ವಿದ್ಯಾರ್ಥಿಗಳು ತಾವು ಭವಿಷ್ಯದಲ್ಲಿ ಏನು ಮಾಡಬೇಕು, ಏನಾಗಬೇಕು, ಯಾವ ಹುದ್ದೆಗೇರಬೇಕು ಎಂಬುದರ ಬಗ್ಗೆ ದೃಢ ನಿರ್ಧಾರ ಕೈಗೊಂಡು, ತಮ್ಮ ಗುರಿಯತ್ತ ಕಾರ್ಯ ಪ್ರವೃತ್ತರಾಗಬೇಕು. ಆಗ ಅವಕಾಶಗಳು ತಾನಾಗಿಯೇ ಸಿಗುತ್ತವೆ ಎಂದು ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ಬಿ.ಕೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಿಪಟೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ ಮಹಿಳಾ ಸಬಲೀಕರಣ ಕೋಶ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಶೈಕ್ಷಣಿಕವಾಗಿ ಸಬಲರಾಗುವುದರಿಂದ ಬಾಲ್ಯ ವಿವಾಹ, ಭ್ರೂಣ ಹತ್ಯೆ ಎಂಬ ಸಾಮಾಜಿಕ ಪಿಡುಗುಗಳ ಜೊತೆಗೆ ಬಡತನ ನಿರ್ಮೂಲನೆ ಮಾಡಬಹುದು.ಆದ್ದರಿಂದ ಪದವಿ ಮುಗಿಸಿದ ಕೂಡಲೇ ವಿದ್ಯಾರ್ಥಿಗಳು ಅದರಲ್ಲೂ ಮಹಿಳೆಯರು ಮದುವೆ, ಮಕ್ಕಳು ಅಂತ ಕುಟುಂಬಕ್ಕೆ ಮಾತ್ರ ಸೀಮಿತವಾಗದೇ, ಯುಪಿಎಸ್ಸಿ, ಕೆಪಿಎಸ್ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ, ಅಧಿಕಾರಿಗಳಾಗುವ ಕನಸು ಹೊಂದಿರಬೇಕು ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ಅಂಕಗಳಿಗಿಂತ ನಿಮ್ಮಲ್ಲಿನ ಕೌಶಲ್ಯಗಳು ಮುಖ್ಯವಾಗುತ್ತವೆ. ಆದ್ದರಿಂದ ನಿಮ್ಮ ಗುರಿಯೆಡೆಗೆ ತಲುಪಲು ಹೆಚ್ಚಿನ ಕೌಶಲ್ಯಗಳನ್ನು ಕಲಿಯಿರಿ, ಮಾರ್ಗದರ್ಶನಕ್ಕೆ ನಿಮ್ಮ ಶಿಕ್ಷಕ ವರ್ಗವನ್ನು ಬಳಸಿಕೊಳ್ಳಿ. ಒಟ್ಟಾರೆ ನಿಮ್ಮಿಷ್ಟದ ಕ್ಷೇತ್ರಗಳಲ್ಲಿ ಹೆಚ್ಚಿನ ಜ್ಞಾನ ಪಡೆಯುತ್ತಾ ಸಾಗಿರಿ, ಜೊತೆಗೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯಲ್ಲಿರುವವರು ಎಲ್ಲ ರೀತಿಯ ಪರೀಕ್ಷೆಗಳನ್ನು ಎದುರಿಸುತ್ತಾ ಬನ್ನಿ ಎಂದು ತಮ್ಮ ಸ್ಪರ್ಧಾತ್ಮಕ ದಿನಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಶಶಿಕುಮಾರ್. ಎಚ್. ಸಿ. ಮಾತನಾಡಿ, ವಿದ್ಯಾರ್ಥಿಗಳು ತಮಗಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಗುರಿಯತ್ತ ಸಾಗಬೇಕು. ಸಪ್ತಶ್ರೀ ಮೇಡಂ ಹೇಳಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ, ಉನ್ನತ ಹುದ್ದೆ ತಲುಪುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ. ಯೋಗೀಶ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ರೇಣುಕಾ.ಆರ್, ಐಕ್ಯೂಎಸಿ ಸಹ ಸಂಯೋಜಕ ಡಾ. ಸೈಯದ್ ಇಬ್ರಾಹಿಂ, ಕನ್ನಡ ವಿಭಾಗದ ಮುಖ್ಯಸ್ಥೆ ಸ್ಮಿತಾ, ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





