ಗುಬ್ಬಿ ತಾಲ್ಲೂಕಿನ ನಿಟ್ಟೂರು ಮೂಲಕ ಮೈಸೂರು ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ಬೆಲವತ್ತ ಬಳಿಯ ಹಾರನಹಳ್ಳಿ ಮತ್ತು ನರಸೀಪುರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಗೋಮಾಳ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆ ಗೋಮಾಳದಲ್ಲಿದ್ಧ ಬೆಲೆ ಬಾಳುವ ತೇಗ, ಅರ್ಕ್ಯುಲೆಸ್, ಹೊನ್ನೆ ಮರಗಳು ಸಂಪೂರ್ಣ ಭಸ್ಮವಾಗಿದೆ.
ತಡರಾತ್ರಿ ಕಿಡಿಗೇಡಿಗಳು ಈ ದುಷ್ಕೃತ್ಯ ಮಾಡಿರುವ ಶಂಕೆ ಸ್ಥಳೀಯರಲ್ಲಿ ಮೂಡಿದೆ. ಬೆಂಕಿಯ ಕೆನ್ನಾಲಿಗೆಗೆ ಬಲಿಯಾದ ಸಾವಿರಾರು ಮರಗಿಡಗಳು ಕ್ಷಣಾರ್ಧದಲ್ಲಿ ದಗದಗನೆ ಹೊತ್ತಿ ಉರಿದ ಘಟನೆ ನಡೆದಿದೆ. ಜೊತೆಯಲ್ಲಿ ಮರಗಳನ್ನು ಅಲಂಬಿಸಿದ್ದ ಪ್ರಾಣಿಪಕ್ಷಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಬೆಲವತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂಬರ್ 61ರ ಪೈಕಿ ಈಗಾಗಲೇ ಹಲವು ರೈತರಿಗೆ ಭೂಮಿ ನೀಡಲಾಗಿದ್ದು ಉಳಿಕೆ ಜಾಗದಲ್ಲಿ ಅರಣ್ಯ ಪ್ರದೇಶವಿದ್ದು ಯಾರೋ ಕಿಡಿಗೇಡಿಗಳು ಬೇಕಂತಲೇ ಈ ಪ್ರದೇಶಕ್ಕೆ ಬೆಂಕಿ ಇಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ರಾತ್ರಿ ರಸ್ತೆಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದಾರೆ.





