ಜಗತ್ತು ತಂತ್ರಜ್ಞಾನಗಳ ಹಿಂದೆ ಓಡುತ್ತಿದೆ. ಎಐ ಇಡೀ ಜಗತ್ತನ್ನೇ ಆಳುತ್ತಿದೆ. ಆದರೆ, ಜನರಲ್ಲಿನ ಮೌಢ್ಯ ಮಾತ್ರ ಇನ್ನೂ ಸಾಮಾಜಿಕ ಪಿಡುಗಾಗಿ ಉಳಿದಿದೆ. ಮುಟ್ಟು ಮೈಲಿಗೆ, ಮುಟ್ಟಾದ ಹೆಣ್ಣುಮಕ್ಕಳು ಓಡಾಡುವುದರಿಂದ ದೇವರಿಗೆ ಮೈಲಿಗೆಯಾಗುತ್ತದೆ ಎಂದು ತುಮಕೂರು ಜಿಲ್ಲೆಯ ದೇವಾಲಯವೊಂದರ ಬಳಿಯಿದ್ದ ವಿದ್ಯಾರ್ಥಿನಿಯರ ಹಾಸ್ಟೆಲ್‌ಅನ್ನೇ ಮುಚ್ಚಿರುವ ಪ್ರಕರಣ ವಿಧಾನಸಭೆಯಲ್ಲಿ ಸದ್ದು ಮಾಡಿದೆ.
ಜಿಲ್ಲೆಯ ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ಏಳುಮಂದೆಮ್ಮ ದೇವಸ್ಥಾನದ ಪಕ್ಕದಲ್ಲಿರುವ ಸರ್ಕಾರಿ ವಿದ್ಯಾರ್ಥಿನಿಲಯವು ಮೂಢನಂಬಿಕೆಯ ಕಾರಣದಿಂದಾಗಿ 8 ವರ್ಷಗಳಿಂದ ಮುಚ್ಚಲ್ಪಟ್ಟಿದೆ. ಪಾಳು ಕೊಂಪೆಯಾಗಿ ಮಾರ್ಪಟ್ಟಿದೆ.
ಬಜೆಟ್ ಅಧಿವೇಶನದಲ್ಲಿ ಶೂನ್ಯವೇಳೆಯಲ್ಲಿ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರು ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದಾರೆ. “ಸಾರ್ವಜನಿಕರ 69 ಲಕ್ಷ ರೂಪಾಯಿ ಹಣ ವ್ಯರ್ಥವಾಗುತ್ತಿದೆ. ಈ ಬಗ್ಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಗ್ರಾಮೀಣ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ 2015ರಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆಯು 69 ಲಕ್ಷ ರೂ. ವೆಚ್ಚದಲ್ಲಿ ‘ಕಸ್ತೂರಿಬಾ ಬಾಲಿಕಾ ವಿದ್ಯಾರ್ಥಿನಿಲಯ’ವನ್ನು ನಿರ್ಮಿಸಿತ್ತು. ಆದರೆ, ಉದ್ಘಾಟನೆಯಾದ ಕೇವಲ ಒಂದು ತಿಂಗಳಲ್ಲೇ ಮೂಢನಂಬಿಕೆಗೆ ಹಾಸ್ಟೆಲ್ ಬಲಿಯಾಗಿ, ಮುಚ್ಚಿಹೋಗಿದೆ.
“ವಿದ್ಯಾರ್ಥಿನಿಲಯವು ಗ್ರಾಮದ ಶಕ್ತಿ ದೇವತೆ ‘ಏಳುಮಂದೆಮ್ಮ’ ದೇವಸ್ಥಾನದ ಪಕ್ಕದಲ್ಲಿದೆ. ಮುಟ್ಟಾದ ಹೆಣ್ಣುಮಕ್ಕಳು ದೇವಸ್ಥಾನದ ಮುಂಭಾಗ ಓಡಾಡಿದರೆ ದೇವರಿಗೆ ಮೈಲಿಗೆಯಾಗುತ್ತದೆ. ಪರಿಣಾಮ, ಗ್ರಾಮಕ್ಕೆ ಕೇಡಾಗುತ್ತದೆ” ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ಮೌಢ್ಯ ಮತ್ತು ವಿರೋಧದಿಂದಾಗಿ ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ವಂಚಿತರಾಗಿದ್ದಾರೆ.
ಈ ಲೇಖನ ಓದಿದ್ದೀರಾ?: Happy holi ಎಂದಿದ್ದೇ ತಪ್ಪಾಯ್ತು; ಹೋಳಿಯಲ್ಲೂ ಹರಿಯಿತು ದಲಿತನ ರಕ್ತದೋಕುಳಿ
ದೇವಿಯ ಮುನಿಸಿಗೆ ಗುರಿಯಾಗುತ್ತೇವೆ ಎಂಬ ಗ್ರಾಮಸ್ಥರ ಮೌಢ್ಯವು ತಮ್ಮದೇ ಮಕ್ಕಳ ವಿದ್ಯಾಭ್ಯಸಕ್ಕೆ ಅಡ್ಡಿಯಾಗಿದೆ. ಸುಸಜ್ಜಿತ ಕಟ್ಟಡವಿದ್ದರೂ ವಿದ್ಯಾರ್ಥಿನಿಯರು ದೂರದ ಊರುಗಳಿಗೆ ಅಲೆಯುವಂತಾಗಿದೆ.
ಎಂಟು ವರ್ಷಗಳಿಂದ ಬಳಕೆಯಾಗದ ಕಾರಣ, ಕಟ್ಟಡ ಪಾಳುಬಿದ್ದಿದೆ. ಕಿಟಕಿ-ಬಾಗಿಲುಗಳು ಹಾನಿಗೊಳಗಾಗುತ್ತಿವೆ. ಮೂಢನಂಬಿಕೆಗಳ ಮುಂದೆ ಸರ್ಕಾರ ಮತ್ತು ಆಡಳಿತ ಯಂತ್ರ ಅಸಹಾಯಕವಾಗಿ ನಿಂತಿದೆ.




