ಯುವ ಸಮೂಹ ಶಿಕ್ಷಣದ ಜೊತೆಗೆ ಸಾಮಾಜಿಕ ಹಾಗೂ ರಾಜಕೀಯ ವಿಷಯಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ದೇಶದ ಉಜ್ವಲ ಭವಿಷ್ಯ ನಿರ್ಮಾತೃಗಳಾಗಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸ್ನಾತಕ – ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ರಾಜ್ಯದ ಆರ್ಥಿಕ ಬಜೆಟ್ ಅಧಿವೇಶನ ಮೇಲಿನ ವಿಧಾನಸಭೆ ಹಾಗೂ ವಿಧಾನ ಪರಿಷತ್ ಗಳ ಚರ್ಚೆಯ ಕಲಾಪ ವೀಕ್ಷಿಸಲು ಆಗಮಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡುತ್ತ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯವೈಖರಿಯನ್ನು ನೇರವಾಗಿ ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು, ಕಲಾಪ ವೀಕ್ಷಣೆ ಜ್ಞಾನವರ್ಧನೆಗೆ ಸಹಕಾರಿಯಾಗಲಿದೆ, ಸಮಾಜದ ಸಮಸ್ಯೆಗಳ ಅರಿವು ಹೊಂದಿ ಪ್ರಶ್ನೆಗಳನ್ನು ಕೇಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿ ಹೇಳಿದರು.
ಯಾವುದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು, ಉದ್ಯೋಗ ಆಧಾರಿತ ಶಿಕ್ಷಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಜಿಟಿಟಿಸಿ ಸ್ಥಾಪನೆ, ನಿರುದ್ಯೋಗಿ ಯುವಕ ಯುವತಿಯರಿಗಾಗಿ ಉದ್ಯೋಗ ಮೇಳ, ಉತ್ತಮವಾದ ಸಾರಿಗೆ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳನ್ನು ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಂಡು ಉತ್ತಮ ನಾಗರೀಕರಾಗಿ ಮಾದರಿ ಜೀವನವನ್ನು ಕಟ್ಟಿಕೊಳ್ಳಬೇಕು ಎಂದರು.
ಕಲಾಪಗಳನ್ನು ನೇರವಾಗಿ ವೀಕ್ಷಿಸಿ ಮಾತನಾಡಿದ ವಿದ್ಯಾರ್ಥಿಗಳು ಇಲ್ಲಿಯವರೆಗೂ ಕೇವಲ ಪುಸ್ತಕಗಳಲ್ಲಿ ಅಡಕವಾಗಿರುವ ಜ್ಞಾನದ ಆಧಾರದ ಮೇಲೆ ಕಲ್ಪನೆ ಮಾಡಿಕೊಳ್ಳುತ್ತಿದ್ದೇವು, ಕಲಾಪಗಳ ನೇರ ವೀಕ್ಷಣೆಯಿಂದಾಗಿ ವಾಸ್ತಾವಿಕವಾಗಿ ಹೇಗೆ ಕಾರ್ಯನಿರ್ವಹಣೆ ಮಾಡುತ್ತವೆ ಎಂದು ತಿಳಿಯಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಸದಸ್ಯ ರಾಜೇಂದ್ರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟದ ವ್ಯವಸ್ಥೆ ಮತ್ತು ನೆನಪಿನ ಕಾಣಿಕೆಯನ್ನು ವ್ಯವಸ್ಥೆ ಮಾಡಿದ್ದರು.
ಕಾಲೇಜಿನ 170 ವಿದ್ಯಾರ್ಥಿಗಳು ಹಾಗೂ 14 ಜನ ಬೋಧಕ ಸಿಬ್ಬಂದಿ ಕಲಾಪ ವೀಕ್ಷಣೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಶ್ಮಿ ರಾಜಣ್ಣ, ಯುವ ಮುಖಂಡ ಹರ್ಷ ಕುರುಬರಹಳ್ಳಿ, ಪ್ರಾಂಶುಪಾಲರಾದ ಪ್ರೊ.ಕುಮಾರ್.ಕೆ.ಎಸ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಪ್ರಾಧ್ಯಾಪಕರಾದ ಡಾ.ರಂಜಿತಾ ಬಿ.ಆರ್, ಡಾ.ನಾಗರಾಜು ಎಂ.ಎಸ್, ಡಾ.ದುರ್ಗಪ್ಪ, ಡಾ.ಲತಾ, ಡಾ.ಲೀಲಾವತಿ, ಸಂಜೀವ ಮೂರ್ತಿ, ರಾಮಮೂರ್ತಿ, ಡಾ.ಮಂಜುನಾಥ್ ಬುಡಸನಹಳ್ಳಿ, ಮುರುಳಿಧರ್,ಪತ್ರಾಂಕಿತ ವ್ಯವಸ್ಥಾಪಕಿ ಚಂದ್ರಕಲಾ,ರಂಗಸ್ವಾಮಯ್ಯ ಹಾಜರಿದ್ದರು.





