ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನದ ಶ್ರಮದಿಂದ ಇಂದು ರೈತ ಸಂಘ ಹೆಮ್ಮರವಾಗಿ ಬೆಳೆದು ನಿಂತಿದೆ. ಆ ಹೆಮ್ಮರವನ್ನು ಪೋಷಿಸುವ ಕೆಲಸ ಇಂದಿನ ಯುವ ಪೀಳಿಗೆ ಮತ್ತು ರೈತಾಪಿ ವರ್ಗ ಮಾಡಬೇಕಿದೆ ಎಂದು ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಬಿದರೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು ಈ ಗ್ರಾಮದ 70 ಮಂದಿ ರೈತರು ಮನಸ್ಸು ಮಾಡಿದರೆ 7 ಸಾವಿರ ರೈತರನ್ನು ಒಗ್ಗೂಡಿಸುವ ಕೆಲಸ ಆಗುತ್ತದೆ. ಒಬ್ಬ ರೈತ ಎಲ್ಲಿಯವರೆಗೂ ಬದುಕಿರುತ್ತಾನೋ ಅಲ್ಲಿಯವರೆಗೆ ರೈತ ಸಂಘ ಬದುಕಿರುತ್ತದೆ ಹಾಗಾಗಿ ರೈತ ಸಂಘ ಎಂದಿಗೂ ಅಜರಾಮರ ಎಂದು ತಿಳಿಸಿದರು.
ರೈತರ ಹೆಗಲ ಮೇಲಿನ ಹಸಿರು ಶಾಲನ್ನು ಯಾರು ಕಡೆಗಣಿಸಬೇಡಿ. ಜೊತೆಗೆ ಅದನ್ನು ಧರಿಸಲು ಹಿಂದೇಟು ಹಾಕಬೇಡಿ. ರೈತ ಸಂಘದವರನ್ನು ಗುರುತಿಸುವ ಜೊತೆಗೆ ರೈತರನ್ನು ಗೌರವಿಸುವ ಕೆಲಸ ಮಾಡುವ ಮೂಲಕ ಸಂಘಟನೆ ಮಾಡಬೇಕಿದೆ ಎಂದು ತಿಳಿಸಿದರು.
ಬಿದರೆ ಗ್ರಾಮದ ನೂರಾರು ರೈತರ ಸಮ್ಮುಖದಲ್ಲಿ ಗ್ರಾಮ ಘಟಕದ ಉದ್ಘಾಟನೆಯನ್ನು ಹಲವು ಮುಖಂಡರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷರಾದ ಕೆ.ಎನ್.ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್, ಗ್ರಾಮಸ್ಥರಾದ ನಾಗಣ್ಣ, ವಿಎಸ್ಎಸ್ ಎನ್ ಅಧ್ಯಕ್ಷ ಆದಿರಾಜು, ಯುವ ಮುಖಂಡರಾದ ತೇಜು, ಗಣೇಶ್, ಮೈಲಾರಿ, ಮಂಜುನಾಥ್, ಬಾಲರಾಜು ಅರ್ಜುನ್, ಚೇತನ್, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.





