ಮಾದಿಗ ಸಮುದಾಯದ ಸಂಘಟನೆ ಬೆಳೆಸುವ ಉದ್ದೇಶದಲ್ಲಿ ಮಾದಾರ ಮಹಾಸಭಾ ತಾಲ್ಲೂಕು ಘಟಕ ನಡೆಸಿರುವ ಹೋಬಳಿ ಸಂಘಟನೆಯ ಕಾರ್ಯದಲ್ಲಿ ಕಸಬ ಹೋಬಳಿ ಅಧ್ಯಕ್ಷರಾಗಿ ಮಡೇನಹಳ್ಳಿ ದೇವರಾಜ್ ಉಪಾಧ್ಯಕ್ಷರಾಗಿ ವಿದ್ಯಾಸಾಗರ್ ಅವಿರೋಧ ಆಯ್ಕೆಯಾದರು.
ತಾಲ್ಲೂಕಿನ ಕಸಬ ಹೋಬಳಿ ಬಿಕ್ಕೆಗುಡ್ಡ ಗ್ರಾಮದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಮಾದಾರ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕೊಡಿಯಾಲ ಮಹದೇವು ವಹಿಸಿ ಕಸಬ ಹೋಬಳಿ ಮಟ್ಟದ ಶಾಖೆಯನ್ನು ರಚಿಸಲು ಚರ್ಚೆ ನಡೆಸಿದರು. ಅಂತಿಮವಾಗಿ ಎಲ್ಲಾ ಪದಾಧಿಕಾರಿಗಳು ಆಯ್ಕೆ ಅವಿರೋಧವಾಗಿ ನಡೆಯಿತು.
ಅಧ್ಯಕ್ಷ ಕೊಡಿಯಾಲ ಮಹದೇವು ಮಾತನಾಡಿ ರಾಜ್ಯದಲ್ಲಿ ಬಹುಸಂಖ್ಯೆಯ ಮಾದಿಗ ಸಮುದಾಯ ಸಾಮಾಜಿಕ ಶೈಕ್ಷಣಿಕ ವಲಯದಲ್ಲಿ ಹಿಂದೆ ಸರಿದಿದೆ. ಸಮಾಜದ ಮುಖ್ಯವಾಹಿನಿಗೆ ಬರಬೇಕಾದ ನಮ್ಮ ಸಮುದಾಯ ಕೇವಲ ಮತ ಬ್ಯಾಂಕ್ ಆಗುತ್ತಿವೆ. ಈ ಹಿನ್ನಲೆ ಗ್ರಾಮೀಣ ಭಾಗದಲ್ಲಿ ಮಾದಿಗ ಸಮುದಾಯವನ್ನು ಜಾಗೃತಿಗೊಳಿಸಿ ಸಾಮಾಜಿಕ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ಪ್ರಜ್ಞಾವಂತ ಯುವಕರ ಸಂಘಟನೆ ನಡೆಸಿದ್ದೇವೆ. ಈ ಕಾರ್ಯಕ್ಕೆ ಕಸಬ ಹೋಬಳಿ ಶಾಖೆ ಯುವ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದೇವೆ. ಎಲ್ಲರೂ ಒಗ್ಗೂಡಿ ನಮ್ಮ ಸಮಾಜವನ್ನು ಮೇಲೆತ್ತುವ ಕೆಲಸ ಮಾಡಿ ಎಂದು ಕರೆ ನೀಡಿದರು.
ಹಿರಿಯ ಉಪಾಧ್ಯಕ್ಷ ಪಾಂಡುರಂಗಯ್ಯ ಮಾತನಾಡಿ ಮಾದಾರ ಮಹಾಸಭಾ ನಮ್ಮ ಜನಾಂಗದ ಉನ್ನತಿಗೆ ಶ್ರಮಿಸಲಿದೆ. ಸಚಿವ ಮುನಿಯಪ್ಪ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಪಕ್ಷದ ನಮ್ಮ ಜನಾಂಗದ ಮುಖಂಡರನ್ನು ಒಗ್ಗೂಡಿಸಿ ಸಭಾ ಚಟುವಟಿಕೆ ಆರಂಭಿಸಿದ್ದಾರೆ. ನಮ್ಮ ಶಕ್ತಿ ಒಗ್ಗಟ್ಟು ಪ್ರದರ್ಶನ ಮಾಡಿ ನಮ್ಮಲ್ಲೇ ಇರುವ ಬಡವರನ್ನು ನಮ್ಮ ಜೊತೆ ಮೇಲೆತ್ತುವ ಕೆಲಸ ಮಾಡಬೇಕಿದೆ. 500 ರೂಗಳ ನೋಂದಣಿ ಶುಲ್ಕ ನೇರ ಮಹಾಸಭಾ ಖಾತೆಗೆ ಜಮಾ ಆಗಲಿದೆ. ಆನ್ ಲೈನ್ ಮೂಲಕ ಸದಸ್ಯತ್ವ ನೋಂದಣಿ ಜೊತೆಗೆ ನಿಮ್ಮ ಮೊಬೈಲ್ ಗೆ ರಸೀದಿ ಬರುತ್ತದೆ. ಇಲ್ಲಿ ಯಾವ ಗೊಂದಲವಿಲ್ಲ. ಎಲ್ಲರೂ ಒಗ್ಗೂಡಿ ಸಮಾಜವನ್ನು ಮುಖ್ಯವಾಹಿನಿಗೆ ತರೋಣ ಎಂದರು.
ಕಸಬ ಹೋಬಳಿಯ ಅಧ್ಯಕ್ಷರಾಗಿ ಮಡೇನಹಳ್ಳಿ ದೇವರಾಜ್, ಉಪಾಧ್ಯಕ್ಷರಾಗಿ ವಿದ್ಯಾಸಾಗರ್, ಕಾರ್ಯದರ್ಶಿಯಾಗಿ ಕಾಳೇನಹಳ್ಳಿ ಮಾದೇಶ್, ಸಂಘಟನಾ ಕಾರ್ಯದರ್ಶಿಯಾಗಿ ಚಿಕ್ಕೋನಹಳ್ಳಿ ಪಾಳ್ಯ ನರಸಿಂಹಮೂರ್ತಿ, ಖಜಾಂಚಿಯಾಗಿ ಎಸ್.ಕೊಡಗಿಹಳ್ಳಿ ಚಂದ್ರಣ್ಣ, ಕಾರ್ಯಕಾರಿ ಸಮಿತಿಯಲ್ಲಿ ತಮ್ಮಯ್ಯ, ಕೃಷ್ಣಮೂರ್ತಿ, ಶಿವಶಂಕರ್ ಹಾಗೂ ಪೋಷಕರ ಸಮಿತಿಗೆ ದೊಡ್ಡಯ್ಯ, ಕೃಷ್ಣಮೂರ್ತಿ, ನಂಜುಂಡಯ್ಯ, ಬಸವರಾಜ್, ಪ್ರದೀಪ್, ಹೊಸಹಳ್ಳಿ ಕೃಷ್ಣಮೂರ್ತಿ, ರಮೇಶ್, ಕೃಷ್ಣಮೂರ್ತಿ, ಶಿವನಾಗ ನೇಮಕ ಮಾಡಲಾಯಿತು.
ಸಭೆಯಲ್ಲಿ ಆನಂದ್, ಬಿಕ್ಕೆಗುಡ್ಡ ಕೃಷ್ಣಪ್ಪ, ಚೇಳೂರು ಶಿವನಂಜಪ್ಪ, ಜಿ.ವಿ.ಮಂಜುನಾಥ್, ಫಣೀಂದ್ರ, ಶ್ರೀಧರ್, ರವೀಶ್ ಇತರರು ಇದ್ದರು .





