ರೈತ ಪರ ಆಲೋಚನೆ ಮಾಡದ ರಾಹುಲ್ ಗಾಂಧಿ ಬರೀ ಟೀಕೆ ಮಾಡುವುದನ್ನ ಬಿಟ್ಟರೆ ಬೇರೇನೂ ಕೆಲಸವೇ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇರವಾಗಿ ಕಿಡಿಕಾರಿದರು.
ಗುಬ್ಬಿ ತಾಲ್ಲೂಕಿನ ಕಳ್ಳಿಪಾಳ್ಯ ಗೇಟ್ ಬಳಿ ಜೆಡಿಎಸ್ ಕಾರ್ಯಕರ್ತರನ್ನು ಭೇಟಿ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ರೈತ ಪರ ಕೆಲಸಗಳನ್ನು ಎಂದೂ ಮಾಡಿಲ್ಲ. ವಿಷಯವಂತೂ ಮೊದಲೇ ತಿಳಿಯಲ್ಲ, ಯಾರೋ ಹೇಳುತ್ತಾರೆ ರಾಹುಲ್ ಗಾಂಧಿ ಅವರು ಮಾತನಾಡುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದ ಅವರು ಕೇಂದ್ರ ಸರ್ಕಾರದಿಂದ ಬರುವ ಅನುದಾನಗಳನ್ನು ರೈತರ ಪರವಾಗಿ ನಿಂತು ಸರಿಯಾಗಿ ಉಪಯೋಗ ಮಾಡಿಕೊಳ್ಳದ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರವನ್ನು ಟೀಕಿಸುವ ಯಾವ ನೈತಿಕತೆ ಉಳಿಸಿಕೊಂಡಿಲ್ಲ ಎಂದರು.
ರೈತರ ಹಿತ ಕಾಯಲು ಅಮೆರಿಕಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದು. ದೇಶಕ್ಕೆ ರೈತರನ್ನ ಏನು ಮಾರಾಟ ಮಾಡುತ್ತಿದ್ದಾರೆಯೇ.? ನಮಗೆ ಅಷ್ಟು ತಲೆಯಲ್ಲಿ ಬುದ್ಧಿ ಇಲ್ಲವೇ.? ಆ ರೀತಿ ಏನಾದರೂ ಇದ್ದರೆ ನಾವೇ ಈ ಒಪ್ಪಂದವನ್ನು ವಿರೋಧ ಮಾಡುತ್ತಿದ್ದೆವು ಎಂದು ತಿರುಗೇಟು ನೀಡಿದ ಅವರು ದೇಶದ ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಎಲ್ಲಾ ರೀತಿಯಲ್ಲಿಯೂ ಈ ಒಪ್ಪಂದದಿಂದ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿಯೇ ಎಲ್ಲಾ ಆಗುಹೋಗುಗಳ ಲೆಕ್ಕಾಚಾರ ಮಾಡಿ ಪ್ರಧಾನಿ ಮೋದಿ ಅವರು ಈ ಒಪ್ಪಂದದ ಬಗ್ಗೆ ತೀರ್ಮಾನ ಮಾಡಿದ್ದಾರೆ ಎಂದರು.
ನಂತರ ಸ್ಥಳೀಯ ಸ್ನಾತಕೋತ್ತರ ಪದವಿ ಪಡೆದ ಯುವತಿಯೊಬ್ಬಳ ಅರ್ಜಿ ಸ್ವೀಕರಿಸಿ ಸೂಕ್ತ ಉದ್ಯೋಗ ಒದಗಿಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಜಿ.ಎನ್.ಬೆಟ್ಟಸ್ವಾಮಿ, ಯೋಗಾನಂದಕುಮಾರ್, ಜಿ.ಡಿ.ಸುರೇಶಗೌಡ, ಕಾರ್ಯಕರ್ತರಾದ ಸೋಮಶೇಖರ್, ಕಾಂತರಾಜ್, ಡಿ.ರಘು, ಶಿವಾನಂದ್, ವೆಂಕಟೇಶ್ ಇತರರು ಇದ್ದರು.





