ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳಿಗೆ, ಅಂಬಾನಿ, ಅದಾನಿಗಳಿಗೆ ಸಾವಿರಾರು ಎಕರೆ ಜಮೀನು ನೀಡಿದೆ. ಆದರೆ ಸಣ್ಣಪುಟ್ಟ ತಪ್ಪುಗಳನ್ನು ಎತ್ತಿ ಹಿಡಿದು ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿಗೆ ಅಡ್ಡಿಪಡಿಸುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ ಬಿ ಕ್ರಾಸ್ ಬಳಿ ಹಾದುಹೋಗುವ ಎತ್ತಿನಹೊಳೆ ಯೋಜನೆ ನಾಲಾ ಕಾಮಗಾರಿ ಸ್ಥಳದಲ್ಲಿ ನಡೆದ ಆಂದೋಲನ ಸಭೆಯಲ್ಲಿ ಮಾತನಾಡಿದರು.
“2014ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲಿಂದ ಈವರೆಗೆ ₹23 ಸಾವಿರ ಕೋಟಿ ಖರ್ಚಾಗಿದೆ. ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ. ಸಂಪೂರ್ಣ ಕಾಮಗಾರಿಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಹೊತ್ತಿದೆ. ಈ ಯೋಜನೆ ಪೂರ್ಣಗೊಂಡರೆ ಚಿಕ್ಕಮಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಎಂಟು ಜಿಲ್ಲೆಗಳ ರೈತರ ಬದುಕು ಹಸನಾಗುವುದರ ಜತೆಗೆ ಅಂತರ್ಜಲ ವೃದ್ಧಿಗೂ ಸಹಕಾರಿಯಾಗುತ್ತದೆ” ಎಂದು ಹೇಳಿದರು.
“ಕಾಮಗಾರಿ ಶೇ.90ರಷ್ಟು ಮುಗಿಯುವ ಹಂತ ತಲುಪುವ ಮಟ್ಟಕ್ಕೆ ಬಂದಾಗ ಅರಣ್ಯ ಮತ್ತು ಪರಿಸರ ಇಲಾಖೆ ತಕರಾರು ತೆಗೆದು ನಾಲೆ ಪಕ್ಕ ಹೆಚ್ಚುವರಿಯಾಗಿ ಜಾಗ ತೆಗೆದುಕೊಂಡಿದ್ದೀರ ಎಂದು 11 ಪ್ರಶ್ನೆಗಳನ್ನು ಕೇಳಿದೆ. ನವೆಂಬರ್‌ನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವರನ್ನು ಬೇಟಿ ಮಾಡಿ ಯೋಜನೆಯಿಂದ 76 ಲಕ್ಷ ಜನರಿಗೆ ಅನುಕೂಲವಾಗುತ್ತದೆಂದು ಮನವರಿಕೆ ಮಾಡಿದಾಗ ತೊಡಕು ನಿವಾರಣೆಯ ಭರವಸೆ ನೀಡಿದ್ದರು. ಆದರೆ ಈಗ ಯಾವುದೇ ಬೆಳವಣಿಗೆಯೂ ಕಾಣುತ್ತಿಲ್ಲ. ಜಿಲ್ಲೆಯ ಸಚಿವರು, ಜನಪ್ರತಿನಿಧಿಗಳನ್ನು ಆಹ್ವಾನಿಸಿ ಲಕ್ಷಾಂತರ ಜನರನ್ನು ಸೇರಿಸಿ ಜನಾಂದೋಲನ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಬಿ ಲಕ್ಕಪ್ಪ ಮಾತನಾಡಿ, “ಎತ್ತಿನಹೊಳೆ ನೀರು ಹರಿದರೆ ಕೆರೆಗಳು ತುಂಬಿ ಅಂತರ್ಜಲ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ಮನಸ್ಸು ಮಾಡಿ ಸಣ್ಣಪುಟ್ಟ ಲೋಪಗಳನ್ನ ಎತ್ತಿ ಹಿಡಿಯಬಾರದು. ನೀರಿಗಾಗಿ ಹೋರಾಟಕ್ಕೆ ಸಿದ್ಧ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟಗಾರರ ಬಿಡುಗಡೆಗೆ ಎಸ್‌ಯುಸಿಐ ಆಗ್ರಹ
ಮಾಜಿ ಶಾಸಕ ಗಂಗಹನುಮಯ್ಯ, ತಾಲೂಕು ಅಧ್ಯಕ್ಷ ಪಿ ಟಿ ಚಿಕ್ಕಣ್ಣ, ಕಾಂತರಾಜು, ವೆಂಕಟೇಶ್, ಶಂಕರಪ್ಪ, ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಜಯರಾಂ, ಸಾವಯುವ ಕೃಷಿಕ ತರಬೇನಹಳ್ಳಿ ಷಡಾಕ್ಷರಿ, ದೇವರಾಜು, ನಾಗರಾಜು, ಲಕ್ಷ್ಮೀದೇವಮ್ಮ, ಪ್ರಸನ್ನಕುಮಾರ್, ಭಾಗ್ಯಮ್ಮ, ರಾಧಮ್ಮ, ಸುಕನ್ಯಾ, ಆದಿಲ್ ಸೇರಿದಂತೆ ಇತರರು ಇದ್ದರು.





