ಇದೇ 20 ಡಿಸೆಂಬರ್ 2025 ರಂದು ತುಮಕೂರಿನಲ್ಲಿ ಬಿಡುಗಡೆಯಾಗಲಿರುವ ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ ಕೆ ದೊರೈರಾಜ್ ಅವರ ‘ನಮ್ಮ ಹಟ್ಟಿ’ ಕೃತಿಯ ಆಯ್ದ ಒಂದು ಭಾಗ ನಿಮ್ಮ ಓದಿಗಾಗಿ. ನಿರೂಪಣೆ: ಜಿ ವಿ ಆನಂದಮೂರ್ತಿ
ತುಮಕೂರು ಮೊದಲು ‘ಪುರಸಭೆ’ಯ ಆಡಳಿತಕ್ಕೆ ಒಳಪಟ್ಟಿತ್ತು. ನಂತರ ‘ನಗರಸಭೆ’ಯಾಗಿ ಬಡ್ತಿ ಪಡೆಯಿತು. ಇದೀಗ ನಗರ ಪಾಲಿಕೆಯಾಗಿದೆ. ನಮ್ಮ ಹಟ್ಟಿ ಮೊದಲು ಪುರಸಭೆ ಮತ್ತು ನಗರಸಭೆಗಳಿಗೆ ನಡೆಯುತ್ತಿದ್ದ ಚುನಾವಣೆಗಳಲ್ಲಿ ‘ಮೀಸಲು’ ವಾರ್ಡ್ ಆಗಿತ್ತು. ಆಗ ನಮ್ಮ ಹಟ್ಟಿಯಿಂದ ಅನೇಕ ಜನ ಪುರಸಭೆ ಮತ್ತು ನಗರಸಭೆಗಳಿಗೆ ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದರು. ಟಿ ವಿ ಶೇಷಯ್ಯ, ಹೊನ್ನೂರಯ್ಯ, ವೆಂಕಟನರಸಯ್ಯ, ಲಕ್ಷ್ಮಿನರಸಯ್ಯ, ಲಕ್ಷ್ಮಮ್ಮ (ಸೀರಮ್ಮ), ಶ್ರೀನಿವಾಸ, ನರಸೀಯಪ್ಪ, ನಾರಾಯಣಮೂರ್ತಿ, ಚಂದ್ರಯ್ಯ, ಲಕ್ಷ್ಮಿನರಸಮ್ಮ (ನಾರಾಯಣಮೂರ್ತಿ ಅವರ ಪತ್ನಿ), ಹೆಚ್ ಆರ್ ಹನುಮಂತರಾಯಪ್ಪ ಇವರು ನಮ್ಮ ಹಟ್ಟಿಯನ್ನು ಪ್ರತಿನಿಧಿಸಿದ್ದರು. ಇವರ ಪೈಕಿ ಲಕ್ಷ್ಮಿನರಸಯ್ಯ ಮತ್ತು ನರಸೀಯಪ್ಪ ಮಾತ್ರ ಪಕ್ಷೇತರರಾಗಿ ಆಯ್ಕೆಯಾಗಿದ್ದರೆ, ಉಳಿದವರೆಲ್ಲ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗುತ್ತಿದ್ದರು. ಆದರೆ ಇದುವರೆಗೂ ಪುರಸಭೆ ಮತ್ತು ನಗರಸಭೆಯಲ್ಲಿ ಅಧ್ಯಕ್ಷರಾಗಿ ನಮ್ಮ ಮಾದಿಗರು ಯಾರೂ ಆಯ್ಕೆಯಾಗಿಲ್ಲ. ಇದೊಂದು ಕೊರತೆಯಾಗಿಯೇ ಉಳಿದಿದೆ. ಆದರೂ ತುಮಕೂರು ನಗರಸಭೆಯಲ್ಲಿ ಉನ್ನತ ಸ್ಥಾನವನ್ನು ಪಡೆದವರೆಂದರೆ ಚಂದ್ರಯ್ಯ ಮಾತ್ರ. ಇವರು ನಗರಸಭೆಯ ಉಪಾಧ್ಯಕ್ಷರಾಗಿ ಒಂದು ಅವಧಿಗೆ ಕರ‍್ಯ ನಿರ್ವಹಿಸಿದ್ದರು. ಇವರನ್ನು ಹೊರತುಪಡಿಸಿದರೆ, ನಮ್ಮ ಹಟ್ಟಿಗೆ ಸೊಸೆಯಾಗಿ ಬಂದಿರುವ ರೂಪಶ್ರೀ ಶೆಟ್ಟಳಯ್ಯ ಅವರು ಈಗಿನ ನಗರಪಾಲಿಕೆಯಲ್ಲಿ ಉಪ-ಮೇಯರ್ ಆಗಿ ಒಂದು ಅವಧಿಗೆ ಅಧಿಕಾರದಲ್ಲಿದ್ದರು. ಈಗ ನಮ್ಮ ಹಟ್ಟಿಗಿದ್ದ ಮೀಸಲು ವಾರ್ಡನ್ನು ತೆಗೆದು, ಇದನ್ನು 2ಎ ಮೀಸಲುಪಡಿಸಿರುವುದರಿಂದ ನಮ್ಮ ಹಟ್ಟಿಗಿದ್ದ ಪ್ರಾತಿನಿಧ್ಯವೂ ಮೊಟಕಾಗಿದೆ.
ಮೊದಲಿನ ಪುರಸಭೆ ಮತ್ತು ನಗರಸಭೆಗಳಲ್ಲಿ ಹಣಕಾಸಿನ ಸಂಪನ್ಮೂಲಗಳು ಅತಿ ಕಡಿಮೆಯಿದ್ದುದ್ದರಿಂದ ನಮ್ಮ ಹಟ್ಟಿಯಲ್ಲಿ ಹೇಳಿಕೊಳ್ಳುವಂತಹ ಕರ‍್ಯಗಳು ನಡೆದಿರಲಿಲ್ಲ. ಆದರೆ ಈ ಎಲ್ಲ ಕೊರತೆಗಳ ನಡುವೆ ಹೆಚ್ ಆರ್ ಹನುಮಂತರಾಯಪ್ಪ ಅವರು ಹಟ್ಟಿಯನ್ನು ಪ್ರತಿನಿಧಿಸುತ್ತಿದ್ದ ಅವಧಿಯಲ್ಲಿ ನರಸಿಂಹಯ್ಯನ ಸಲಹೆ-ಸಹಕಾರದಿಂದ ರಸ್ತೆ, ಚರಂಡಿ ಮತ್ತು ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ನಗರಸಭೆಯಿಂದ ಹಣದ ಸೌಲಭ್ಯ ದೊರೆತಿತ್ತು. ಮುಖ್ಯವಾಗಿ ಹಿಪ್ಪೆತೋಪಿನ (ದಸರಾ ಮೈದಾನ) ಶಾಲಾ ಮೈದಾನದಲ್ಲಿ ‘ಶೈಕ್ಷಣಿಕ ಸಮುದಾಯ ಭವನ’ ನಿರ್ಮಾಣವಾಯಿತು. ನಾರಾಯಣಮೂರ್ತಿ ಮತ್ತು ಚಂದ್ರಯ್ಯ ಅವರು ನಗರಸಭೆಯ ಸದಸ್ಯರಾಗಿದ್ದ ಅವಧಿಯಲ್ಲಿ ಎರಡು ಸಮುದಾಯ ಭವನಗಳು ನಿರ್ಮಾಣವಾದವು.
ಗಾಂಧೀಜಿ ಬಂದಿದ್ದರು: ಇಂತಹ ಅಸಂಖ್ಯಾತ ಪ್ರತಿಭಾವಂತರಿದ್ದ ದೊಡ್ಡಹಟ್ಟಿಗೆ ಎಲ್ಲೂ ದಾಖಲಾಗದಿರುವ ಒಂದು ಭವ್ಯ ಇತಿಹಾಸವಿದೆ. ಮಹಾತ್ಮ ಗಾಂಧೀಜಿ ಹೆಜ್ಜೆಯಿಟ್ಟ ಹಟ್ಟಿಯಿದು ಎಂದರೆ ನಿಮಗೆ ಆಶ್ರ‍್ಯವಾಗಬಹುದು! ಅಸ್ಪೃಶ್ಯತಾ ನಿವಾರಣಾ ಕರ‍್ಯಕ್ರಮದ ಅಂಗವಾಗಿ 1934ರಲ್ಲಿ ಒಮ್ಮೆ ಗಾಂಧೀಜಿ ದೊಡ್ಡಹಟ್ಟಿಗೆ ಬಂದಿದ್ದರು. ಗಾಂಧೀಜಿ ಅವರು ತುಮಕೂರಿನಲ್ಲಿ ನಡೆಯಬೇಕಿದ್ದ ಕಾರ‍್ಯಕ್ರಮಕ್ಕೆ ಬಂದಿದ್ದರು. ಆ ರಾತ್ರಿ ತುಮಕೂರು ಸರ್ಕಾರಿ ಹೈಸ್ಕೂಲಿನ (ಬಿ ಎಚ್ ರಸ್ತೆಯಲ್ಲಿರುವ ಈಗಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿದ್ದ ಕೆಂಪು ಹೆಂಚಿನ ಒಂದು ಕೊಠಡಿಯಲ್ಲಿ ರಾತ್ರಿ ತಂಗಿದ್ದರು. ಈಗಲೂ ಆ ಕೊಠಡಿ ಹಾಗೆಯೇ ಇದೆ). ವಿಶ್ರಾಂತಿಗೆ ಮುನ್ನ ಗಾಂಧೀಜಿ ಅವರು ತಮ್ಮ ಕಾರ‍್ಯಕರ್ತರಿಗೆ, ಹತ್ತಿರದಲ್ಲಿ ಎಲ್ಲಾದರೂ ಹರಿಜನ ಕೇರಿಯಿದ್ದರೆ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ಹೇಳಿದರಂತೆ. ಆಗ ಅಲ್ಲೇ ಇದ್ದ ಲಾಯರ್ ಜಯಸಿಂಹರಾವ್ ಅವರು ಗಾಂಧೀಜಿಯವರನ್ನು ನಮ್ಮ ಹಟ್ಟಿಗೆ ಕರದುಕೊಂಡು ಬಂದರು. ಹಟ್ಟಿಗೆ ಬಂದ ಗಾಂಧೀಜಿ ಅವರು ಹಟ್ಟಿಯ ರಸ್ತೆಯ ನಡುವೆ ಹಾಸಿದ್ದ ದುಪ್ಟಿ ಮೇಲೆ ಕುಳಿತು ಶಿಕ್ಷಣದ ಮಹತ್ವ, ಪಾನ ನಿರೋಧ ಮತ್ತು ಸ್ವಚ್ಛತೆಯ ಬಗ್ಗೆ ಎಲ್ಲರಿಗೂ ತಿಳಿಯ ಹೇಳಿದರಂತೆ. ಇದನ್ನೆಲ್ಲಾ ಹಟ್ಟಿಯ ಹಿರಿಯರು ನನ್ನೊಡನೆ ಅನೇಕ ಸಲ ಹಂಚಿಕೊಂಡಿದ್ದಾರೆ.
ಅಕ್ಷರಜ್ಞಾನವೇ ದೊಡ್ಡದು ಎನ್ನುವ ದಿನಗಳಲ್ಲಿ, ಪಾರಂಪರಿಕ ಕೌಶಲವೂ ಜ್ಞಾನಕ್ಕೆ ಸಮಾನವಾದದ್ದು ಎನ್ನುವುದನ್ನು ಜಗತ್ತಿನ ಮುಂದೆ ತೋರಿಸುತ್ತಿದ್ದ ವಿಶಿಷ್ಟ ಹಟ್ಟಿಯಿದು. ಆ ದಿನಗಳಲ್ಲಿ ಬರೀ ಮಾದಿಗರು ಮಾತ್ರ ಇದ್ದ ನಮ್ಮ ದೊಡ್ಡಹಟ್ಟಿಗೆ ಕ್ಷೌರಿಕರು ಪ್ರವೇಶಿಸುತ್ತಿರಲಿಲ್ಲ. ಆದ್ದರಿಂದ ಇದೇ ಹಟ್ಟಿಯವರಾದ ಮೋದಪ್ಪ ಮತ್ತು ಡೋರಪ್ಪ ಕ್ಷೌರ ಮಾಡುವುದನ್ನು ಕಲಿತು ತಮ್ಮ ಬಂಧುಗಳಿಗೆ ಹಟ್ಟಿಯಾಚೆಗೆ ಇದ್ದ ಹಿಪ್ಪೆತೋಪಿನಲ್ಲಿ ಕುಳಿತು ಕ್ಷೌರ ಮಾಡುತ್ತಿದ್ದರು. ಹೀಗೆ ಮಾಡುವುದರ ಮೂಲಕ ಭಾರತದ ತರತಮ ಭಾವದ ಜಾತಿಪದ್ಧತಿಗೆ ಮೋದಪ್ಪ ಮತ್ತು ಡೋರಪ್ಪ ಅಂದು ಖಡಕ್ಕಾಗಿ ಉತ್ತರಿಸಿದ್ದರು. ಇದೆಲ್ಲಾ ಗಾಂಧೀಜಿ ಅವರು ನಮ್ಮ ಹಟ್ಟಿಗೆ ಬಂದಿದ್ದರ ಪ್ರಭಾವವೂ ಇರಬಹುದು! ಇದೊಂದು ಹೃದಯಕ್ಕೆ ತಾಕುವ ಉದಾರಚರಿತರ ಕಥೆ! ಭಾರತದ ‘ಸದ್ಗುಣಿಗಳ ಚರಿತ್ರೆ’ ಇದುವರೆಗೂ ಮುಟ್ಟದ ಇಂತಹ ವೈವಿದ್ಯ ಬದುಕಿನ ಸಾಮಾಜಿಕ ಮತ್ತು ಐತಿಹಾಸಿಕ ಕಥನಗಳು ನಮ್ಮ ಹಟ್ಟಿಯ ಒಡಲಲ್ಲಿವೆ.
ಆ ಕಾಲದಲ್ಲಿ ತುಮಕೂರಿನಲ್ಲಿ ಪ್ರಖ್ಯಾತರಾಗಿದ್ದ ಲಾಯರ್ ಜಯಸಿಂಹರಾವ್ ಅವರನ್ನು ಈ ಸಂದರ್ಭದಲ್ಲಿ ನೆನೆಯಲೇಬೇಕು. ಆಗ ತಿಗಳರ ರ‍್ಲಮ್ಮ, ರಂಗಮ್ಮ ಮತ್ತು ಲಾಯರ್ ಜಯಸಿಂಹರಾವ್ ಅವರನ್ನು ಹೊರತುಪಡಿಸಿದರೆ ಬೇರೆ ಯಾರೂ ನಮ್ಮ ಹಟ್ಟಿಗೆ ಕಾಲಿಡುತ್ತಿರಲಿಲ್ಲ! ಜಯಸಿಂಹರಾವ್ ತಿಂಗಳಿನಲ್ಲಿ ಒಂದೆರೆಡು ಭಾನುವಾರಗಳಂದು ಹಟ್ಟಿಗೆ ತಪ್ಪದೆ ಬರುತ್ತಿದ್ದರು. ಬಂದವರು ಹಟ್ಟಿಯ ಹಿರಿಯರೊಂದಿಗೆ, ಅವರ ಬೇಕು-ಬೇಡಗಳನ್ನು ಕುರಿತು ಚರ್ಚಿಸುತ್ತಿದ್ದರು. ಹಾಗೆಯೇ ನಮ್ಮ ಹಟ್ಟಿಯವರೂ ಕೂಡ ಸಂದರ್ಭ ಬಂದಾಗಲೆಲ್ಲಾ ಜಯಸಿಂಹರಾವ್ ಅವರಿಂದ ನೆರವು ಪಡೆಯುತ್ತಿದ್ದರು. ಜಯಸಿಂಹರಾವ್ ಅವರು ಹಿರಿಯರನ್ನು ಸಂಪರ್ಕಿಸಿ ಹಟ್ಟಿಯಲ್ಲಿ ‘ಹರಿಜನ ಸೇವಾ ಸಂಘ’ವನ್ನು ಸ್ಥಾಪಿಸಿದರು. ಶಿಕ್ಷಣದ ಬಗ್ಗೆ, ಸ್ವಚ್ಚತೆಯ ಬಗ್ಗೆ ನಮ್ಮವರಿಗೆ ತಿಳಿಯ ಹೇಳುತ್ತಿದ್ದರು. ಕಾಲದ ನಡಿಗೆಯಲ್ಲಿ ‘ಹರಿಜನ ಸೇವಾ ಸಂಘ’ ಹೇಗೆ ಕಣ್ಮರೆಯಾಯಿತೋ ನನಗೆ ತಿಳಿಯದು. ಆದರೆ ಮುಖ್ಯವಾಗಿ ‘ಹರಿಜನ ಸೇವಾ ಸಂಘ’ ದ ಪ್ರಭಾವದಿಂದ ನಮ್ಮ ಹಟ್ಟಿಯಲ್ಲಿ ಆಗಿನ ಕೆಲವು ವಿದ್ಯಾವಂತ ತರುಣರು ಸೇರಿ ‘ಮಹಾತ್ಮ ಗಾಂಧಿ ಸೇವಾ ಸಂಘ’ವೊಂದನ್ನು ಸ್ಥಾಪಿಸಿಕೊಂಡರು. ಮುಖ್ಯವಾಗಿ ಹಟ್ಟಿಯಲ್ಲಿರುವ ಎಲ್ಲಾ ಮಕ್ಕಳನ್ನು ಶಾಲೆಗೆ ಹೋಗುವಂತೆ ಪ್ರೇರಿಪಿಸುವುದು ಮತ್ತು ಹಟ್ಟಿಯಲ್ಲಿ ದನದ ಮಾಂಸವನ್ನು ಯಾರೂ ತಿನ್ನಬಾರದು ಎಂದು ಇವರು ಹೇಳುತ್ತಿದ್ದರು. ಇವರ ಸಾಮಾಜಿಕ ಚಟುವಟಿಕೆ ಇಷ್ಟಕ್ಕೆ ಸೀಮಿತವಾಗಿತ್ತು. ‘ಮಹಾತ್ಮ ಗಾಂಧಿ ಸೇವಾ ಸಂಘ’ದಿಂದ ಆರಂಭಕ್ಕೆ ಕಾರಣರಾಗಿದ್ದ ವಿದ್ಯಾವಂತರ ಗುಂಪಿನಲ್ಲಿದ್ದ ಸದಸ್ಯರ ಪೈಕಿ ಪೊಲೀಸ್ ಹುಚ್ಚಹನುಮಯ್ಯ ಅವರ ಹಿರಿಯ ಮಗ ಹನುಮಂತಯ್ಯ (ಅಬಕಾರಿ ಇಲಾಖೆಯಲ್ಲಿ ಸಬ್‌ಇನ್ಸ್ಪೆಕ್ಟರ್ ಆಗಿದ್ದು ಈಗ ನಿವೃತ್ತರು) ಸದ್ಯಕ್ಕೆ ನಮ್ಮ ಹಟ್ಟಿಯಲ್ಲಿರುವ ಅತ್ಯಂತ ಹಿರಿಯರು. ಅವರು ಈಗಲೂ ನಮ್ಮ ಹಟ್ಟಿಯಲ್ಲೆ ವಾಸಿಸುತ್ತಿದ್ದಾರೆ. ಅವರೊಂದಿಗೆ ನಾನು ಮಾತನಾಡಿದ ಕೆಲವು ಅನುಭವಗಳನ್ನು ಅವರ ಮಾತುಗಳಲ್ಲೇ ನಿಮ್ಮ ಮುಂದಿಟ್ಟಿದ್ದೇನೆ.
ಹನುಮಂತಯ್ಯ: ನಾನೂ ಕೂಡ ಇದೇ ಹಟ್ಟಿಯವನು. ನಮ್ಮದು ಮೇಗಲಹಟ್ಟಿ. ನಮ್ಮ ತಂದೆ ಹುಚ್ಚಹನುಮಯ್ಯ. ತಾಯಿ ಕೆಂಪಮ್ಮ. ನನ್ನ ತಂದೆ ಪೋಲೀಸ್ ಆಗಿದ್ದರು. ತಂದೆಯವರು ಅಲ್ಪಸ್ವಲ್ಪ ವಿದ್ಯಾವಂತರಾಗಿದ್ದರಿಂದ ನಾನು ಹುಟ್ಟಿದ್ದು 1940ರಲ್ಲಿ ಎಂದು ಶಾಲೆಯ ರೆಕಾರ್ಡ್‌ಗಳಲ್ಲಿ ನಮೂದು ಮಾಡಿಸಿದ್ದಾರೆ. ನಮ್ಮ ತಂದೆ ಶಿರಾದಲ್ಲಿ ಹೆಚ್ಚುಕಾಲ ಪೋಲೀಸ್ ಕೆಲಸದಲ್ಲಿ ಸೇವೆಸಲ್ಲಿಸಿದ್ದರು. ಹೀಗಾಗಿ ನಮ್ಮ ದೊಡ್ಡಹಟ್ಟಿಯಲ್ಲಿ ನನ್ನ ಬಾಲ್ಯದ ದಿನಗಳು ಬಹಳ ಕಡಿಮೆ. ನಾನು ಮಿಡ್ಲ್‌ಸ್ಕೂಲ್‌ಗೆ ಹೋಗುತ್ತಿದ್ದಾಗ ಶಾಲೆಯಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ಸ್ವತಃ ಅನುಭವಿಸಿದ್ದೇನೆ. ತರಗತಿ ಎರಡು ಭಾಗವಾಗಿರುತ್ತಿತ್ತು. ಒಂದು ಭಾಗದಲ್ಲಿ ನನ್ನನ್ನೂ ಸೇರಿಸಿದ ಹಾಗೆ ಅಸ್ಪೃಶ್ಯ ಹುಡುಗರೆಲ್ಲಾ ಕುಳಿತುಕೊಳ್ಳುತ್ತಿದ್ದೆವು. ಇನ್ನೊಂದು ಭಾಗದಲ್ಲಿ ಉಳಿದ ಜಾತಿಯ ಹುಡುಗರು ಕುಳಿತುಕೊಳ್ಳುತ್ತಿದ್ದರು. ನಾವಿನ್ನೂ ಚಿಕ್ಕ ವಯಸ್ಸಿನ ಹುಡುಗನಾದ್ದರಿಂದ ಈ ಎಲ್ಲಾ ಭೇದ ಭಾವಗಳು ತಿಳಿಯುತ್ತಿರಲಿಲ್ಲ. ತರಗತಿ ಎಂದರೆ ಹೀಗೆಯೇ ಇರಬೇಕು ಎಂದು ನಾವು ಭಾವಿಸಿದ್ದೆವು. ಇದನ್ನೆಲ್ಲಾ ಕೇಳಬೇಕು, ಅಥವಾ ಇನ್ನೊಬ್ಬರಲ್ಲಿ ಹೇಳಿಕೊಳ್ಳಬೇಕು ಎಂದು ನಮಗೆ ಎಂದೂ ಅನಿಸಿರಲಿಲ್ಲ! ತರಗತಿಯಲ್ಲಿ ವಿದ್ಯಾರ್ಥಿಗೆ ಹೊಡೆಯಲು ಯಾವಾಗಲೂ ಎರಡು ಕೋಲುಗಳು ಇರುತ್ತಿದ್ದವು. ಒಂದು ಸಣ್ಣ ತೆಳುವಾದ ಕೋಲು ಯಾವಾಗಲೂ ಮೇಜಿನ ಮೇಲೆ ಇರುತ್ತಿತ್ತು. ಇನ್ನೊಂದು ಮಾರುದ್ದದ ಕೋಲನ್ನು ಬಾಗಿಲ ಹಿಂಭಾಗದಲ್ಲಿ ಯಾರಿಗೂ ತಿಳಿಯದಂತೆ ಇಡುತ್ತಿದ್ದರು. ತರಗತಿಯಲ್ಲಿ ಮೇಷ್ಟ್ರು ಬೇರೆ ಜಾತಿಯ ವಿದ್ಯಾರ್ಥಿಗಳನ್ನು ಹೊಡೆಯಲು ಮೇಜಿನ ಮೇಲಿದ್ದ ಸಣ್ಣ ಕೋಲನ್ನು ಎತ್ತಿಕೊಳ್ಳುತ್ತಿದ್ದರು. ನಮ್ಮ ಅಸ್ಪೃಶ್ಯ ಹುಡುಗರನ್ನು ಹೊಡೆಯಲು ಬಾಗಿಲ ಹಿಂದೆ ಇಟ್ಟಿದ್ದ ಮಾರುದ್ದುದ ಕೋಲನ್ನು ತೆಗೆದುಕೊಂಡು ಆದಷ್ಟೂ ನಮ್ಮಿಂದ ದೂರವೇ ನಿಂತು ನಮ್ಮನ್ನು ಹೊಡೆಯುತ್ತಿದ್ದರು. ಇವೆಲ್ಲವೂ ಅಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾದ ಸಂಗತಿಯಾಗಿತ್ತು. ನಾನು ಹೈಸ್ಕೂಲಿಗೆ ಸೇರಿದ ಮೇಲೆ ಇಂತಹ ಭೇದ ಭಾವಗಳನ್ನು ಕಾಣಲಿಲ್ಲ! ಆನಂತರ ನಾನು ಅಬಕಾರಿ ಇಲಾಖೆಗೆ ಸೇರಿ, ಸಬ್‌ಇನ್ಸ್ಪೆಕ್ಟರ್ ಆಗಿ ನಿವೃತ್ತನಾದೆ. ಈಗ ನನಗೆ 82 ವರ್ಷ.
ನಾನು ಶಿರಾದಲ್ಲಿ ವಿಡ್ಲ್‌ಸ್ಕೂಲಿನಲ್ಲಿ ಓದುವಾಗ ಆರ್‌ಎಸ್‌ಎಸ್ ಶಾಖೆಗೆ ಸೇರಿದ್ದೆ. ಇದು ಗೊತ್ತಾದ ಕೂಡಲೇ ನಮ್ಮ ತಂದೆಯವರು ‘ಆರ್‌ಎಸ್‌ಎಸ್‌ನ್ನು ಸರ್ಕಾರ ಬ್ಯಾನ್ ಮಾಡಿದೆ. ಆ ಸಂಘಕ್ಕೆ ನೀನು ಹೋಗಬೇಡ’ ಎಂದು ತಾಕೀತು ಮಾಡಿದರು. ಅಂದಿನಿಂದಲೇ ನಾನು ಆರ್‌ಎಸ್‌ಎಸ್‌ಗೆ ಹೋಗುವುದನ್ನು ಬಿಟ್ಟುಬಿಟ್ಟೆ!
ನಮ್ಮ ದೊಡ್ಡಹಟ್ಟಿಯಲ್ಲಿ ವಾಸವಾಗಿದ್ದವರೆಲ್ಲಾ ಬಡವರೇ ಆಗಿದ್ದರು ಜೊತೆಗೆ ಶ್ರಮಜೀವಿಗಳೂ ಆಗಿದ್ದರು. ದುಡಿಯದೆ ತಿನ್ನುವವರು ಯಾರೂ ಇರಲಿಲ್ಲ! ಇವರಲ್ಲಿ ಅನೇಕ ಜನ ಸಜ್ಜನರನ್ನು ನಾನು ಕಂಡಿದ್ದೇನೆ. ಇವರು ಎಷ್ಟು ಒಳ್ಳೆಯವರೋ ಅಷ್ಟೇ ಮುಗ್ಧರೂ ಆಗಿದ್ದರು. ಆಗ ನಮ್ಮ ಹಟ್ಟಿಯಲ್ಲಿದ್ದ ಎಷ್ಟೋ ಮನೆಗಳಿಗೆ ಬಾಗಿಲುಗಳೇ ಇರುತ್ತಿರಲಿಲ್ಲ! ಇದ್ದರೂ ಅವೆಲ್ಲಾ ರಟ್ಟಿನ ಅಥವಾ ತಗಡಿನ ಬಾಗಿಲುಗಳು. ಒಂದು ನಾಯಿ ಜೋರಾಗಿ ನುಗ್ಗಿದರೆ ಆ ‘ಬಾಗಿಲು’ ಕೆಳಗೆ ಬೀಳುವಷ್ಟು ‘ಭದ್ರ’ವಾಗಿರುತ್ತಿದ್ದವು. ಇನ್ನು ಮನಗಳಿಗೆ ‘ಬೀಗ’ ಹಾಕುವ ಸಂಪ್ರದಾಯವೇ ಇರಲಿಲ್ಲ. ಆಗ ಹಟ್ಟಿಯಲ್ಲಿ ಕಳ್ಳಕಾಕರು ಮತ್ತು ಪಿಕ್‌ಪಾಕೆಟ್ ಮಾಡುವವರು ಇರಲಿಲ್ಲ ಎಂದರೆ ನಿಮಗೆ ಆಶ್ರ‍್ಯವಾಗಬಹುದು! ಇದಕ್ಕೆ ಕಾರಣ ಆಗ ಹಟ್ಟಿಯಲ್ಲಿದ್ದ ನ್ಯಾಯ ಪಂಚಾಯಿತಿಯಲ್ಲಿದ್ದವರೇ ಆಗಿದ್ದರು. ಹಟ್ಟಿಯಲ್ಲಿ ಯಾರಾದರೂ ಕಳ್ಳತನ ಮಾಡಿ ಸಿಕ್ಕಿಕೊಂಡರೆ, ಅವರನ್ನು ನಿರ್ಧಾಕ್ಷಿಣ್ಯವಾಗಿ ಎಳೆದುಕೊಂಡು ಬಂದು, ಬೇವಿನಮರಕ್ಕೆ ಕಟ್ಟಿ ಹುಣಸೆ ಬರಲಲ್ಲಿ ಚರ್ಮ ಎದ್ದುಬರುವಂತೆ ಹೊಡೆಯುತ್ತಿದ್ದರು. ಇಂತಹ ಶಿಕ್ಷೆಯ ಭಯಕ್ಕೆ ನಮ್ಮಲ್ಲಿ ಕಳ್ಳತನ ನಡೆಯುತ್ತಿರಲಿಲ್ಲ! ಅದರಲ್ಲೂ ನಮ್ಮ ಮನೆ ಹತ್ತಿರ ಇದ್ದ ಯಜಮಾನ್ ದೊಡ್ಡನರಸಯ್ಯನವರೆಂದರೆ ಎಂತಹವರೂ ಥರ ಥರ ನಡುಗುತ್ತಿದ್ದರು. ಅವರ ನ್ಯಾಯವೂ ಹಾಗೆಯೇ ಇರುತ್ತಿತ್ತು. ಬಹಳ ಕಟ್ಟುನಿಟ್ಟಿನ ಅವರು ಶುಭ್ರವಾದ ಮಲ್‌ಪಂಚೆ ಉಟ್ಟು ಹಟ್ಟಿಯ ಬೀದಿಯಲ್ಲಿ ಬರುತ್ತಿದ್ದರೆ, ಕುಳಿತಿದ್ದವರೆಲ್ಲಾ ಎದ್ದುನಿಂತು ಅವರಿಗೆ ಗೌರವ ನೀಡುತ್ತಿದ್ದರು. ಹೆಂಗಸರೆಲ್ಲಾ ತಲೆಮೇಲೆ ಸೆರಗು ಹೊದ್ದು ಅರುಗಾಗುತ್ತಿದ್ದರು. ಆನಂತರದ ದಿನಗಳಲ್ಲಿ ಅಂತಹ ನ್ಯಾಯವಾದಿಯನ್ನು ನಾನು ನೋಡಿದ್ದೇ ಅಪರೂಪ! ಎಲ್ಲರೂ ಒಪ್ಪುವಂತಹ, ಒಳ್ಳೆ ರೀತಿಯ ನ್ಯಾಯಕ್ಕಾಗಿ ಅವರು ಅಂದಿಗೆ ಹೆಸರುವಾಸಿಯಾಗಿದ್ದರು. ಇದರಿಂದಾಗಿ ನಮ್ಮ ಹಟ್ಟಿ ಬಿಕ್ಕಟ್ಟಿನಲ್ಲಿತ್ತು.
ಹಟ್ಟಿಯಲ್ಲಿ ಜೂಲಯ್ಯ ಎನ್ನುವವರು ಮಂಡಿಪೇಟೆಯಲ್ಲಿ ಕೂಲಿ ಮಾಡುವ ವ್ಯಕ್ತಿ ಇದ್ದರು. ನೋಡುವುದಕ್ಕೆ ಭಾರೀ ಆಳು. ಆ ದಿನಗಳಲ್ಲಿ ಇವರು ಮಂಡಿಪೇಟೆಯಲ್ಲಿದ್ದ ಎಲ್ಲ ವರ್ತಕರನ್ನೂ ಹೆದರಿಸಿ ಇಟ್ಟುಕೊಂಡಿದ್ದರು. ಯಾರಿಗೂ ಹೆದರುತ್ತಿರಲಿಲ್ಲ, ಇವರಿಂದಾಗಿಯೇ ನಮ್ಮ ಹಟ್ಟಿಯ ಕೂಲಿಗಳಿಗೆ ಆಗ ಮಂಡಿ ಯಜಮಾನರುಗಳಿಂದ ಹೆಚ್ಚು ಮೋಸ-ವಂಚನೆ ನಡೆಯುತ್ತಿರಲಿಲ್ಲ! ಇಂತಹ ಜೂಲಯ್ಯ ಹಟ್ಟಿಯಲ್ಲಿ ಮಾತ್ರ ಯಾರ ಸಹವಾಸಕ್ಕೂ ಹೋಗದೆ, ಸಜ್ಜನರಾಗಿಯೇ ಇರುತ್ತಿದ್ದರು. ಯಾರನ್ನೂ ಗದರುತ್ತಿರಲಿಲ್ಲ. ಹಟ್ಟಿಯಲ್ಲಿ ಯಾರ ಮೇಲೂ ಜಗಳವಾಡಿದವರಲ್ಲ. ಇವರೆಲ್ಲಾ ನಾನು ಹಟ್ಟಿಯಲ್ಲಿ ಮರೆಯಲಾರದ ವ್ಯಕ್ತಿಗಳು.
ನಮ್ಮ ಮನೆ ಮುಂದೆ ಭಂಟಣ್ಣ ಎನ್ನುವವರಿದ್ದರು. ಚಪ್ಪಲಿ ಹೊಲೆಯುವ ಕೆಲಸ ಮಾಡುತ್ತಿದ್ದರು. ಮಹಾ ದೈವಭಕ್ತ. ಸ್ನಾನ, ದೇವರ ಪೂಜೆ ಇಲ್ಲದೆ, ತೊಟ್ಟು ನೀರನ್ನೂ ಕುಡಿಯುತ್ತಿರಲಿಲ್ಲ! ನಿತ್ಯವೂ ಶುಭ್ರವಾದ ಬಟ್ಟೆ ತೊಟ್ಟು ಕೆಲಸಕ್ಕೆ ಹೋಗುತ್ತಿದ್ದರು. ನ್ಯಾಯ-ನೀತಿಯನ್ನು ಅನುಸರಿಸುತ್ತಿದ್ದ ವ್ಯಕ್ತಿ. ಇವರ ಅಕ್ಕ ಚಲ್ಲಮ್ಮ. ಇವರೂ ಕೂಡ ತಮ್ಮ ಅಣ್ಣನಂತೆಯೇ ಇದ್ದರು. ಬಂಟಣ್ಣ ಅವರ ಇಡೀ ಕುಟುಂಬ ನಮ್ಮ ಹಟ್ಟಿಯಲ್ಲಿ ಮಾದರಿಯಂತಿತ್ತು. ನಮ್ಮ ಹಟ್ಟಿಯಲ್ಲಿ ಆ ಕಾಲಕ್ಕೆ ಪ್ರಸಿದ್ಧವಾದ ಭಜನೆ ತಂಡವಿತ್ತು. ಇದರಲ್ಲಿ ಪರಮೇಶ, ಹರ‍್ಮೊನಿಯಂ ಕೃಷ್ಣ ಬಹಳ ಸೊಗಸಾಗಿ ಹಾಡುತ್ತಿದ್ದರು. ಇನ್ನು ಭಜಣ್ಣನ ಮನೆಯವರು ಹರ‍್ಮೊನಿಯಂ ಮತ್ತು ತಬಲವನ್ನು ತಯಾರು ಮಾಡುತ್ತಿದ್ದರು. ಗೇಟಿನ ಪುಟ್ಟಣ್ಣ ನಾಟಕ ಕಲಿಸುತ್ತಿದ್ದರು. ಹಟ್ಟಿಯವರು ಇವರ ನೇತೃತ್ವದಲ್ಲೇ ಭಜನೆ ಕಲಿಯುತ್ತಿದ್ದರು. ಶ್ರಾವಣ ಮಾಸದಲ್ಲಿ ನಡೆಯುವ ಭಜನೆ ಕರ‍್ಯಕ್ರಮದಲ್ಲಿ ಇವರು ಹಟ್ಟಿಯ ಮನೆ ಮನೆಗಳಿಗೂ ಹೋಗಿ ಭಜನೆ ಮಾಡಿಬರುತ್ತಿದ್ದರು.
ನಮ್ಮ ಹಟ್ಟಿಯಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ನಂಜಪ್ಪ ಎನ್ನುವವರು. ಇವರು ನಮ್ಮ ಹಟ್ಟಿಯ ಸ್ಕೂಲಿನಲ್ಲಿ ಜವಾನ ಹುದ್ದೆಯಲ್ಲಿದ್ದರು. ಈ ಮಹಾನುಭಾವನಿಂದಲೇ ನಮ್ಮ ಹಟ್ಟಿಯ ಅನೇಕರು ವಿದ್ಯಾವಂತರಾದರು. ಹಟ್ಟಿಯ ಯಾವ ಮಕ್ಕಳೂ ಶಾಲೆಗೆ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವುದೇ ಇವರ ಮುಖ್ಯ ಕೆಲಸವಾಗಿತ್ತು. ಮನೆ ಮನೆಗೆ ಹೋಗಿ ಹುಡುಗರನ್ನು ಹಿಡಿದು ಶಾಲೆಗೆ ಸೇರಿಸುತ್ತಿದ್ದರು. ಇವರ ಬಳಿ ನಮ್ಮ ಇಡೀ ಹಟ್ಟಿಯ ಹುಡುಗರ ಸಂಪೂರ್ಣ ಮಾಹಿತಿ ಇರುತ್ತಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಗಳ ತಂದೆ-ತಾಯಿಗಳ ದುಡಿಮೆ, ಅವರ ಬಡತನ, ಅವರಿಗಿದ್ದ ಮಕ್ಕಳ ಸಂಖ್ಯೆ ಎಲ್ಲವೂ ಅವರಿಗೆ ಗೊತ್ತಿರುತ್ತಿತ್ತು. ಯಾವುದೇ ಹುಡುಗ ಶಾಲೆಗೆ ತಪ್ಪಿಸಿಕೊಂಡು ಕೆರೆ ಅಂಗಳದಲ್ಲೋ, ತೊರೆ ಮರಳಿನಮೇಲೋ ಅಥವಾ ‘ಮಕ್ಕಳ ದೊಂಗ್ರ’ದಲ್ಲೋ ಅವಿತು ಕುಳಿತಿದ್ದರೆ, ಅವನು ಹೋಗಿರುವ ಜಾಗವನ್ನು ಊಹಿಸಿ, ಅಲ್ಲಿಗೆ ಹೋಗಿ ಅವನನ್ನು ಎಳೆದುಕೊಂಡು ಬಂದು ಶಾಲೆಗೆ ಬಿಡುತ್ತಿದ್ದರು. ಇವರ ಕಣ್ಣುತಪ್ಪಿಸಿ ನಮ್ಮ ಹಟ್ಟಿಯ ಯಾವ ಹುಡುಗರೂ ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳುವಂತಿರಲಿಲ್ಲ! ನಂಜಪ್ಪ ಅವರು ಇಲ್ಲದಿದ್ದರೆ ನಮ್ಮ ಹಟ್ಟಿಯ ಅನೇಕರು ವಿದ್ಯೆ ಕಲಿಯಲು ಸಾಧ್ಯವಾಗುತ್ತಿರಲಿಲ್ಲ ಎಂದು ನನಗೆ ಈಗ ಅನಿಸುತ್ತದೆ. ನಿಜವಾಗಿಯೂ ಅವರೊಬ್ಬ ‘ಮಹಾತ್ಮ’. ಅವರೊಬ್ಬರಿಂದಾಗಿಯೇ ನಮ್ಮ ಹಟ್ಟಿ ವಿದ್ಯಾವಂತರ ಹಟ್ಟಿಯಾಯಿತು.
ದೊರೈರಾಜು: ಹೌದು ಸರ್. ನೀವು ಹೇಳಿದ್ದರಿಂದ ನನಗೆ ಅವರ ನೆನಪಾಯಿತು. ನಾನೂ ಅವರಿಂದಾಗಿಯೇ ಶಾಲೆಗೆ ಹೋಗುತ್ತಿದ್ದೆ. ನಂಜಪ್ಪ ಅವರ ಬಗ್ಗೆಯೇ ಹೇಳಿ ಸರ್.
ಹನುಮಂತಯ್ಯ: ನೀವು ಬಂದು ನೆನಪಿಸಿದ್ದಕ್ಕೆ ಇವೆಲ್ಲಾ ನೆನಪಾಯಿತು ದೊರೆ. ಆಗ ನೀವಿನ್ನೂ ಸಣ್ಣವರು. ಆಶ್ರ‍್ಯವೆಂದರೆ ನಂಜಪ್ಪ ಅವರು ನಮ್ಮ ಹಟ್ಟಿಯವರಲ್ಲ! ಬಿದಿರುಮೆಳೆ ತೋಟದ ಕಡೆಯಿಂದ ದಿನವೂ ಹಟ್ಟಿಯ ಶಾಲೆಗೆ ಬರುತ್ತಿದ್ದರು. ನಾವು ಶಾಲೆಗೆ ಹೋಗುವ ಕಾಲಕ್ಕೆ ಅವರಿಗೆ ನಡುವಯಸ್ಸು. ಇಷ್ಟು ಬಿಟ್ಟರೆ ಅವರ ಹಿನ್ನೆಲೆ ನಮಗೆ ಏನೂ ಗೊತ್ತಿಲ್ಲ! ಈಗ ಆ ವ್ಯಕ್ತಿಯ ಮಹತ್ವ ನಮಗೆ ಗೊತ್ತಾಗುತ್ತಿದೆ.
ದೊರೈರಾಜು: ಹೌದು ಸರ್. ನಮ್ಮ ಹಟ್ಟಿಯವರು ಮೊದಲು ಋಣಿಯಾಗಿರುಬೇಕಾದದ್ದು ನಂಜಪ್ಪ ಅವರಿಗೆ. ನಿಜವಾದ ಅರ್ಥದಲ್ಲಿ ನಂಜಪ್ಪ ಅವರು ನಮ್ಮ ಹಟ್ಟಿಯ ‘ಜ್ಯೋತಿಬಾ ಪುಲೆ’. ನಾವೆಲ್ಲ ವಿದ್ಯಾವಂತರಾಗಿದ್ದರೆ ಅದಕ್ಕೆ ಕಾರಣ ನಂಜಪ್ಪ ಅವರು. ನಮ್ಮ ಹಟ್ಟಿಯ ಪ್ರತಿಯೊಂದು ಮನೆಯವರ ಸಂಪೂರ್ಣ ಜಾತಕ ಅವರಿಗೆ ಗೊತ್ತಿತ್ತು. ಆದರೆ ದೌಭಾರ್ಗ್ಯದ ವಿಷಯವೆಂದರೆ ಅವರ ಮತ್ತು ಅವರ ಕುಟುಂಬದ ಹಿನ್ನೆಲೆ ಬಗ್ಗೆ ನಮಗೆ ಏನೂ ತಿಳಿಯದೇ ಇರುವುದು! ನಿಮ್ಮ ಮಾತುಗಳನ್ನು ಮುಂದುವರಿಸಿ ಸರ್.
ಹನುಮಂತಯ್ಯ: ಆರಂಭದಲ್ಲಿ ನಮ್ಮ ಹಟ್ಟಿಯಲ್ಲಿದ್ದ ಎರಡು ಭಜನೆ ಮನೆಯಲ್ಲಿ ಶಾಲೆ ನಡೆಯುತ್ತಿತ್ತು. ಆನಂತರದಲ್ಲಿ ಹಟ್ಟಿಯಲ್ಲಿಯೇ ಆರಂಭವಾದ ಮಿಷನ್ ಸ್ಕೂಲಿನಲ್ಲಿ ಶಾಲೆ ಮುಂದುವರೆಯಿತು. ಮಿಷನ್ ಸ್ಕೂಲಿನಲ್ಲಿ ನಮ್ಮ ಹಟ್ಟಿಯ ಹುಡುಗರನ್ನು ಬಿಟ್ಟರೆ ಬೇರೆ ಜಾತಿಯ ಹುಡುಗರು ಯಾರೂ ಬರುತ್ತಿರಲಿಲ್ಲ. ಹೀಗಾಗಿ ಈ ಶಾಲೆಯಲ್ಲಿ ಅಸ್ಪೃಶ್ಯತೆಯ ಆಚರಣೆಯ ಅನುಭವಗಳು ನಮ್ಮ ಹಟ್ಟಿಯ ಹುಡುಗರಿಗೆ ಆಗಿಲ್ಲ! ಡಿ ಸಿ ಹನುಮಂತರಾಜು ಅವರ ತಂದೆ ದೊಡ್ಡಯ್ಯ ಅವರು ನಮ್ಮಲ್ಲಿ ಮೇಷ್ಟ್ರಾಗಿದ್ದರು. ಮಿಷನ್ ಸ್ಕೂಲಿನಲ್ಲಿ ಹುಡುಗರಿಗೆ ಸ್ನಾನ ಮಾಡಿಸಲೆಂದೇ ಒಂದು ಸ್ನಾನದ ಮನೆ ಇತ್ತು. ಎರಡು ದೊಡ್ಡ ದೊಡ್ಡ ಹಂಡೆಗಳು ಅಲ್ಲಿದ್ದವು. ಸೌದೆ ಪಾಳ ಒಟ್ಟಿ ನೀರು ಕಾಯಿಸುತ್ತಿದ್ದರು. ಮನೆಯಿಂದ ಬಂದ ವಿದ್ಯಾರ್ಥಿಗಳಿಗೆ ಮೊದಲು ಸ್ನಾನ ಮಾಡಿಸಿ ಮತ್ತು ಅಲ್ಲಿಯೇ ಒಗೆದು ಶುಚಿಯಾಗಿರಿಸಿದ್ದ ಬಟ್ಟೆಯನ್ನು ಅವರಿಗೆ ತೊಡಿಸಿ, ಶಾಲೆಗೆ ಕರೆದುಕೊಳ್ಳುತ್ತಿದ್ದರು. ಹುಡುಗರು ಮರಳಿ ಮನೆಗೆ ತೆರಳುವಾಗ ಶಾಲೆಯ ಬಟ್ಟೆಗಳನ್ನು ಅಲ್ಲಿಯೇ ಕಳಚಿಟ್ಟು ತಮ್ಮ ಬಟ್ಟೆಗಳನ್ನು ತೊಟ್ಟು ಮನೆಗೆ ಹೋಗುತ್ತಿದ್ದರು. ಇದು ನಿತ್ಯವೂ ನಡೆಯುತ್ತಿತ್ತು. ಈ ಶಾಲೆಯ ಅನುಭವ ನಮ್ಮ ಮನೆಯವರಿಗೂ ಸ್ವಲ್ಪ ಗೊತ್ತು (ಪಕ್ಕದಲ್ಲಿ ಕುಳಿತಿದ್ದ ತಮ್ಮ ಪತ್ನಿಯವರನ್ನು ತೋರಿಸಿ) ಅವರಿಗೂ ಅಸ್ಪೃಶ್ಯತೆಗೆ ಒಳಗಾದ ಅನುಭವವಿದೆ. ಕೇಳಿ:
ಗಂಗಮ್ಮ ಕೆ: ನಾನು ಕೆ ಗಂಗಮ್ಮ ಅಂತ. ಇವರನ್ನು (ಹನುಮಂತಯ್ಯ ಅವರ ಕಡೆ ನೋಡಿ) ಮದುವೆಯಾಗಿ 51 ವರ್ಷಗಳಾದವು.
ದೊರೈರಾಜು: ‘ಕೆ’ ಅಂದರೆ ಏನ್ರಮ್ಮಾ?
ಗಂಗಮ್ಮ ಕೆ: ನನ್ನ ತವರುಮನೆ ಕರೆಮಾರನಹಳ್ಳಿ. ಅದು ಶಿರಾ ತಾಲೂಕಿನಲ್ಲಿದೆ. ನನ್ನ ತಂದೆ: ದೊಡ್ಡಲಿಂಗಯ್ಯ, ತಾಯಿ: ಕೆಂಪಮ್ಮ. ನನ್ನ ತಂದೆ, ತಾಯಿ ತೀರಿಕೊಂಡಿದ್ದಾರೆ. ಇದ್ದೊಬ್ಬ ನನ್ನ ಅಣ್ಣ ಮತ್ತು ನನ್ನ ಅತ್ತಿಗೆ ಸಹ ತೀರಿಕೊಂಡಿದ್ದಾರೆ. ಹೀಗಾಗಿ ಈಗ ತವರುಮನೆಗೆ ಹೋಗುತ್ತಿಲ್ಲ. ನಮ್ಮ ಮನೆಯವರು ಪ್ರತಿ ಗಾಂಧಿ ಜಯಂತಿ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಂದು, ಗಾಂಧಿ ಫೋಟೋ ಹಿಡಿದುಕೊಂಡು ಇದೇ ದೊಡ್ಡಹಟ್ಟಿಯನ್ನು ಸುತ್ತುಹಾಕೋರು. ಯಾರೇ ತಮಾಷೆ, ಗೇಲಿ ಮಾಡಿದರೂ ಅದರ ಬಗ್ಗೆ ತಲೆಕಡಿಸಿಕೊಳ್ಳುತ್ತಿರಲಿಲ್ಲ. ನಾನು 9 ನೇ ತರಗತಿಯಲ್ಲಿದ್ದಾಗಲೇ ನನಗೆ ಮದುವೆಯಾಯಿತು. ನಮ್ಮ ಮನೆಯವರಿಗಿಂತ ಅಸ್ಪೃಶ್ಯತೆಯ ಅನುಭವ ನನಗೆ ಜಾಸ್ತಿ ಆಗಿದೆ. ನಮ್ಮ ಕರೆಮಾರನಹಳ್ಳಿಯಲ್ಲಿ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದೆ. ಜಾತಿ-ಭೇದ ಶಾನೆ ಇತ್ತು. ನಾನು ಓದುತ್ತಿದ್ದಾಗ ಒಬ್ಬ ಮೇಷ್ಟ್ರಿದ್ದರು. ಅವರ ಹೆಸರು ನನಗೆ ಗೊತ್ತಿಲ್ಲ! ನಾವೆಲ್ಲಾ ಅವರನ್ನು ‘ಕಿವುಡ ಮಾಷ್ಟ್ರುʼ ಎಂದು ಕರೆಯುತ್ತಿದ್ದೆವು. ಇವರು ಶಾಲೆಯಲ್ಲಿ ಜಾತಿ-ಭೇದ ಮಾಡುತ್ತಿದ್ದರು. ನಮ್ಮ ಹೊಲೆ-ಮಾದಿಗರ ಹುಡುಗರನ್ನು ಶಾಲೆಯೊಳಗೆ ಬಿಟ್ಟುಕೊಳ್ಳದೆ ಶಾಲೆಯ ಹೊಸಲಿಂದಾಚೆಗೆ ಕೂರಿಸುತ್ತಿದ್ದರು. ನಾವೆಲ್ಲ ಹೊರಗೇ ಕುಳಿತು ಪಾಠ ಕೇಳಬೇಕಾಗಿತ್ತು. ಬೇರೆ ಜಾತಿಯ ಮಕ್ಕಳನ್ನು ಶಾಲೆಯ ಒಳಗೆ ಬಿಟ್ಟುಕೊಳ್ಳುತ್ತಿದ್ದರು. ನಮ್ಮನ್ನು ಹೊಡೆಯುವಲ್ಲೂ ಇವರು ಮಡಿ-ಮೈಲಿಗೆ ಅನುಸರಿಸುತ್ತಿದ್ದರು. ಒಂದು ಭಾರಿ ಉದ್ದನೆಯ ಕೋಲನ್ನು ಹಿಡಿದು, ತಮ್ಮ ಕಚ್ಛೆ ಪಂಚೆಯನ್ನು ನಮಗೆ ಸೋಕದಂತೆ ಮುದುಡಿಕೊಂಡು ನಮ್ಮನ್ನು ಹೊಡೆಯುತ್ತಿದ್ದರು. ಇದಿಷ್ಟೇ ಅಲ್ಲದೆ, ಆಟ ಆಡಿಸುವುದರಲ್ಲೂ ತರತಮ ಮಾಡುತ್ತಿದ್ದರು. ನಾವು ಬೇರೆ ಜಾತಿಯ ಹುಡುಗರ ಜೊತೆ ಸೇರಿ ಆಟ ಆಡುವಂತಿರಲಿಲ್ಲ! ನಮ್ಮ ಹಟ್ಟಿಯ ಹುಡುಗರ ಜೊತೆ ಪ್ರತ್ಯೇಕವಾಗಿಯೇ ಆಡಬೇಕಾಗಿತ್ತು! ಇವರು ಹೀಗೆ ನಮ್ಮನ್ನೆಲ್ಲಾ ಪ್ರೇತ್ಯೇಕವಾಗಿ ಇಡುವುದನ್ನು ನೋಡಿ, ನಮ್ಮ ಹಳ್ಳಿಯವರೆಲ್ಲಾ ಕಿವುಡು ಮಾಷ್ಟ್ರನ್ನು ‘ಹೀಗೆಲ್ಲಾ ಮಾಡಬೇಡಿ’ ಎಂದು ಹೇಳುತ್ತಿದ್ದರು. ಆದರೂ ಮೇಷ್ಟ್ರು ಊರಿನವರ ಮಾತನ್ನು ಕಿವಿಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ನಮಗೂ ಇದೆಲ್ಲಾ ‘ಸರಿ’ ಎನಿಸುತ್ತಿರಲಿಲ್ಲ, ಆದರೂ ಗಟ್ಟಿಯಾಗಿ ಕೇಳಲು ಧೈರ್ಯ ಇರಲಿಲ್ಲವಾದ್ದರಿಂದ ಸುಮ್ಮನಿದ್ದೆವು. ಮುಂದೆ ಊರುಕೆರೆಯಿಂದ ನಮ್ಮ ಜಾತಿಯವರಾದ ಸಿದ್ದಪ್ಪ ಅವರು ಮೇಷ್ಟ್ರಾಗಿ ನಮ್ಮ ಊರಿಗೆ ಬಂದ ಮೇಲೆ ಇವೆಲ್ಲಾ ನಿಂತಿತು.
ಹನುಮಂತಯ್ಯ: ನಮ್ಮ ಹಟ್ಟಿಯಲ್ಲಿದ್ದವರೆಲ್ಲಾ ಅಂದಂದಿಗೆ ದುಡಿದು ತಿನ್ನುವವರೇ ಆಗಿದ್ದರು. ಯಾರಲ್ಲೂ ರಾಗ-ದ್ವೇಷ, ಅಸೂಯೆಯಂತಹ ಸಣ್ಣ ಗುಣಗಳು ಇರಲಿಲ್ಲ. ನಮ್ಮ ಹಟ್ಟಿ ಎಷ್ಟು ಪಾರದರ್ಶಕವಾಗಿತ್ತು ಎಂದರೆ, ಗಂಡ-ಹೆಂಡತಿಯ ನಡುವಿನ ಜಗಳವೂ ಖಾಸಗಿಯಾಗಿರಲಿಲ್ಲ! ಅವರ ಜಗಳ ಮನೆಯೊಳಗಿನಿಂದ ಆರಂಭವಾಗಿ, ಕೊನೆಗೆ ನಮ್ಮ ಹಟ್ಟಿಯ ಬೀದಿಯ ನಡುವೆ ಮುಕ್ತಾಯವಾಗುತ್ತಿತ್ತು. ಆದರೆ ಇವೆಲ್ಲವನ್ನೂ ನಮ್ಮ ಹಟ್ಟಿಯ ಜನ ಸಹಜವೆಂಬಂತೆ ಸ್ವೀಕರಿಸಿದ್ದರು. ನಮ್ಮ ಹಟ್ಟಿಯ ವಿಶೇಷವೆಂದರೆ, ಪಾರಿವಾಣದ ಹಕ್ಕಿಯ ಜೂಜು. ಇಲ್ಲಿದ್ದ ಮೇಗಲ ಹಟ್ಟಿಯ ಮತ್ತು ಕೆಳಗಲ ಹಟ್ಟಿಯಲ್ಲಿ ಜೂಜಿಗಾಗಿಯೇ ಪಾರಿವಾಣದ ಹಕ್ಕಿಗಳನ್ನು ಸಾಕುತ್ತಿದ್ದರು. ಪ್ರತಿ ಭಾನುವಾರ ಹಟ್ಟಿಯಲ್ಲಿ ಈ ಜೂಜು ನಡೆಯುತ್ತಿತ್ತು. ಇದು ಗಂಟೆಗಟ್ಟಲೆ ನಡೆಯುತ್ತಿದ್ದ ಸ್ಪರ್ಧೆಯಾಗಿತ್ತು. ಹಕ್ಕಿಗಳು ಆಕಾಶದಲ್ಲಿ ಗಂಟೆಗಟ್ಟಲೆ ಹಾರಾಡುತ್ತಾ ಹಾರಾಡುತ್ತ ಸುತ್ತುತ್ತಿದ್ದವು. ಯಾವ ಹಕ್ಕಿ ಸೋತು ಮೊದಲು ಇಳಿಯುವುದೋ ಅದು ಸೋತಂತೆ. ಈ ಸ್ಪರ್ಧೆಯನ್ನು ನೋಡಲು ಹಟ್ಟಿಯ ಹೆಂಗಸರು ಮತ್ತು ಮಕ್ಕಳು ಗುಂಪುಕಟ್ಟಿಕೊಡು ಬರುತ್ತಿದ್ದರು.
ನನ್ನ ಹತ್ತನೇ ವಯಸ್ಸಿನಲ್ಲೇ ನಾನು ಇದೇ ಹಟ್ಟಿಯಲ್ಲಿ ‘ಭಾರತ್ ಸೇವಾದಳ’ ಎನ್ನುವ ಸೇವಾ ಸಂಸ್ಥೆಯನ್ನು ಕಟ್ಟಿದೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧಿ ಜಯಂತಿ ದಿನಗಳಂದು, ಗಾಂಧೀಜಿ ಅವರ ಫೋಟೋ ಹಿಡಿದುಕೊಂಡು ನಮ್ಮ ಹಟ್ಟಿಯಲ್ಲೆಲ್ಲಾ ಮೆರವಣಿಗೆ ಹೋಗುತ್ತಿದ್ದೆವು. ಇದರೊಂದಿಗೆ ಹಟ್ಟಿಯಲ್ಲಿ ಎಲ್ಲಾ ಮಕ್ಕಳನ್ನೂ ಶಾಲೆಗೆ ಕಳುಹಿಸುವಂತೆ ತಂದೆ-ತಾಯಿಗಳಿಗೆ ಒತ್ತಾಯಿಸುತ್ತಿದ್ದೆವು. ನಮ್ಮ ಹಟ್ಟಿಯನ್ನು ಸ್ವಚ್ಛ ಮಾಡುತ್ತಿದ್ದೆವು. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಂದ ಆರುಕಾಸೋ-ಮೂರುಕಾಸೋ ಸಂಗ್ರಹಿಸಿ, ಅದರಿಂದ ಎಣ್ಣೆ-ಬಾಚಣಿಗೆ ತಂದು, ಅವರಿಗೆ ಎಣ್ಣೆ ಹಾಕಿ, ತಲೆ ಬಾಚಿ ಸ್ಕೂಲಿಗೆ ಕಳುಹಿಸುತ್ತಿದ್ದೆವು. ಇದನ್ನೆಲ್ಲಾ ನಾವು ಸೇವೆ ಎಂದೆ ತಿಳಿದು ಹೆಮ್ಮೆಯಿಂದ ಮಾಡುತ್ತಿದ್ದೆವು. ನಾವು ಮಾಡುತ್ತಿದ್ದ ಸೇವಾ ಕಾರ‍್ಯಕ್ಕೆ ಹಟ್ಟಿಯಲ್ಲಿ ಆಗ ಸರಿಯಾಗಿ ಸಹಕಾರ ದೊರೆಯುತ್ತಿರಲಿಲ್ಲ. ಆದರೂ ಸ್ನೇಹಿತರಾಗಿದ್ದ ನಮ್ಮ ಹಟ್ಟಿಯ ಲಕ್ಷ್ಮಿಪುತ್ರ ಮತ್ತು ಹುಚ್ಚಹನುಮಯ್ಯ ಮಾತ್ರ ನನ್ನೊಂದಿಗೆ ಹೆಚ್ಚು ಸಹಕರಿಸುತ್ತಿದ್ದರು. ಇಂದು ಆ ದಿನಗಳನ್ನು ನೆನಪಿಸಿಕೊಂಡರೆ, ನಾವು ನಮ್ಮ ಹಟ್ಟಿಗೆ ಸಾರ್ಥಕ ಸೇವೆಯನ್ನು ಮಾಡಿದ್ದೇವೆಂಬ ಸಂತೋಷ ಇದೆ. ಹುಟ್ಟಿದ ಹಟ್ಟಿಯ ಋಣವನ್ನು ನನ್ನ ಕೈಲಾದ ಮಟ್ಟಿಗೆ ತೀರಿಸಿದ್ದೇನೆ ಎನ್ನುವ ತೃಪ್ತಿ ಇದೆ. ನಾನು ನೆಮ್ಮದಿಯಾಗಿ ಇರುವುದಕ್ಕೆ ಇದಿಷ್ಟೇ ಸಾಕು!
ಕೆ ದೊರೈರಾಜ್ ಪರಿಚಯ
ಕದಿರಯ್ಯ ದೊರೈರಾಜ್ (1947) ತುಮಕೂರಿನ ಪೂರ್ವದಿಕ್ಕಿಗಿರುವ ದೊಡ್ಡಹಟ್ಟಿಯವರು. ಇದನ್ನು ನರಸಿಂಹರಾಜ ಕಾಲೋನಿ ಎಂದೂ ಕರೆಯುತ್ತಾರೆ. ತಾಯಿ: ಭದ್ರಮ್ಮ. ತಂದೆ: ಕದಿರಯ್ಯ, ಮಂಡಿಯಲ್ಲಿ ಕೂಲಿ ಕೆಲಸಗಾರರು. ತುಮಕೂರಿನಲ್ಲಿ ಬಿ. ಎಸ್‌ಸಿ ಪದವಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎಸ್ಸಿ ಪದವಿ (1973-74). ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಅಧ್ಯಾಪಕನಾಗಿ, ಪ್ರಾಂಶುಪಾಲರಾಗಿ, ಉಪನಿರ್ದೇಶಕರಾಗಿ, ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಸರಳತೆ, ಸಾಮಾಜಿಕ ಬದ್ಧತೆ ಮತ್ತು ಆಡಂಭರವಿಲ್ಲದ ನಡವಳಿಕೆ, ನಡೆ-ನುಡಿಯಲ್ಲಿ ಎರಡಿಲ್ಲದ ದೊರೈರಾಜ್ ತುಮಕೂರಿನ ಎಲ್ಲ ಹೋರಾಟಗಾರರ ನಿತ್ಯ ಸಂಗಾತಿ.

‘ದಲಿತ ಯುವಕ ಸಂಘ’ದಿಂದ ಆರಂಭವಾದ ದೊರೈರಾಜ್ ಅವರ ಹೋರಾಟದ ಪಯಣ ‘ದಲಿತ ಸಂಘರ್ಷ ಸಮಿತಿ’ಯವರೆಗೂ ಮುನ್ನೆಡೆದಿದೆ. ದಲಿತರನ್ನೂ ಒಳಗೊಂಡು ಎಲ್ಲ ನಿರ್ಲಕ್ಷಿತ ಸಮುದಾಯಗಳು, ಪರಿಧಿಯಿಂದ ಆಚೆಯೇ ಉಳಿದಿರುವ ಸಣ್ಣ ಸಣ್ಣ ಸಮುದಾಯಗಳನ್ನು ನಾಗರಿಕ ಸಮಾಜ ಸೃಷ್ಟಿಸಿರುವ ಅಸಹನೀಯ ಅಸ್ವಸ್ಥತೆಯಿಂದ ವಿಮೋಚನೆಗೊಳಿಸಿ, ಹೊಸ ಭವಿಷ್ಯದೆಡೆಗೆ ಸಾಗುವ ದಾರಿಯನ್ನು ಹುಡಿಕಿಕೊಳ್ಳುವಂತ ವಾತಾವರಣ ಸೃಷ್ಟಿಸುವುದು ನಮ್ಮ ನಿರಾಶೆಯ ಕಾಲದ ಮೊದಲ ಕರ್ತವ್ಯ ಎಂದು ದೊರೈರಾಜ್ ನಂಬಿದ್ದಾರೆ. ಆಳುವ ವ್ಯವಸ್ಥೆಯೊಂದಿಗೆ ಎಂದೂ ರಾಜಿಯಾಗದ ಅವರ ಮನೋಭಾವ ಮಾನವತೆಯ ಪರವಾಗಿ ತುಡಿಯುವಂತದ್ದು. ಗಾಂಧಿ, ಅಂಬೇಡ್ಕರ್ ಮತ್ತು ಕನ್ನಡ ಪರಂಪರೆಯ ಉದಾರವಾದಿ ಚಿಂತನೆಗಳ ಬಗೆಗಿನ ಅವರ ಆಳವಾದ ತಿಳಿವು ಅಂತಿಮವಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ಮೀಸಲಾಗಿದೆ. ದೊರೈರಾಜ್ ಬಹುತ್ವದ ತತ್ವದಲ್ಲಿ ಅಚಲವಾಗಿ ನಂಬಿಕೆ ಇರುವ ಏಕತೆಯ ಹೋರಾಟಗಾರ.






