‘ಮುಂದೆ ಯಾವ ಪಕ್ಷದ ಬಾವುಟ ಹಿಡಿಯುತ್ತೇನೋ ಗೊತ್ತಿಲ್ಲ’ ಎಂದು ಹೇಳುವ ಮೂಲಕ ಕಾಂಗ್ರೆಸ್‌ನ ಮಾಜಿ ಮಂತ್ರಿ ಹಾಗೂ ಮಧುಗಿರಿ ಶಾಸಕ ಕಾಂಗ್ರೆಸ್ ಬಿಡಲು ಸಿದ್ಧವಾಗಿದ್ದಾರೆಯೇ ಎನ್ನುವ ಚರ್ಚೆ ಹುಟ್ಟುಹಾಕಿದ್ದಾರೆ.
ಮಧುಗಿರಿ ತಾಲೂಕಿನ ದೊಡ್ಡೇರಿಯಲ್ಲಿ ನಡೆದ ಬೈಕ್ ರ್ಯಾಲಿಯಲ್ಲಿ ಕಾಂಗ್ರೆಸ್ ಬಾವುಟ ಹಿಡಿಯದೇ ಇರುವುದರ ಬಗ್ಗೆ ಪ್ರಸ್ತಾಪಿಸಿದ ಕೆ.ಎನ್.ರಾಜಣ್ಣ, 2004ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ವೈಟ್ ವಾಷ್ ಆಗಿತ್ತು. ಮುಂದೆ ಅಂತಹ ಪರಿಸ್ಥಿತಿ ಬರಬಹುದು ಎಂದು ಹೇಳುವ ಮೂಲಕ ತನ್ನನ್ನು ಕಡೆಗಣಿಸಿದರೆ ಏನಾಗಬಹುದು
ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ನೇರವಾಗಿಯೇ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ರಾಜಕೀಯ ಚದುರಂಗದಾಟದಲ್ಲಿ ಸಿದ್ದರಾಮಯ್ಯ ಅವರ ಪರವಾಗಿರುವ ರಾಜಣ್ಣ ಸಿಎಂ ಬೆಂಬಲಕ್ಕೆ ನಿಲ್ಲುವ ಭರದಲ್ಲಿ ವ್ಯಕ್ತಿ ನಿಷ್ಠೆ ಪ್ರದರ್ಶಿಸಲು ಹೋಗಿ ಸಡಿಲ ಮಾತುಗಳ ಮೂಲಕ ಪಕ್ಷವನ್ನು ಹಾಗೂ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಸಿದ್ದರಾಮಯ್ಯನ ನೇತೃತ್ವದ ಸರ್ಕಾರ ರಚನೆ ಸಂದರ್ಭದಲ್ಲಿ ಎಐಸಿಸಿ ವರಿಷ್ಠರು ಕೆಲವು ನಿಬಂಧನೆಗಳನ್ನು ಹಾಕಿದ್ದರು. ಅಂತಹ ನಿಬಂಧನೆಗಳನ್ನು ರಾಜಣ್ಣ ಉಲ್ಲೇಖಿಸಿದ್ದರು. ರಾಜಕೀಯ ಚದುರಂಗದಾಟದಲ್ಲಿ ರಾಜಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ವ್ಯಕ್ತಿನಿಷ್ಠೆ ಪ್ರದರ್ಶಿಸಲು ಹೋಗಿ ಪಕ್ಷಕ್ಕೆ ಧಕ್ಕೆ ತಂದಿದ್ದರು. ಮಂತ್ರಿಯಾದ್ದಾಗ ಸಡಿಲ ಮಾತುಗಳ ಮೂಲಕ ಪಕ್ಷವನ್ನು, ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಮತಗಳ್ಳತನ ವಿಚಾರದಲ್ಲಿ ವಿವಾದದ ಹೇಳಿಕೆ ನೀಡಿದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯವ ಬದಲು ಅನಿವಾರ್ಯವಾಗಿ ಸಚಿವ ಸ್ಥಾನ ವಜಾ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಹೈಕಮಾಂಡ್ ಮಾತು ಮೀರಿ ರಾಜಣ್ಣ ಪರ ಸಿಎಂ ನಿಲ್ಲಲೂ ಆಗಲಿಲ್ಲ. ಜಿಲ್ಲೆಯ ಕಾಂಗ್ರೆಸ್ ನಾಯಕರು ಒಟ್ಟಾಗಿ ರಾಜಣ್ಣ ಅವರ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಸಚಿವ ಸ್ಥಾನ ಕಳೆದುಕೊಂಡ ಮೇಲೆ ಸಚಿವ ಪರಮೇಶ್ವರ ಅವರು ಅಂತರ ಕಾಯ್ದುಕೊಂಡಿರುವುದು ಈಗ ಜಗಜ್ಜಾಹೀರು.
ಕಾಂಗ್ರೆಸ್ ನ ಹಿರಿಯ ಶಾಸಕರಾಗಿರುವ ರಾಜಣ್ಣ ಆರು ಬಾರಿ ಸ್ಪರ್ಧಿಸಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಆರು ಬಾರಿ ಸತತವಾಗಿ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜಿಲ್ಲಾ ರಾಜಕಾರಣದಲ್ಲಿ ಸ್ವಂತ ಬಲ ಬೆಳೆಸಿಕೊಂಡಿದ್ದಾರೆ. ಈ ಬಲದಿಂದಲೇ ದೇವೆಗೌಡರಿಗೂ ತೊಡೆ ತಟ್ಟಿ ಅರಗಿಸಿಕೊಂಡಿದ್ದು ಈಗ ಇತಿಹಾಸ. ಇದೀಗ ಕಾಂಗ್ರೆಸ್ ಹೈಕಮಾಂಡ್ ವಿರುದ್ದವೂ ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಹೆಚ್ಚುವರಿ ಡಿಸಿಎಂ ಬೇಡಿಕೆ, ತುಮಕೂರು ಲೋಕಸಭೆಗೆ ಮುದ್ದಹನುಮೇ ಗೌಡರನ್ನು ಅಭ್ಯರ್ಥಿ ಮಾಡಿ ಸೋಲಿಸಿದ್ದು, ತಮ್ಮ ಮೇಲೆ ಹನಿ ಟ್ರ್ಯಾಪ್ ಮಾಡಲಾಗಿದೆ ಎಂದು ಸ್ವಪಕ್ಷದವರ ಮೇಲೆಯೇ ಸದನದಲ್ಲಿ ಆರೋಪಿಸಿದ್ದು, ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂಬ ಬಾಂಬ್ ಸಿಡಿಸಿದ್ದು, ಶಾಸಕರ ಅಹವಾಲು ಕೇಳಲು ಬಂದಿದ್ದ ಸುರ್ಜೇವಾಲರಿಗೆ ಅಧಿಕಾರಿಗಳ ಸಭೆ ಮಾಡಲು ನೀವು ಯಾರು ಎಂದದ್ದು, ಕೆಪಿಸಿಸಿ ಅಧ್ಯಕ್ಷಗಿರಿಗೆ ಸಿದ್ಧ ಎಂದದ್ದು… ಈ ರೀತಿಯ ಅನಗತ್ಯ ಮಾತುಗಳನ್ನು ಆಡುವ ಮೂಲಕ ಮಾಧ್ಯಮಗಳಲ್ಲಿ ವಿವಾದಕ್ಕೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ತುಮಕೂರು | ತೆಂಗು ಬೆಳೆ : ಕೆಂಪು ಮೂತಿ ಹುಳು, ಅಣಬೆ ರೋಗ ಹತೋಟಿಗೆ ತರುವುದು ಹೇಗೆ ?
ಜಿಲ್ಲೆಯ ನಾಯಕರು ಒಗ್ಗಟ್ಟಿನಿಂದ ರಾಜಣ್ಣ ಬೆಂಬಲಕ್ಕೆ ನಿಲ್ಲುತ್ತಿಲ್ಲ. ತುಮುಲ್ ಅಧ್ಯಕ್ಷ ಸ್ಥಾನ ವಿಚಾರಕ್ಕೆ ಶಾಸಕ ಎಸ್.ಆರ್ ಶ್ರೀನಿವಾಸ್ ದೂರವಾದರೆ, ಡಿಕೆಶಿ ವಿರೋಧದಿಂದಾಗಿ ಕುಣಿಗಲ್ ಶಾಸಕ ಡಾ. ಎಚ್ ಡಿ ರಂಗನಾಥ್ ಕೆಎನ್‌ಆರ್ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಶಿರಾ ಶಾಸಕ ಟಿ ಬಿ ಜಯಚಂದ್ರ ಮೊದಲಿನಿಂದಲೂ ಅಷ್ಟೇನೂ ಒಡನಾಟ ಇಟ್ಟುಕೊಂಡಿಲ್ಲ. ಪಾವಗಡ ಶಾಸಕ ಎಚ್ ವಿ ವೆಂಕಟೇಶ್‌ಗೆ ತುಮುಲ್ ಅಧ್ಯಕ್ಷಸ್ಥಾನ ಕೊಡಿಸಿದ್ದರಿಂದ ಪ್ರಸ್ತುತ ಜೊತೆಯಲ್ಲಿದ್ದರೂ ಅರ್ಧ ಮನಸ್ಸು ಪರಮೇಶ್ವರ್ ಕಡೆಗಿದೆ. ಮತ್ತೊಬ್ಬ ತಿಪಟೂರಿನ ಹಿರಿಯ ಶಾಸಕ ಕೆ ಷಡಕ್ಷರಿ ರಾಜಣ್ಣನವರಿಗೆ ತಪ್ಪಿದ ಅಧಿಕಾರ ತಮಗೆ ಸಿಗಬಹುದು ಎಂದು ಕಾಯುತ್ತಿದ್ದಾರೆ. ಹೀಗೆ ರಾಜ್ಯ ಹಾಗೂ ಜಿಲ್ಲೆಯಲ್ಲಿ ನಿರೀಕ್ಷಿತ ಬೆಂಬಲ ಸಿಗದೆ ಒಬ್ಬೊಂಟಿತನದ ಆತಂಕದಲ್ಲಿ ರಾಜಣ್ಣ ಇದ್ದಾರೆ ಎನ್ನುವುದ ರಾಜಕೀಯ ವಿಶ್ಲೇಕರ ಮಾತು. ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಇದ್ದು, ಮುಂದೆ ಮಗನ ರಾಜಕೀಯ ಭವಿಷ್ಯ ರೂಪಿಸುವ ದೃಷ್ಟಿ ಇಟ್ಟುಕೊಂಡಿರುವುದಲ್ಲದೆ, ತಾವೂ ಕೂಡ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆಯನ್ನಿಟ್ಟುಕೊಂಡಿರುವುದಾಗಿ ಗೋಚರಿಸುತ್ತಿದೆ. ಇದೇ ಅಂಶಗಳ ಆಧಾರದ ಮೇಲೆ ಅವರು ಕಾಂಗ್ರೆಸ್ ತೊರೆದು ಬೇರೆಡೆ ತಮ್ಮ ಮತ್ತು ತಮ್ಮ ಮಗನ ರಾಜಕೀಯ ಭವಿಷ್ಯಕ್ಕೆ ಮುನ್ನುಡಿ ಬರೆಯಲಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಲ್ಲೀಗ ಭಾರೀ ಸದ್ದು ಮಾಡುತ್ತಿದೆ.





