ಲಕ್ಷಾಂತರ ಸರ್ಕಾರಿ ಹುದ್ದೆ ಭರ್ತಿಗೆ ಸರ್ಕಾರ ಮೀನಾ ಮೇಷ ಎಣಿಸಿದೆ. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಉದ್ಯೋಗ ನೀಡದ ಹಿನ್ನಲೆ ಯುವಶಕ್ತಿ ಈಗಾಗಲೇ ಧಾರವಾಡದಲ್ಲಿ ಹೋರಾಟ ಆರಂಭಿಸಿದ್ದಾರೆ. ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕಿತ್ತು. ತಡವಾದರೆ ರಾಜ್ಯವ್ಯಾಪಿ ಯುವಕರು ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಕಳ್ಳಿಪಾಳ್ಯ ಗೇಟ್ ಬಳಿ ಅನ್ಯ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಗುಬ್ಬಿ ಕಾರ್ಯಕರ್ತರನ್ನು ಭೇಟಿ ಮಾಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿ ಯುವಶಕ್ತಿ ರೊಚ್ಚಿಗೆದ್ದರೆ ಎಂತಹ ಸ್ಥಿತಿ ಎಂಬುದಕ್ಕೆ ನೇಪಾಳ ರಾಷ್ಟ್ರ ನಿದರ್ಶನವಾಗಿದೆ. ಅದೇ ದುಸ್ಥಿತಿ ರಾಜ್ಯದಲ್ಲಿ ಬಾರದಂತೆ ಕೂಡಲೇ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಯಾವುದೇ ಪಕ್ಷವಾದರೂ ಕಾರ್ಯಕರ್ತರ ಹಿತ ಕಾಯುವ ಕೆಲಸ ಮಾಡಬೇಕಿದೆ. ಸ್ಥಳೀಯ ಚುನಾವಣೆ ಕಾರ್ಯಕರ್ತರಿಗೆ ಅರ್ಪಿಸುವ ಚುನಾವಣೆ. ಇಂತಹ ಲೋಕಲ್ ಚುನಾವಣೆ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ನ್ಯಾಯಾಲಯ ಕೂಡಾ ಆದೇಶ ನೀಡಿರುವ ಹಿನ್ನಲೆ ಈ ವರ್ಷ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ಮಾಡಬೇಕಿದೆ. ಈ ಹಿನ್ನಲೆ ಪಕ್ಷ ಸಂಘಟನೆಗೆ ಒತ್ತು ನೀಡಿ ರಾಜ್ಯ ಪ್ರವಾಸ ನಡೆಸಿದ್ದೇನೆ. ಈಗಾಗಲೇ 42 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮುಗಿದಿದೆ. ಜನರೊಂದಿಗೆ ಜನತಾದಳ ಸಂಘಟನಾ ಸಮಾವೇಶಕ್ಕೆ ಜನರಿಂದ ದೊಡ್ಡ ಮಟ್ಟದ ಸ್ಪಂದನೆ ಸಿಕ್ಕಿದೆ. ಕಾರ್ಯಕರ್ತರು ಸಹ ಹುಮ್ಮಸ್ಸಿನಿಂದ ಪಕ್ಷ ಕಟ್ಟುವ ಕೆಲಸ ನಡೆಸಿದ್ದಾರೆ ಎಂದರು.
ಪಕ್ಷ ನಂಬಿದ ಕಾರ್ಯಕರ್ತರ ಭವಿಷ್ಯ ರೂಪಿಸುವ ಕೆಲಸ ಪಕ್ಷದ ಮುಖಂಡರು ಮಾಡಬೇಕಿದೆ. ಲೋಕಲ್ ಚುನಾವಣೆಯಲ್ಲಿ ಗೆಲ್ಲಿಸಿ ಅಧಿಕಾರ ಕೊಡಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇವೆ. ಶಾಸಕರು, ಸಂಸದರ ಗೆಲುವಿಗೆ ಹೇಗೆ ಕಾರಣಕರ್ತರಾಗುತ್ತಾರೆ ಹಾಗೆಯೇ ಅವರನ್ನು ಸ್ಥಳೀಯ ಅಧಿಕಾರ ಕೊಟ್ಟು ಭವಿಷ್ಯಕ್ಕೆ ನಾಂದಿ ಹಾಡಬೇಕು ಎಂದು ಮುಖಂಡರಿಗೆ ಸೂಚಿಸಿದ ಅವರು ತುರುವೇಕೆರೆ ಮೈತ್ರಿ ಟಿಕೆಟ್ ಬಗ್ಗೆ ಅವರವರ ಸಮಾಧಾನಕ್ಕೆ ಮಾತನಾಡುತ್ತಾರೆ. ಚುನಾವಣೆ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ನಿಂಗಪ್ಪ, ಶಾಸಕ ಸುರೇಶ್ ಬಾಬು, ಮುಖಂಡರಾದ ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಗಂಗೇಗೌಡ, ಡಿ.ರಘು, ಸಿಂಗೋನಹಳ್ಳಿ ಸೋಮಣ್ಣ, ಕಾಂತರಾಜು, ಶಿವಾನಂದ್, ರವಿ, ಮನೋಜ್ ಇತರರು ಇದ್ದರು.





