ಗುರುಕುಲ ಶಿಕ್ಷಣ ಪದ್ಧತಿಯಿಂದ ಅತ್ಯಾಧುನಿಕ ತಂತ್ರಜ್ಞಾನ ಶಿಕ್ಷಣವರೆಗೆ ವಿವಿಧತೆ ಮೈಗೂಡಿಸಿಕೊಂಡ ಶ್ರೀ ಚಿದಂಬರಾಶ್ರಮ ಸಂಸ್ಕೃತ ವೇದ ಉಪನಿಷತ್ತು ಉಳಿಸಿ ಬೆಳೆಸಿ ಕಂಪ್ಯೂಟರ್ ಶಿಕ್ಷಣ ಕೂಡಾ ಮಕ್ಕಳಿಗೆ ಕಲಿಸಿ ಉತ್ತಮ ನಾಗರೀಕರನ್ನು ಸೃಷ್ಟಿಸಿ ಉತ್ತಮ ಸಂಸ್ಥೆ ಎನಿಸಿಕೊಂಡಿದೆ ಎಂದು ಮಣಿಪಾಲ್ ಸಂಸ್ಥೆಯ ಮಾಜಿ ನಿರ್ದೇಶಕಿ ಡಾ.ನಂದಿನಿ ಲಕ್ಷ್ಮಿಕಾಂತ್ ತಿಳಿಸಿದರು.
ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ ಸೇವಾ ಸದನ ಶಿಕ್ಷಣ ಸಂಸ್ಥೆಯವತಿಯಿಂದ ಆಯೋಜಿಸಿದ್ದ ಚಿದಂಬರ ಸಂಭ್ರಮ-2026 ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭಾರತೀಯ ಸಂಸ್ಕೃತಿಯ ಗುರುವಿನ ಮಹಿಮೆ, ಆಚಾರ ವಿಚಾರ ಬಗ್ಗೆ ಮಕ್ಕಳಿಗೆ ತಿಳಿಸಿ ನೀತಿವಂತ ವ್ಯಕ್ತಿತ್ವ ರೂಪಿಸುವ ಕೆಲಸ ಈ ಆಶ್ರಮ ನಡೆಸಿದೆ ಎಂದರು.
ಸೇವಾ ಸದನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸಚ್ಚಿದಾನಂದ ಶರ್ಮಾ ಮಾತನಾಡಿ ಎಂಟು ದಶಕದಿಂದ ವಿಶೇಷವಾದ ಶೈಕ್ಷಣಿಕ ಸೇವೆ ಸಲ್ಲಿಸಿದ ಚಿದಂಬರಾಶ್ರಮ ಹಿಂದೂ ಧರ್ಮದ ಜಾಗೃತಿ ಕಾರ್ಯಕ್ರಮ ಜೊತೆಗೆ ವೇದ ಉಪನಿಷತ್ತುಗಳ ಕಲಿಕೆಯನ್ನು ಮಕ್ಕಳಿಗೆ ನಡೆಸುತ್ತಿದೆ. ಗುರುಕುಲ ಪದ್ಧತಿಯ ಬಗ್ಗೆ ಆಶ್ರಮ ತಿಳಿಸಿದೆ. ಧಾರ್ಮಿಕ ಕ್ಷೇತ್ರದ ಜೊತೆಗೆ ಶೈಕ್ಷಣಿಕ ರಂಗವನ್ನು ವಿಸ್ತರಿಸಿ ಪಬ್ಲಿಕ್ ಸ್ಕೂಲ್ ಆರಂಭಿಸಿ ಪ್ರಾಥಮಿಕ ಪೂರ್ವ ಶಾಲೆಯಿಂದ ಪ್ರೌಢಶಾಲೆವರೆಗೆ ಉತ್ತಮ ಫಲಿತಾಂಶದಲ್ಲಿ ಸಾಗಿದೆ. ಮಕ್ಕಳಲ್ಲಿ ಪಠ್ಯೇತರ ಕಲಿಕೆಯನ್ನು ಹೆಚ್ಚು ನಡೆಸಿ ಸಾಮಾಜಿಕ ಮೌಲ್ಯ, ನೈತಿಕ, ಲೌಕಿಕ ಶಿಕ್ಷಣ ಎಲ್ಲವನ್ನೂ ಕಲಿಸಲಾಗುತ್ತಿದೆ ಎಂದರು.
ಕರ್ನಾಟಕ ಬ್ಯಾಂಕ್ ಉಪ ಮಹಾಪ್ರಬಂಧಕ ಕೆ.ಎಲ್.ಶೇಷಾದ್ರಿ ಮಾತನಾಡಿ ಮಕ್ಕಳಲ್ಲಿ ವ್ಯವಹಾರ ಜ್ಞಾನ ಹೆಚ್ಚು ಕಲಿಸಬೇಕಿದೆ. ಇಂದಿನ ವೇಗದ ಪ್ರಪಂಚದಲ್ಲಿ ಮಕ್ಕಳ ಬುದ್ಧಿಮತ್ತೆ ಚುರುಕಿನಿಂದ ಕೂಡಿರಬೇಕಿದೆ. ಅದರಲ್ಲೂ ಹಣಕಾಸು ವ್ಯವಹಾರ ಮುಖ್ಯವಾಗಿ ಕಲಿಯಬೇಕಿದೆ. ಬ್ಯಾಂಕ್ ವ್ಯವಹಾರ ತಿಳಿದರೆ ಮುಂದಿನ ದಿನಗಳಲ್ಲಿ ಆರ್ಥಿಕ ವಲಯ ಬಗ್ಗೆ ಕಲಿಯಬಹುದಾಗಿದೆ. ಈ ನಿಟ್ಟಿನಲ್ಲಿ ಆಶ್ರಮ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಹೆಚ್ಚು ಒತ್ತು ನೀಡಿದೆ ಎಂದರು.
ಬಿಇಓ ನಟರಾಜ್ ಮಾತನಾಡಿ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಮಾತ್ರ ಸಿಗುತ್ತದೆ. ಖಾಸಗಿ ಶಾಲೆಗಳಿಗಿಂತ ಅರ್ಹತೆ ಪಡೆದ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಸಿಗುತ್ತಾರೆ. ಆದರೂ ಆಂಗ್ಲ ಮಾಧ್ಯಮ ಪ್ರತಿಷ್ಠೆಯ ಹಿಂದೆ ಬಿದ್ದು ಪೋಷಕರು ಸರ್ಕಾರಿ ಶಾಲೆಗಳ ಬಗ್ಗೆ ಮೂಗು ಮುರಿಯುತ್ತಾರೆ. ಕೀಳರಿಮೆ ಹೋಗಲಾಡಿಸುವಲ್ಲಿ ಸರ್ಕಾರಿ ಶಾಲೆ ಉತ್ತಮ ಫಲಿತಾಂಶ ತರುವ ಪ್ರಯತ್ನ ನಡೆಸಿದೆ. ಈ ಜೊತೆಗೆ ಅನುದಾನ ಶಾಲೆಗಳು ಕೈ ಜೋಡಿಸಿವೆ ಎಂದರು.
ಇದೇ ಸಂದರ್ಭದಲ್ಲಿ ಆಶ್ರಮದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವೇದಿಕೆಯಲ್ಲಿ ಸೇವಾ ಸದನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಿಕಾಂತ್, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಸುಧೀಂದ್ರ, ಶ್ರೀಧರಮೂರ್ತಿ, ಡಾ.ಗಣಪತಿ ಸ್ವಾಮಿನಾಥನ್, ಗ್ರಾಪಂ ಸದಸ್ಯೆ ಅರುಣಕುಮಾರಿ, ಪ್ರಾಂಶುಪಾಲ ಅನಂತರಾಜು, ಮುಖ್ಯಶಿಕ್ಷಕ ಜಗದೀಶ್, ಶಿಕ್ಷಕರಾದ ನಳಿನ, ನೇತ್ರಾವತಿ, ಕವಿತಾ ಇತರರು ಇದ್ದರು.





