ತೋಟದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವೃದ್ಧೆಯೊಬ್ಬರ ಶವ ಪತ್ತೆಯಾಗಿದ್ದು, ಆಕೆಯ ಕಣ್ಣಿನ ಗುಡ್ಡೆ ನಾಪತ್ತೆಯಾಗಿರುವ ವಿಚಿತ್ರ ಪ್ರಕರಣ ತುಮಕೂರಿನ ಗುಬ್ಬಿ ತಾಲೂಕು ನಿಟ್ಟೂರು ಹೋಬಳಿಯ ಕಾರೆಕುರ್ಚಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಕೊಲೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಸದ್ಯ ತನಿಖೆ ತೀವ್ರಗೊಳಿಸಿದ್ದಾರೆ.
ಅಂಬಿಕಾ @ ಭ್ರಮರಾಂಭಿಕಾ (66) ಅನುಮಾನಾಸ್ಪದವಾಗಿ ಮೃತ ವೃದ್ಧೆ. ಮೃತರು ತುಮಕೂರಿನ ಅಭಿವೃದ್ಧಿ ಫೋರಂ ಫೌಂಡೇಶನ್ ಕುಂದರನಹಳ್ಳಿಯ ರಮೇಶ್ ಅವರ ಸಹೋದರಿ. ಕಾರೆಕುರ್ಚಿ ಗ್ರಾಮದಲ್ಲಿ ಜಮೀನುದಾರರಾಗಿದ್ಧ ಅಂಬಿಕಾ ಅವರು ಒಬ್ಬನೇ ಮಗ ಮನೋಹರ ಹಾಗೂ ಸೊಸೆ ಕಾವ್ಯಶ್ರೀ ಜೊತೆ ಗ್ರಾಮದಲ್ಲಿ ವಾಸವಾಗಿದ್ದರು. ತೋಟದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ಧ ಅಂಬಿಕಾ ಅವರ ಮೃತದೇಹವನ್ನು ಕೆಳಗಿಳಿಸಿರುವುದು ಹಾಗೂ ಬಲ ಪ್ರಯೋಗದಿಂದ ಮೃತರ ಒಂದು ಕಣ್ಣು ಗುಡ್ಡೆ ಕಿತ್ತಿರುವುದು ಪೊಲೀಸರ ಶಂಕೆಗೆ ಬಲವಾದ ಕಾರಣವಾಗಿದೆ.
ವಾಸದ ಮನೆಯಿಂದ 200 ಮೀಟರ್ ದೂರದಲ್ಲಿರುವ ತೋಟದ ಮನೆಯಲ್ಲಿ ನೇಣಿಗೆ ಶರಣಾದ ಅಂಬಿಕಾ ಬಗ್ಗೆ ಹಲವು ಅನುಮಾನ ಕಾರಣವಾಗಿದೆ. ತಡರಾತ್ರಿ ತೋಟದ ಮನೆಯತ್ತ ಅಂಬಿಕಾ ಧಾವಿಸಿದ್ದು ನಂತರ ನಡೆದಿದ್ದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಶಂಕೆಗೆ ಪೊಲೀಸರ ತನಿಖೆ ಉತ್ತರ ನೀಡಲಿದೆ. ಸ್ಥಳಕ್ಕೆ ಆಗಮಿಸಿದ ಚೇಳೂರು ಪೊಲೀಸರು ಕಣ್ಣಿನ ಗುಡ್ಡೆ ನಾಪತ್ತೆಯ ಕಾರಣದಿಂದ ಹಲವು ಆಯಾಮದಲ್ಲಿ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ತುಮಕೂರು | ಕಲುಷಿತ ನೀರು, ಮಾಲಿನ್ಯ ದೂರಿಗೆ ಕಂಟ್ರೋಲ್ ರೂಮ್ : ಜಿಲ್ಲಾಧಿಕಾರಿ ಶುಭ ಕಲ್ಯಾಣ್
ಸ್ಥಳಕ್ಕೆ ಎಎಸ್ ಪಿ ಪುರುಷೋತ್ತಮ್, ಸಿಪಿಐ ರಾಘವೇಂದ್ರ ಧಾವಿಸಿ ಮಗ ಸೊಸೆಯನ್ನು ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ತನಿಖೆ ಮುಂದುವರೆದಿದೆ.





