ಗುಬ್ಬಿ ತಾಲೂಕಿನ ಕಸಬ ಹೋಬಳಿ ಕಿಟ್ಟದಕುಪ್ಪೆ ಗ್ರಾಮದ ರೈತರ ಜಮೀನಿನ ಮೂಲಕ ತೊರೆಹಳ್ಳಿ ಕ್ರಾಸ್ ನಲ್ಲಿ ನೂತವಾಗಿ ನಿರ್ಮಾಣವಾಗುತ್ತಿರುವ ಸಬ್ ಸ್ಟೇಷನ್ ಗೆ ಹೇರೂರಿನ ಬಳಿಯಿಂದ ಹೊಸದಾಗಿ ಟವರ್ ಲೈನ್ ಎಳೆಯುತ್ತಿದ್ದು ಇದಕ್ಕೆ ಯಾವುದೇ ಸೂಕ್ತ ಪರಿಹಾರಗಳನ್ನು ನಿಗದಿ ಮಾಡದೇ ಗ್ರಾಮ ಸಭೆಯನ್ನು ಕರೆಯದೆ ಅಧಿಕಾರಿಗಳು ಅವರ ಮನಸ್ಸೋ ಇಚ್ಛಾ ಕೆಲಸ ಮಾಡಿಸಲು ಮುಂದಾಗಿದ್ದಾರೆ ಎಂದು ಸ್ಥಳೀಯ ರೈತರು ಇಂದು ತಮ್ಮ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಸಾವಿರಾರು ತೆಂಗಿನ ಮರ ಅಡಿಕೆ ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಹೇಳಿದ ಅಧಿಕಾರಿಗಳು ಒಂದು ಅಡಿಕೆ ಮರಕ್ಕೆ 3000 ನಿಗದಿ ಮಾಡಿದ್ದಾರೆ . ಒಂದು ಅಡಿಕೆ ಮರ ವರ್ಷಕ್ಕೆ 3000 ಸಾವಿರ ದುಡಿಯುತ್ತದೆ. ವೈಜ್ಞಾನಿಕ ಪರಿಹಾರ ನಿಗದಿ ಮಾಡಿಲ್ಲ. ಮನಸ್ಸೋ ಇಚ್ಚೆ ನಿಗದಿ ಮಾಡಿದ್ದಾರೆ ಎಂದು ಸಂತ್ರಸ್ತ ರೈತರು ಕಿಡಿಕಾರಿದರು.
ಸ್ಥಳೀಯವಾಗಿ ಲೈನ್ ಎಳೆಯುವ ಜಮೀನಿನ ಯಾವುದೇ ಸರ್ವೇ ಮಾಡದೆ ಮನ ಬಂದಂತೆ ಸರ್ವೆ ಮಾಡಿ ಮರಗಳಿಗೆ ಬಣ್ಣ ಬಳಿದು ಹೋಗಿದ್ದಾರೆ. ಅನವಶ್ಯಕವಾಗಿ ಗಿಡಮರಗಳು ನಾಶ ಆಗಲಿದೆ. ಸ್ಥಳಾವಕಾಶ ನೀಡಿ ಮರ ಕಡಿಯಲು ಅನುಮತಿ ಕೊಡುತ್ತೇವೆ. ನ್ಯಾಯ ರೀತಿ ಸರ್ವೆ ಮಾಡಿ ಅಡಿಕೆ ಮತ್ತು ತೆಂಗಿನ ಮರಗಳಿಗೆ ಹೆಚ್ಚು ಹಣ ಪರಿಹಾರ ಕೊಡಬೇಕು. ಜಿಲ್ಲಾಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ ರೈತರಿಗೆ ನ್ಯಾಯ ಕೊಡದಿದ್ದಲ್ಲಿ ಗ್ರಾಮದ ಎಲ್ಲಾ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.





