ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದ ಆರೋಪಿ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಪೊಲೀಸರು ತಾಲ್ಲೂಕಿನ ಸುರಿಗೇನಹಳ್ಳಿ ಗ್ರಾಮದಲ್ಲಿ ಹತ್ತು ಗಾಂಜಾ ಗಿಡಗಳು ಹಾಗೂ 400 ಗ್ರಾಂ ಗಾಂಜಾ ಮಾಲು ಸಮೇತ ಬಂಧಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಆರೋಪಿ ನಲ್ಲೂರಯ್ಯ (40) ಸುರಿಗೇನಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ತೋಟದಲ್ಲಿ ಬೆಳೆದ ಮೇವು ಜೋಳದ ಗಿಡಗಳ ಮಧ್ಯೆ ಸೊಂಪಾಗಿ ಗಾಂಜಾ ಗಿಡಗಳು ಬೆಳೆದ ಆರೋಪಿ ಬಹಳ ದಿನಗಳಿಂದ ಈ ಕೃತ್ಯ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಗಾಂಜಾ ಗಿಡಗಳು ಬೆಳೆದು 400 ಗ್ರಾಂ ಗಾಂಜಾ ಸೊಪ್ಪನ್ನು ಸಿದ್ಧಪಡಿಸಿ ಮಾರಾಟಕ್ಕೆ ಸಜ್ಜಾಗಿಸಿದ್ದ ಖಚಿತ ಮಾಹಿತಿ ಪಡೆದ ಗುಬ್ಬಿ ಪೊಲೀಸರು ಡಿವೈಎಸ್ಪಿ ಶೇಖರ್ ಅವರ ನೇತೃತ್ವದಲ್ಲಿ ಸಿಪಿಐ ರಾಘವೇಂದ್ರ, ಪಿಎಸ್ಐ ಸುನೀಲ್ ಕುಮಾರ್ ಅವರ ತಂಡ ದಾಳಿ ಮಾಡಿ ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ.
ವಿಷಯ ತಿಳಿದ ತಹಶೀಲ್ದಾರ್ ಆರತಿ.ಬಿ ಸ್ಥಳ ಮಹಜರು ನಡೆಸಿ ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿದರು. ದಾಳಿ ಮಾಡಿದ ಪೊಲೀಸರ ತಂಡದಲ್ಲಿ ನವೀನ್, ಶಶಿಧರ್, ಹನುಮಂತ, ವಿಶ್ವನಾಥ್, ನಟರಾಜ್ ಇತರರು ಇದ್ದರು.





