ನಾವೆಲ್ಲರೂ ಹಿಂದುಗಳೇ. ಆದರೆ, ನಮ್ಮದು ಗಾಂಧಿಯ ಹಿಂದುತ್ವ, ಬಿಜೆಪಿಯವರದ್ದು ಗೋಡ್ಸೆ ಹಿಂದುತ್ವ. ಗೋಡ್ಸೆ ಹಿಂದುತ್ವವದಲ್ಲಿ ಕೊಲೆ, ಸುಲಿಗೆಗಳಿಲ್ಲದೆ ಇನ್ನೇನು ಇರಲು ಸಾಧ್ಯ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಪ್ರಶ್ನಿಸಿದರು.
ತುಮಕೂರು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಕಾರ್ಯಕ್ರಮ ಹಾಗೂ ಕೆ.ಎನ್.ಆರ್. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮರಾಠರ ಹಿಂದೂ ಪೇಶ್ವೆಗಳು ಕರ್ನಾಟಕದ ಪ್ರಮುಖ ದೇವಾಲಯಗಳ ಮೇಲೆ ದಾಳಿ ನಡೆಸಿದಾಗ, ಅವರನ್ನು ಹಿಮ್ಮೆಟ್ಟಿಸಿದವ ಮೈಸೂರು ಹುಲಿ ಟಿಪ್ಪು ಸುಲ್ತಾನ್. ಆತನನ್ನು ದೇಶದ್ರೋಹಿ ಎನ್ನುತ್ತಾರೆ. ಟಿಪ್ಪು ಸುಲ್ತಾನ್ ಆರಂಭಿಸಿದ ಕನ್ನಂಬಾಡಿ ಕಟ್ಟೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಪೂರ್ಣಗೊಳಿಸಿದರು. ಟಿಪ್ಪು ಬಳಕೆ ಮಾಡುತ್ತಿದ್ದ ರಾಕೇಟ್ ತಂತ್ರಜ್ಞಾನವನ್ನು ಇಂದು ಇಸ್ರೋಗೆ ಬಳಕೆ ಮಾಡಲಾಗುತ್ತಿದೆ.
ಇತಿಹಾಸವನ್ನು ತಿರುಚುವುದರಿಂದ ಕೆಲ ಕಾಲ ಸತ್ಯವನ್ನು ಮರೆ ಮಾಚಬಹುದು. ಹಾಗಾಗಿ ಹಿಂದುಳಿದ ವರ್ಗಗಳು ರಾಜಕೀಯ ಪ್ರಜ್ಞೆಯ ಜೊತೆಗೆ, ಇತಿಹಾಸ ಪ್ರಜ್ಞೆಯನ್ನು ಬೆಳೆಸಿಕೊಂಡು ಮುನ್ನೆಡೆಯುವುದು ಸೂಕ್ತ ಎಂದರು.
ನನ್ನದು ಬಡವರ ಜಾತಿ. ನಾನು ಎಲ್ಲಾ ವರ್ಗದ ಬಡವರ ಪ್ರತಿನಿಧಿ, ಇಂದಿಗೂ ಚಿಕ್ಕಪೇಟೆಯಲ್ಲಿ ಒಂದೊತ್ತಿನ ಊಟ ಮಾಡುವ ಬಡ ಬ್ರಾಹ್ಮಣರಿದ್ದಾರೆ. ಚುನಾವಣೆಗೋಸ್ಕರ ಶ್ರೀರಾಮನ ಜಪ ಮಾಡುತ್ತಿರುವ ಪಕ್ಷದ ಕಣ್ಣಿಗೆ ಇದು ಕಾಣುವುದಿಲ್ಲವೇ? ಇಷ್ಟೊಂದು ಅಬ್ಬರದಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರ ಬಿಜೆಪಿಯದ್ದೋ, ಇಲ್ಲ ಮೋದಿ ಅವರದ್ದೋ ಎಂಬುದು ಐದಾರು ತಿಂಗಳಲ್ಲಿ ಗೊತ್ತಾಗಲಿದೆ. ಜನರ ಭಾವನೆಗಳೊಂದಿಗೆ ಆಟ ಆಡುವುದನ್ನು ನಿಲ್ಲಿಸಿದಷ್ಟು ಒಳ್ಳೆಯದು ಎಂದರು.




