ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್.ಎಸ್.ಲೋಹಿತ್ ಕುಮಾರ್ ಅಧ್ಯಕ್ಷರಾಗಿ, ಎಚ್.ಜಯಣ್ಣ ಉಪಾಧ್ಯಕ್ಷರಾಗಿ ವಿರೋಧ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯ ಪ್ರಕ್ರಿಯೆಯನ್ನು ಸಹಕಾರ ಅಭಿವೃದ್ದಿ ಅಧಿಕಾರಿ ಲಿಯಾಖಿತ್ ಆಲಿಖಾನ್ ನಡೆಸಿಕೊಟ್ಟರು. ಒಟ್ಟು 13 ಮಂದಿ ನಿರ್ದೆಶಕರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಲೋಹಿತ್ ಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಯಣ್ಣ ಏಕೈಕ ನಾಮಪತ್ರ ಸಲ್ಲಿಸಿದ್ದ ಹಿನ್ನಲೆ ಅವಿರೋಧ ಘೋಷಣೆ ಮಾಡಲಾಯಿತು.
ನೂತನ ಅಧ್ಯಕ್ಷ ಎಚ್.ಎಸ್.ಲೋಹಿತ್ ಕುಮಾರ್ ಮಾತನಾಡಿ ಹೈನುಗಾರಿಕೆ ರೈತನ ಆರ್ಥಿಕ ಸದೃಢತೆಗೆ ಸಹಕಾರಿಯಾಗಿದೆ. ಇಂತಹ ಹಾಲು ಉತ್ಪಾದಕರ ಕಷ್ಟಸುಖಕ್ಕೆ ಸಹಕಾರಿ ಸಂಘ ಸ್ಪಂದಿಸುತ್ತದೆ. ಸರ್ಕಾರದಿಂದ ಹಾಗೂ ಹಾಲು ಒಕ್ಕೂಟದಿಂದ ದೊರೆಯುವ ಎಲ್ಲಾ ಸವಲತ್ತು ನಮ್ಮ ಡೈರಿಯ ಎಲ್ಲಾ ಸದಸ್ಯರಿಗೆ ಹಾಗೂ ಹಾಲು ಉತ್ಪಾದಕರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.
ನೂತನ ಉಪಾಧ್ಯಕ್ಷ ಎಚ್.ಜಯಣ್ಣ ಮಾತನಾಡಿ ಕೃಷಿ ಚಟುವಟಿಕೆಯಲ್ಲಿ ಲಾಭ ಕಾಣದ ರೈತರ ಕುಟುಂಬಕ್ಕೆ ಆಧಾರವಾದ ಹೈನುಗಾರಿಕೆ ಈ ಹಾಲು ಉತ್ಪಾದನೆ. ಗ್ರಾಮೀಣ ಬದುಕಿನಲ್ಲಿ ನಿತ್ಯ ಕಾಯಕ ಎನಿಸಿ ಆರ್ಥಿಕವಾಗಿ ಬೆಳೆದ ರೈತರು ಬಹಳ ಮಂದಿ ಇದ್ದಾರೆ. ಈ ನಿಟ್ಟಿನಲ್ಲಿ ಹೊಸಹಳ್ಳಿ ಡೈರಿ ತಾಲ್ಲೂಕಿನಲ್ಲಿ ಹೆಚ್ಚು ಹಾಲು ಉತ್ಪಾದಿಸುವ ಡೈರಿಯಾಗಿ ಮಾರ್ಪಾಡು ಮಾಡಲು ಎಲ್ಲಾ ನಿರ್ದೇಶಕರ ಜೊತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಡೈರಿಯ ನಿರ್ದೇಶಕರಾದ ವೆಂಕಟ ನರಸಿಂಹಾಚಾರ್ಯ, ಗಂಗಾಧರಯ್ಯ, ನಾಗರತ್ನ, ನಾಗರಾಜು, ರಂಗರಾಜು, ಮಂಗಳಮ್ಮ, ರಂಗನಾಥ್, ದೇವರಾಜ್, ಕುಮಾರ್, ತೀರ್ಥಪ್ರಸಾದ ಅರಸ್, ಚನ್ನಪ್ಪ ಮುಖಂಡರಾದ ಬಸವರಾಜು, ನರೇಶ್, ಚನ್ನಬಸವಣ್ಣ, ಡೈರಿಯ ಕಾರ್ಯದರ್ಶಿ ಎಚ್.ಸಿ.ಜಗದೀಶ್ ಇತರರು ಇದ್ದರು.





