ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು ತಾಲೂಕಿನ ಗೊಲ್ಲಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತಮ್ಮ ಪತ್ನಿ ಕನ್ನಿಕಾ ಪರಮೇಶ್ವರ್ ಅವರೊಂದಿಗೆ ತೆರಳಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
“ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಈ ಮೂಲಕ ಕೇಂದ್ರದಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಅಚಲ ವಿಶ್ವಾಸವಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರು ಆಯ್ಕೆಯಾಗುವ ವಿಶ್ವಾಸ ತಮಗಿದೆ” ಎಂದರು.
“ಇಡೀ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಮುದ್ದಹನುಮೇಗೌಡರ ಪರ ಜನರು ಒಲವು ತೋರಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಕೊಟ್ಟ ಭರವಸೆಗಳನ್ನು ಅನುಷ್ಠಾನ ಮಾಡಿದ್ದೇವೆ. ಅದರಿಂದ ಬಡವರಿಗೆ ಅನುಕೂಲವಾಗಿದೆ” ಎಂದು ಹೇಳಿದರು.
“ಕೇಂದ್ರದಲ್ಲಿ ಒಳ್ಳೆಯ ಸರ್ಕಾರ ಅಧಿಕಾರಕ್ಕೆ ಬರಬೇಕೆನ್ನುವುದು ನಮ್ಮ ಆಶಯ. ಯಾವುದೇ ಧರ್ಮ ಆಧಾರಿತ, ಪ್ರಾಂತ್ಯ ಆಧಾರಿತ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿರಬಾರದು. ಕೇಂದ್ರದಿಂದ ನಮಗೆ ಬರಬೇಕಾದ ಪಾಲು ಸರಿಯಾಗಿ ಬರಲಿಲ್ಲ. ತಾರತಮ್ಯ ಮಾಡುವುದನ್ನು ಇತ್ತೀಚಿನ ದಿನಗಳಲ್ಲೂ ಹೆಚ್ಚು ನೋಡಿದ್ದೇವೆ. ಕೇಂದ್ರದಿಂದ ಕರ್ನಾಟಕಕ್ಕೆ ಹೆಚ್ಚು ಅನ್ಯಾಯವಾಗಿದೆ” ಎಂದು ದೂರಿದರು.
“ಪ್ರಕೃತಿ ವಿಕೋಪವಾದಾಗ ನಮಗೆ ಪರಿಹಾರ ಬರಲಿಲ್ಲ. ಇದನ್ನು ನಾವು ಜನರಿಗೆ ತೋರಿಸುವ ಕೆಲಸ ಮಾಡಿದ್ದೇವೆ. ಮಾಧ್ಯಮಗಳೂ ಕೂಡ ಅದನ್ನೇ ತೋರಿಸಿವೆ” ಎಂದರು.
ಇವಿಎಂ ಯಂತ್ರಗಳ ಬಗ್ಗೆ ಅನುಮಾನ ಇರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, “ಆ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ನಾವು ವೋಟ್ ಹಾಕಿದಾಗ ಎಲ್ಲ ಸರಿಯಾಗಿ ತೋರಿಸಿದೆ. ಆದರೆ ಒಳಗೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಒಳಗೆ ಏನಾಗುತ್ತದೆ ಎನ್ನುವುದನ್ನು ಯಾರೂ ಊಹೆ ಮಾಡಲು ಆಗಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಹಿಂದು ಕಾರ್ಯಕರ್ತನ ಮೇಲೆ ಬಿಜೆಪಿಗರ ಹಲ್ಲೆ
“ಕಾಸರಗೋಡಿನಲ್ಲಿ ಯಾವುದೇ ಬಟನ್ ಒತ್ತಿದರೂ ಒಂದೇ ಪಕ್ಷಕ್ಕೆ ಮತ ಹೋಗುತ್ತದೆ ಎನ್ನುವುದನ್ನು ತೋರಿಸಿಕೊಡಲಾಗಿದೆ. ಇದನ್ನು ನೋಡಿದ ಮೇಲೆ ಹಾಗೆಯೇ ಆಗುತ್ತದೆ ಎಂದಾಯಿತಲ್ಲ” ಎಂದು ಇವಿಎಂ ವಿರುದ್ಧ ಅಸಮಾಧಾನ ಹೊರ ಹಾಕಿದರು.
“ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ಕಿಚ್ಚಾವಾಡಿ ಗ್ರಾಮದಲ್ಲಿ ವಾಟರ್ ಮನ್ ಸಾವನ್ನಪ್ಪಿರುವ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ. ಮೊದಲು ಪೊಲೀಸರ ಮೇಲೆ ನಂಬಿಕೆ ಇಡಬೇಕು” ಎಂದರು.





