ಮುತ್ತುಗದ ಹೂವನ್ನು ನೋಡಿ ಮೆಚ್ಚುವುದರ ಜೊತೆಗೆ, ಅದರ ಎಲೆಯನ್ನು ಮರೆಯದೆ ಉಳಿಸಿಕೊಳ್ಳಬೇಕು. ಪ್ಲಾಸ್ಟಿಕ್‌ಗೆ ಸೋತರೂ ಸಂಸ್ಕೃತಿಗೆ ಸೋಲದಂತೆ ನೋಡಿಕೊಳ್ಳೋಣ. ಮುತ್ತುಗ ನಮ್ಮ ಪೂರ್ವಜರ ಜ್ಞಾನ, ಪ್ರಕೃತಿಯೊಂದಿಗಿನ ಬಾಂಧವ್ಯ ಮತ್ತು ಸುಸ್ಥಿರ ಬದುಕಿನ ಸಂಕೇತ. ಅದನ್ನು ಕೇವಲ ಕಣ್ಣಿಗೆ ತುಂಬಿಕೊಳ್ಳದೆ, ಮನಸ್ಸಿನಲ್ಲಿ ಉಳಿಸಿಕೊಂಡು, ಮುಂದಿನ ಪೀಳಿಗೆಗೆ ತಲುಪಿಸೋಣ.
ಎಲೆ ಉದುರುವ ಮತ್ತು ಅರೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಮುತ್ತುಗ ಮರಗಳು ಸಹಜವಾಗಿ ಫೆಬ್ರವರಿಯಿಂದ ಮಾರ್ಚ್ ಮಾಹೆಯವರೆಗೂ ಹೂ ಬಿಟ್ಟು ಕಾಳಿಚ್ಚಿನಂತೆ ಕಂಗೊಳಿಸುತ್ತಿರುತ್ತವೆ. ಫೋಮ್ ಆಫ್ ದಿ ಫಾರೆಸ್ಟ್ ಎಂದು ಕರೆಸಿಕೊಳ್ಳುವ ಮುತ್ತುಗ ಒಂದು ಕಾಲದಲ್ಲಿ ಗ್ರಾಮೀಣ ಜನರ ಜೀವನಾಧಾರವಾಗಿತ್ತು. ಈಗ ಪ್ಲಾಸ್ಟಿಕ್ ಅಯೋಮಯದಿಂದಾಗಿ ಅವಗಣೆನೆಗೆ ಒಳಗಾಗಿದೆ.
ಬಟಿಯಾ ಮನೋಸರ್ಮ ಇದರ ಸಸ್ಯಶಾಸ್ತ್ರೀಯ ಹೆಸರು. ಫ್ಯಾಬೇಸಿ ಫ್ಯಾಮಿಲಿಗೆ ಸೇರಿದ ಈ ಮರವನ್ನು ಸಂಸ್ಕೃತದಲ್ಲಿ ರಕ್ತ ಪುಷ್ಪಕ ಎಂದು ಕರೆಯುತ್ತಾರೆ. ಸಂಕ್ರಾಂತಿ ಸಮಯಕ್ಕಾಗಲೇ ಹೂ ಬಿಟ್ಟು ತನ್ನ ರಮ್ಯತೆಯನ್ನು ಚೆಲ್ಲುತ್ತಿರುತ್ತದೆ. ಕರ್ನಾಟಕ, ಆಂಧ್ರ ಹಾಗೂ ವಿವಿಧ ಕಡೆಗಳಲ್ಲಿ ಶಿವನ ಪೂಜೆಯಲ್ಲಿ ಈ ಹೂವನ್ನು ಬಳಸಲಾಗುತ್ತದೆ. ಯಜ್ಞಯಾಗಾದಿಗಳಲ್ಲಿ ಮರದ ಕಡ್ಡಿಯನ್ನು ಬಳಸುವುದರಿಂದ ಇದನ್ನು ಬ್ರಹ್ಮ ವೃಕ್ಷ ಎಂದೂ ಕರೆಯುವುದುಂಟು.
ಐದಾರು ವರ್ಷಗಳ ಹಿಂದಿನವರೆಗೂ ಚಾಲ್ತಿಯಲ್ಲಿದ್ದ ಮುತ್ತುಗದ ತಟ್ಟೆ ಬಳಕೆ ಇಂದು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮದುವೆ, ಹಬ್ಬ ಹರಿದಿನಗಳಲ್ಲಿ, ದೇವರ ಉತ್ಸವಗಳಲ್ಲಿ ನಡೆಯುತ್ತಿದ್ದ ಪಂಕ್ತಿ ಭೋಜನದಲ್ಲಿ ಈ ಎಲೆಯ ಪಾತ್ರ ಮಹತ್ತರ. ತೆಳ್ಳಗಿನ ಕೀರು, ಅನ್ನದ ಗುಂಡಿಯ ಮೇಲೆ ಸುರಿವ ಕಾಳಿನ ಸಾಂಬಾರ್ ಹರಿದು ಹೋಗದಂತೆ ಕೈ ಅಡ್ಡವಿಟ್ಟು ಎಲೆಯ ಮಧ್ಯಭಾಗಕ್ಕೆ ಎಳೆದೆತ್ತಿ, ಸೊರ್…. ಎಂದು ಸವಿಯುತ್ತಿದ್ದದ್ದೇ ಚಂದ, ಆನಂದ. ಆ ಪದ್ದತಿಯೆಲ್ಲ ಈಗ ಕಣ್ಮರೆಯಾಗಿದೆ. ಆ ಯಾವುದೇ ಸಂಭ್ರಮಗಳು ಇಂದು ಪರಿಸರಕ್ಕೆ ಹತ್ತಿರವಾಗಿ ಉಳಿದಿಲ್ಲ ಮತ್ತು ಲಕ್ಷುರಿಯಾಗಿ ಪರಿವರ್ತನೆಯಾಗಿದೆ. ಪ್ಲಾಸ್ಟಿಕ್ ಕವರ್ ಲೇಪಿತ ಬಣ್ಣ ಬಣ್ಣದ ತಟ್ಟೆಗಳು ಬಳಕೆಯಾಗುತ್ತಿದ್ದು ಅವುಗಳು ಆಳಿಯುವುದೂ ಇಲ್ಲ, ಕೊಳೆಯುವುದೂ ಇಲ್ಲ, ಇತ್ತ ಗ್ರಾಮೀಣ ಜನರ ಸ್ವಾವಲಂಬಿ ಬದುಕಿಗೂ ಹೊಡೆತ ನೀಡಿವೆಯಷ್ಟೆ.
ತಟ್ಟೆ ತಯಾರಿಕಾ ಕ್ರಮ: ಆಂಗ್ಲ ಅಗಲದ ಹಸಿ ಎಲೆಗಳನ್ನು ಸಂಗ್ರಹಿಸಿ ತೊಟ್ಟು ಇರುವ ಭಾಗದಲ್ಲಿ ರಂದ್ರ ಕೊರೆದು, ದಾರದಿಂದ ಸರದಂತೆ ಪೋಣಿಸಲಾಗುತ್ತದೆ. ಒಂದು ವಾರ ಕಳೆದ ನಂತರ ಒಣಗಿದ ಎಲೆಗಳನ್ನು ನೀರಿನಲ್ಲಿ ನೆನೆಸಿ ಚಪ್ಪಡಿ ಕಲ್ಲಿನಡಿಯಿಟ್ಟು ಸಮ ಆಕೃತಿಗೆ ತರಲಾಗುತ್ತದೆ. ಎಲೆಯ ತೊಟ್ಟುಗಳನ್ನು ಕತ್ತರಿಸಿ, ಸಿಗಿದ ಅಂಚಿಕಡ್ಡಿ ಅಥವಾ ಜೋಳದ ಸಿಪ್ಪೆಯ ಸಿಬುರನ್ನು ಬಳಸಿಕೊಂಡು ಎಲೆಗಳನ್ನು ಎಣೆಯಲಾಗುತ್ತದೆ. ಅವುಗಳೆಲ್ಲವನ್ನು ಪೆಂಡಿ ಕಟ್ಟಿ ಊಟದ ವೇಳೆಯಲ್ಲಿ ತೊಳೆದು ಉಪಯೋಗಿಸಲಾಗುತ್ತದೆ ಎಂದು ಎಲೆ ಅಚ್ಚುವ ಸಾವಿತ್ರಮ್ಮ ಮಾಹಿತಿ ನೀಡಿದರು.
ಔಷಧೀಯ ಗುಣ: 10 ರಿಂದ 15 ಮೀಟರ್ ಎತ್ತರ ಬೆಳೆಯುವ ಮುತ್ತುಗ ಮರ ಮೂರು ಎಲೆಗಳುಳ್ಳ ಗೊಂಚಲುಗಳನ್ನು ಹೊಂದಿರುತ್ತದೆ. ಹೂವು ವಾಸನೆ ರಹಿತವಾಗಿದ್ದರೂ ಕೋಳಿ ಜುಟ್ಟಿನ ಆಕೃತಿ ಹೊಂದುವ ಮೂಲಕ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿದೆ. ಇದರ ಟೊಂಗೆಯ ರಸವನ್ನು ಬಟ್ಟೆಗಳಿಗೆ ಬಣ್ಣವಾಗಿ ಬಳಸಲಾಗುತ್ತದೆ. ಕೆಲವು ಕಡೆಗಳಲ್ಲಿ ಚಿಗುರೆಲೆಗಳನ್ನು ತಂಬುಳಿಗೆ ಬಳಸಲಾಗುತ್ತದೆ ಎನ್ನಲಾಗಿದೆ. ಬಾಯಿ ಅಲ್ಸರ್, ಚರ್ಮರೋಗ, ಕಾಮಾಲೆ, ಹೊಟ್ಟೆನೋವಿಗೆ ಔಷಧಿಯಾಗಿಯೂ ಇದನ್ನು ಆಯರ್ವೇದದಲ್ಲಿ ಬಳಸುವುದೂ ಉಂಟು.
ಮರದ ರಸವು ರುಚಿಯಲ್ಲಿ ಒಗರು, ಖಾರ, ಕಹಿಯಿಂದ ಕೂಡಿದ್ದು, ಕೃಷಿಯಲ್ಲಿ ಕೀಟ ನಾಶಕವಾಗಿ ಪರಿಣಾಮಕಾರಿ ಕೆಲಸ ಮಾಡಲಿದೆ. ಮುರಿದಿರುವ ಮೂಳೆ ಕೂಡಿಸಲು, ಪಟ್ಟುಹಾಕುವ ಪದ್ದತಿಗೆ ಹೆಸರುವಾಸಿಯಾಗಿದ್ದು, ಕಣ್ಣಿನ ರೋಗಗಳಿಗೆ ವಿಶೇಷ ಗುಣಕಾರಿ. ಕೆಮ್ಮು, ಬೆವರನ್ನು ದೂರ ಮಾಡುವ ಮತ್ತು ರಕ್ತ ಶುದ್ದಿಗೆ ದಿವ್ಯ ಔಷಧ ಎಂದು ಭಾವಿಸಲಾಗಿದೆ. ಆದ್ದರಿಂದಲೇ ಇದರ ಎಲೆಗಳಲ್ಲಿ ಊಟ ಮಾಡುವ ಪದ್ಧತಿ ರೂಡಿಯಲ್ಲಿದೆ. ಮರದ ಉತ್ಪನ್ನಗಳನ್ನು ತಿಳುವಳಿಕೆಯಿಲ್ಲದೆ ಸೇವನೆಗೆ ಬಳಸುವುದು ಹೆಚ್ಚು ಅಪಾಯಕಾರಿಯಾಗಿಯೂ ಇರಬಹುದು.
ಒಕ್ಕಣೆಯಲ್ಲಿ ಪಾತ್ರ: ರೈತರು ಧಾನ್ಯಗಳ ರಾಶಿ ಪೂಜೆಯಲ್ಲಿ ಈ ಹೂವುಗಳನ್ನು ಬಳಸಿಕೊಳ್ಳುತ್ತಾರೆ. ಕೃಷಿ ಕಾರ್ಯಗಳು ಮುಗಿದ ನಂತರ ಧಾನ್ಯಗಳ ಒಕ್ಕಣೆಗಾಗಿ ಕಣ ಮಾಡಲಾಗುತ್ತದೆ. ಇದಕ್ಕೆ ಪೂರಕವೆಂಬಂತೆ ಅಂಚಿಕಡ್ಡಿಯೂ ಇದೇ ಸಂದರ್ಭದಲ್ಲಿ ಕೊಯ್ಲಿಗೆ ಆಣಿಯಿರುವುದರಿಂದ ಕಣದಲ್ಲಿ ಧಾನ್ಯ ಮತ್ತು ಗುನಿ ಬೇರ್ಪಡಿಸಲು ಅಂಚಿಕಡ್ಡಿ ಬರ್ಲು ಮುಖ್ಯ ಪಾತ್ರ ವಹಿಸುತ್ತದೆ ಮತ್ತು ಎಲೆಗಳನ್ನು ಜೋಡಿಸಿ ತಟ್ಟೆ ಎಣೆಯಲೂ ಉಪಯುಕ್ತವಾಗಿದೆ.
ಕೆ ಪಿ ಪೂರ್ಣಚಂದ್ರ ತೇಜಸ್ವಿ ಬರೆದಿರುವ ಜುಗಾರಿ ಕ್ರಾಸ್ ಕಾದಂಬರಿಯಲ್ಲಿ ಬಿದಿರಿನ ನಾಶದಿಂದಾಗಿ ಅವಸಾನ ಹೊಂದುವ ಮೇದರಹಳ್ಳಿಯನ್ನು ಪ್ರಸ್ತುತ ಮುತ್ತುಗದ ಉದ್ಯಮ ನೆನಪಿಸುತ್ತಿದೆ. ಆದರೆ, ಪ್ಲಾಸ್ಟಿಕ್ ಪರ್ಯಾಯ ರೂಪವಾಗಿ ಅಡಿಕೆಪಟ್ಟೆ, ಬಾಳೆ ಎಲೆ ಉದ್ಯಮ ಬೆಳೆಯುತ್ತಿರುವುದು ಆಶಾದಾಯಕ.
ಪರಿಸರ ಪ್ರಿಯರ ಕಣ್ಮನ ತಣಿವು :
ಮುತ್ತುಗದ ಹೂವೂ.. ಮತ್ತಾ ಬರಿಸೀ.. ಮೆತ್ತಗೆ ಮೆತ್ ಮೆತ್ತಗೆ ಕರೆದಾವಾ..ಆ..ಆ.. ಎನ್ನುವ ಹಾಡನ್ನು ನಾವು ಕೇಳಿಯೇ ಇರುತ್ತೇವೆ. ಇನ್ನೇನು ಬೇಸಿಗೆ ಆಗಮನ ಸನಿಹದಲ್ಲೇ ಇದೆ. ಅಲ್ಲಿಯವರೆಗೆ ಮಾರ್ಚ್‌ವರೆಗೂ ತಂಡಿ ವಾತಾವರಣ ಮುಂದುವರೆಯಲಿದೆ. ಬೆಳೆಗಳು ಕಟಾವಾಗಿ ಹೊಲ ಮಾಳಗಳು ಬೀಳು ಬಿದ್ದಿರುವ ವೇಳೆಯೇ ಮುತ್ತುಗದ ಹೂಗಳು ಪರಿಸರ ಪ್ರಿಯರ ಕಣ್ಮನಗಳನ್ನು ತಣಿಸಿ ತಮ್ಮತ್ತ ಸೆಳೆಯುವುದಲ್ಲದೆ ಪಕೃತಿಯ ಸೊಬಗನ್ನು ಮತ್ತಷ್ಟು, ಮಗದಷ್ಟು ಇಮ್ಮಡಿಗೊಳಿಸಿವೆ. ನೇರಳೆ ಬಣ್ಣದ ಸೂರಕ್ಕಿ ಮತ್ತು ಅಳಿಲುಗಳಿಗೆ ಆಹಾರವಾಗಿ ಅನುಕೂಲವನ್ನೂ ಒದಗಿಸಿದೆ. ಇದರಿಂದ ಪರಾಗ ಕ್ರಿಯೆಗೆ ಒಳಪಟ್ಟು ಸಂತಾನ ಸಮೃದ್ಧಿ ಹೊಂದುತ್ತದೆ. ಮರದಲ್ಲಿ ಬಿಡುವ ಹೂವು, ಬೀಜಗಳನ್ನು ಆಧರಿಸಿ ಮುಂದಿನ ವರ್ಷದ ಮಳೆ ಮತ್ತು ಬೆಳೆಯನ್ನು ಜಾನಪದರು ಅಂದಾಜು ಮಾಡುವ ವಾಡಿಕೆಯನ್ನು ರೂಢಿಸಿಕೊಂಡಿದ್ದಾರೆ.
ಉಪ ಕಸುಬು ಕಣ್ಮರೆ : ಬೇಸಿಗೆಯಲ್ಲಿ ಶುರುವಾಗುವ ಹಬ್ಬಗಳಲ್ಲಿ ಮಾಂಸಹಾರದ ಊಟವನ್ನು ಸವಿಯಲು ಮತ್ತುಗದ ಎಲೆಯ ತಟ್ಟೆಯನ್ನು ಬಳಸಿಕೊಳ್ಳಲಾಗುತ್ತದೆ. ಆಹಾರ ಜೀರ್ಣಕ್ರಿಯೆಗೆ ಸಹಕಾರಿ ಎಂಬ ನಂಬಿಕೆಯೇ ಇದರ ವಿಶೇಷತೆ. ಬೇಸಿಗೆಯ ವೆರೆಗೆ ಈ ಹೂವಿನ ಕಾಲ ಮುಂದುವರೆಯಲಿದ್ದು, ಇದರ ಸ್ವರೂಪವೂ ಬೆಂಕಿಯಂತಿರುವುದರಿಂದ ಮುಂಬರುವ ಬೇಸಿಗೆಯ ಕಾಳಿಚ್ಚಿನ ಸಂಕೇತವಾಗಿ ಅಪಾಯದ ಸಂಭವನೀಯತೆಯನ್ನು ತೋರುತ್ತದೆ ಎಂದು ಭಾವಿಸಬಹುದು. ಕಾಡು ನಾಶವಾಗಿ, ಯುವಜನರೂ ನಗರ ಮುಖಿಗಳಾಗಿರುವುದರಿಂದ ಹಳ್ಳಿಗಳು ವೃದ್ಧಾಶ್ರಮಗಳಾಗಿ, ಮುತ್ತುಗದ ಎಲೆ ಅಚ್ಚು ಕಟ್ಟುವವರು ಕಣರೆಯಾಗಿದ್ದಾರೆ. ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಮುತ್ತುಗದ ಎಲೆ ಸಂಗ್ರಹಿಸುವುದು ಒಂದು ಉಪ ಕಸುಬಾಗಿ ಬೆಳೆದುಬಂದಿತ್ತು. ಆದರೆ ಈಗ ಈ ಕಸುಬು ಕಣ್ಮರೆಯಾಗುತ್ತಿದೆ” ಎಂದು ಪರಿಸರವಾದಿ ಮುರಳೀಧರ್ ಗುಂಗರಮಳೆ ಮಾಹಿತಿ ನೀಡಿದರು.
ಗಣೇಗೌರವ ಮತ್ತು ಶಿವೋತ್ಸವದಲ್ಲಿ ಮುತ್ತುಗ
ಶಿರಾ ಭಾಗದಲ್ಲಿ ನಡೆಯುವ ಜುಂಜಪ್ಪನ ಗಣೇಗೌರವ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಶಿವರಾತ್ರಿ ಹಬ್ಬದಂದು ನಡೆಯುವ ಶಿವೋತ್ಸವ ಆಚರಣೆಯಲ್ಲಿ ಮುತ್ತುಗದ ಹೂವು ಬಳಸುವುದು ಸಂಪ್ರದಾಯವಾಗಿ ಬೆಳೆದುಬಂದಿದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ವಾಣಿಜ್ಯೀಕರಣಗೊಳ್ಳದ ಹೂವುಗಳು ಅತ್ಯಂತ ಶ್ರೇಷ್ಠ ಎಂಬ ಹಿನ್ನೆಲೆಯಲ್ಲಿ ಪ್ರಕೃತಿಯ ಒಡನಾಡಿಯಾಗಿದ್ದ ಜುಂಜಪ್ಪನ ಮುಡಿಗೇರಿಸುತ್ತಾರೆ. ಕಾಡಿನಲ್ಲಿ ದೊರಕುವ ಮುತ್ತುಗ ಮತ್ತು ತಂಗಡಿ ಹೂಗಳೂ ಜುಂಜಪ್ಪನಿಗೆ ಪ್ರಿಯ ಎಂದು ನಂಬಲಾಗಿದೆ.
ಇದನ್ನೂ ಓದಿದ್ದೀರಾ? ದಾವಣಗೆರೆ ಉಪಚುನಾವಣೆ: ಮುಸ್ಲಿಂ ಸಮುದಾಯಕ್ಕೆ ಸಿಗುವುದೇ ರಾಜಕೀಯ, ಸಾಮಾಜಿಕ ನ್ಯಾಯ?
ನಾವು ಇನ್ನೂ ಮುತ್ತುಗದ ಹೂವನ್ನು ನೋಡಿ ಮೆಚ್ಚುವುದರ ಜೊತೆಗೆ, ಅದರ ಎಲೆಯನ್ನು ಮರೆಯದೆ ಉಳಿಸಿಕೊಳ್ಳಬೇಕು. ಪ್ಲಾಸ್ಟಿಕ್‌ಗೆ ಸೋತರೂ ಸಂಸ್ಕೃತಿಗೆ ಸೋಲದಂತೆ ನೋಡಿಕೊಳ್ಳೋಣ. ಮುತ್ತುಗ ನಮ್ಮ ಪೂರ್ವಜರ ಜ್ಞಾನ, ಪ್ರಕೃತಿಯೊಂದಿಗಿನ ಬಾಂಧವ್ಯ ಮತ್ತು ಸುಸ್ಥಿರ ಬದುಕಿನ ಸಂಕೇತ. ಅದನ್ನು ಕೇವಲ ಕಣ್ಣಿಗೆ ತುಂಬಿಕೊಳ್ಳದೆ, ಮನಸ್ಸಿನಲ್ಲಿ ಉಳಿಸಿಕೊಂಡು, ಮುಂದಿನ ಪೀಳಿಗೆಗೆ ತಲುಪಿಸೋಣ.





