಯಿ ಹೆಚ್ಚಿನ ಪರಿಹಾರ ನೀಡಲು ಕೋರ್ಟ್ ಆದೇಶ ನೀಡಿತ್ತು. ಕೋರ್ಟ್‌ನ ಆದೇಶದಂತೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಇಂದು ಪೀಠೋಪಕರಣ ಜಪ್ತಿ ಮಾಡಲಾಗಿದೆ.

ಕುರ್ಚಿ, ಟೇಬಲ್ ಹಾಗೂ ಸೋಫಾಗಳನ್ನು ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಕೋರ್ಟ್‌ನ ಆದೇಶಕ್ಕೂ ‘ಡೋಂಟ್ ಕೇರ್’ ಎನ್ನದ ತುಮಕೂರು ಟೂಡಾ ಆಯುಕ್ತರು, ಸರ್ವಾಧಿಕಾರಿಯಂತೆ ವರ್ತಿಸಿ ಕಚೇರಿ ಜಪ್ತಿಯ ತನಕ ತಂದುಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹಿರಿಯ ವಕೀಲರಾದ ಪಿ.ಆರ್. ಜಯರಂಗಯ್ಯ ಹಾಗೂ ಕಾಂತರಾಜು ಹೆಚ್.ಆರ್. ನೇತೃತ್ವದಲ್ಲಿ ಜಪ್ತಿ ಮಾಡಲಾಗಿದೆ.
ಇದನ್ನು ಓದಿದ್ದೀರಾ? ‘ಅಡ್ವಾಣಿ ನಿಧನರಾಗಿದ್ದಾರೆ’ ಎಂದು ಹೇಳಿ ಶ್ರದ್ಧಾಂಜಲಿ ಸಲ್ಲಿಸಿದ ಕೇಂದ್ರ ಸಚಿವ ವಿ ಸೋಮಣ್ಣ!
ರಿಂಗ್ ರಸ್ತೆಗಾಗಿ ರೈತ ಲಂಕ್ಯಪ್ಪ ಅವರ 36 ಗುಂಟೆ ಜಮೀನನ್ನು ಟೂಡಾ ಭೂಸ್ವಾಧೀನ ಮಾಡಿಕೊಂಡಿತ್ತು. ಭೂ ಪರಿಹಾರವಾಗಿ ಅಲ್ಪ-ಸ್ವಲ್ಪ ಹಣ ನೀಡಿ ಕೈ ತೊಳೆದುಕೊಂಡಿತ್ತು. 82 ಲಕ್ಷ ರೂ. ಹೆಚ್ಚಿನ ಪರಿಹಾರ ನೀಡುವಂತೆ 2018ರಲ್ಲೇ ಕೋರ್ಟ್ ಆದೇಶ ಹೊರಡಿಸಿತ್ತು. ಆರು ವರ್ಷಗಳಿಂದಲೂ ಕೋರ್ಟ್‌ನ ಆದೇಶಕ್ಕೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕ್ಯಾರೇ ಎಂದಿರಲಿಲ್ಲ. ಇಂದು ಕೋರ್ಟ್ ಆದೇಶದಂತೆ ಕಚೇರಿಯ ಎಲ್ಲ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ.





