ತುರುವೇಕೆರೆ ತಾಲೂಕಿನಲ್ಲಿ ಚಿರತೆ ಕಾಟ ಅತಿಯಾಗಿದೆ. ಗುರುವಾರ ರಾತ್ರಿ ಪಟ್ಟಣದ ಎಪಿಎಂಸಿ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿದೆ. ಜನರ ಮುಂದೆಯೇ ಬೀದಿ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಇದರಿಂದಾಗಿ ಜನರು ಭಯಭೀತರಾಗಿದ್ದಾರೆ.
ಎಪಿಎಂಸಿ ಕಾಂಪೌಂಡ್ ಹಿಂಭಾಗ ಹನುಮಂತಪ್ಪ ಎನ್ನುವವರ ಮನೆ ಮುಂದೆ ಸಾಯಂಕಾಲ 7.30 ರ ಸಮಯದಲ್ಲಿ ಬೀದಿ ನಾಯಿಯನ್ನು ಹೊತ್ತೊಯ್ದ ದೃಶ್ಯವನ್ನು ಅವರ ಮನೆಯ ಮೇಲ್ಭಾಗ ನಿಂತಿದ್ದವರು ಕಣ್ಣಾರೆ ನೋಡಿದ್ದಾರೆ. ಈ ದೃಶ್ಯದಿಂದ ಮನೆಯಲ್ಲಿದ್ದ ಮಕ್ಕಳು ಸೇರಿದಂತೆ ಅಕ್ಕಪಕ್ಕದ ಮನೆಯವರು ಭಯಭೀತರಾಗಿದ್ದಾರೆ. ಮನೆಯಿಂದ ಹೊರಬರಲೂ ಹೆದರುತ್ತಿದ್ದಾರೆ.
ತಾಲೂಕಿನ ಮಾರಪ್ಪನಹಳ್ಳಿಯಲ್ಲಿಯೂ ಚಿರತೆ ಕಾಣಿಸಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಚಿರತೆ ಮರಿ ಕಾಣಿಸಿಕೊಂಡಿದೆ. ತಾರಾ ಕರೀಗೌಡ ಎಂಬುವವರ ಮನೆಯಲ್ಲಿ ಸಾಕಲಾಗಿದ್ದ ನಾಯಿಯನ್ನೂ ಚಿರತೆ ಹೊತ್ತೊಯ್ದಿದೆ. ಅಲ್ಲದೇ ಮುದ್ದೇಗೌಡ ಎಂಬುವವರ ಮನೆಯಲ್ಲಿ ಸಾಕಲಾಗಿದ್ದ ನಾಯಿಯನ್ನು ಸಹ ತಿಂದು ಹಾಕಿದೆ. ತೋಟದ ಸಾಲಿನಲ್ಲಿ ಚಿರತೆ ಕೂಗುವ ಮತ್ತು ಓಡಾಡುವ ದೃಶ್ಯ ಕಾಣಬರುತ್ತಿದೆ ಎಂದು ಮಾರಪ್ಪನಹಳ್ಳಿಯ ರೈತ ಮಹಿಳೆ ತಾರಮ್ಮ ಆತಂಕ ವ್ಯಕ್ತಡಿಸಿದ್ದಾರೆ.
ಪಟ್ಟಣದಲ್ಲಿ ಗುರುವಾರ ರಾತ್ರಿ ಚಿರತೆ ಕಾಣಿಸಿಕೊಂಡ ಜಾಗದಲ್ಲಿ ಸಾಕಷ್ಟು ಮನೆಗಳು ಇವೆ. ಅಲ್ಲದೇ ಶಾಲಾ ಕಾಲೇಜುಗಳೂ ಸಹ ಇವೆ. ಚಿರತೆ ಕಾಣಿಸಿಕೊಂಡಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಅರಣ್ಯ ಇಲಾಖಾ ಸಿಬ್ಬಂದಿ ಬೋನು ಇಡುವ ಮೂಲಕ ಚಿರತೆಯನ್ನು ಹಿಡಿಯಬೇಕೆಂದು ನಾಗರೀಕರು ಆಗ್ರಹಿಸಿದ್ದಾರೆ
ವರದಿ – ಎಸ್. ನಾಗಭೂಷಣ್





