ಒಳಮೀಸಲಾತಿಗೆ ಸಂಬಂಧಿಸಿದಂತೆ ಮಾ. 27ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಸಂಪೂರ್ಣ ಒಳಮೀಸಲಾತಿ ಜಾರಿಯಾಗಬೇಕು. ಒಳ ಮೀಸಲಾತಿ ಅನುಸಾರ ಸುಮಾರು 56432 ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಬಡ್ತಿ ಮೀಸಲಾತಿಯನ್ನು ನೀಡಬೇಕು. ಒಂದುವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿ ಮಾಡದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಷಡಕ್ಷರಿಮುನಿ ಸ್ವಾಮೀಜಿ ಒತ್ತಾಯಿಸಿದರು.
ಒಳಮೀಸಲಾತಿ ನೀಡಲು ವಿಳಂಬ ಮಾಡುತ್ತಿರುವ ಸರಕಾರದ ಧೋರಣೆ ಖಂಡಿಸಿ ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಷಡಕ್ಷರಿಮುನಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಶನಿವಾರ ಶಿರಾ ನಗರದ ಅಂಬೇಡ್ಕರ್ ಸರ್ಕಲ್‌ನಿಂದ ತುಮಕೂರು ಕಡೆಗೆ ಪ್ರಯಾಣ ಬೆಳೆಸಿತು ಈ ಸಂದರ್ಭದಲ್ಲಿ ಮಾತನಾಡಿದರು. ನಮ್ಮ ಪಾದಯಾತ್ರೆ ಮಾ. 27ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ. ಅಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು. ಒಂದು ವೇಳೆ ಸಿದ್ದರಾಮಯ್ಯ ಅವರು ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡದಿದ್ದರೆ. ನೀವು ಶೋಷಿತರ ಕಣ್ಣೊರೆಸುವ ಸಮಾಜಿಕ ನ್ಯಾಯದ ಹರಿಕಾರರಲ್ಲ ಎಂದು ಗೊತ್ತಾಗುತ್ತದೆ. ಮಾದಿಗರ ಅನ್ನವನ್ನು ಬಲಾಡ್ಯರ ಪಾಲು ಮಾಡಲು ಹೋದರೆ ನೀವು ತೆರೆಮರೆಗೆ ಹೋಗುವುದು ಖಂಡಿತ ಎಂದರು.
ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ ಒಳಮೀಸಲಾತಿಗಾಗಿ ಸದಾಶಿವ ಆಯೋಗ ರಚಿಸಿದ್ದು ಕಾಂಗ್ರೆಸ್ ಸರಕಾರ. ಸಂವಿಧಾನಬದ್ಧ ರೀತಿಯಲ್ಲಿ ಆಯೋಗ ರಚಿಸಿದಾಗ ರಾಜಕೀಯವನ್ನು ಮೀರಿ ವಸ್ತುಸ್ಥಿತಿಯನ್ನು ಸರಕಾರಕ್ಕೆ ಮನವರಿಕೆ ಮಾಡುವುದು ಆಯೋಗ. ಸದಾಶಿವ ಆಯೋಗದ ವರದಿ, ಅದಾದಮೇಲೆ ನಾಗಮೋಹನ್ ದಾಸ್ ಅವರ ಆಯೋಗದ ವರದಿ ಇವರೆಡೂ ವರದಿಗಳು ನ್ಯಾಯಕ್ಕೆ ತಕ್ಕದಾದ ವರದಿ ನೀಡಿದ್ದಾರೆ. ನಾಗಮೋಹನ್ ದಾಸ್ ಅವರು ವರದಿ ಕೊಟ್ಟ ಮೇಲೆ ವರದಿಯನ್ನು ಮೀರಿ ರಾಜಕೀಯವಾಗಿ ತೀರ್ಮಾನ ಮಾಡುವುದು ಸರಿಯಲ್ಲ. ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸಚಿವ ಸಂಪುಟದ ಮೇಲೆ ನಂಬಿಕೆ ಇದೆ. ಸದಾಶಿವ ಆಯೋಗದ ವರದಿ ಹಾಗೂ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಪ್ರಾಧ್ಯನ್ಯವಾಗಿಟ್ಟುಕೊಂಡು ಅದರ ಆಧಾರವಾಗಿಯೇ ತೀರ್ಮಾನವಾಗಬೇಕು ಎಂದರು.
ಮುಖಂಡರಾದ ಕೊಟ್ಟ ಶಂಕರ್ ಮಾತನಾಡಿ ಮಾ. 27ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಅನುಸಾರ 56432 ಹುದ್ದೆ ತುಂಬದೇ ಹೋದರೆ ಸಚಿವರಾದ ಕೆ.ಎಚ್.ಮುನಿಯಪ್ಪ ಅವರಾದಿಯಾಗಿ ಎಲ್ಲಾ ಕಾಂಗ್ರೆಸ್ ಜನಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಲು ಸಿದ್ದರಾಗಬೇಕು. ಈ ಹಿಂದೆ ಕಾಂಗ್ರೆಸ್ ಸರಕಾರ 2018ರಲ್ಲಿ ಒಳಮೀಸಲಾತಿ ಜಾರಿಯಾಗದೆ ಸೋತಿರುವುದಾಗಿ ಸಿದ್ದರಾಮಯ್ಯ ಅವರ ಸ್ವತಃ ಹೇಳಿದ್ದಾರೆ. ಮುಂದಿನ ದಿನಗಳಲ್ಲೂ ಅದೇ ರೀತಿ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾದರ ಮಹಾಸಭಾ ಶಿರಾ ತಾಲೂಕು ಸಮಿತಿ ಅಧ್ಯಕ್ಷರಾದ ಪಿ.ಬಿ.ನರಸಿಂಹಯ್ಯ, ಉಪಾಧ್ಯಕ್ಷ ಶಿವಣ್ಣ.ಡಿ, ಕಾರ್ಯದರ್ಶಿ ಸಿ.ಎನ್.ನರಸಿಂಹರಾಜು, ಖಜಾಂಚಿ ಶಿವಣ್ಣ.ಕೆ.ಎಲ್, ಸಂಘಟನಾ ಕಾರ್ಯದರ್ಶಿ ಗುಮ್ಮನಹಳ್ಳಿ ಮಂಜುನಾಥ್, ಮುಖಂಡರಾದ ಜೆ.ಸಿ.ರಂಗಧಾಮಯ್ಯ, ಎಸ್.ಆರ್.ರಂಗನಾಥ್, ಕಲ್ಲುಕೋಟೆ ಲಿಂಗರಾಜು, ನರಸಿಂಹಮೂರ್ತಿ ಕಲ್ಲುಕೋಟೆ, ಶಿವಾನಂದ್, ಶಿವಣ್ಣ, ಶ್ಯಾಸಮರು ಮೂರ್ತಿ, ಸಕ್ಕರ ನಾಗರಾಜು, ಮುಖಂಡರಾದ ಕೆಪಿ ಶ್ರೀನಿವಾಸ್, ಮಲ್ಲಿಕಾಪುರ ಚನ್ನಪ್ಪ, ಮದ್ದಕ್ಕನಹಳ್ಳಿ ಮಹಾಲಿಂಗಪ್ಪ, ಜಯರಾಮಕೃಷ್ಣ, ದ್ವಾರನಕುಂಟೆ ಲಕ್ಷ್ಮಣ್, ಹನುಮಂತರಾಯಪ್ಪ ಸೇರಿದಂತೆ ಹಲವರು ಹಾಜರಿದ್ದರು.





