ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳು ಸೇರಿದಂತೆ ವಿದ್ಯುತ್ ಕಂಬಗಳಿಗೆ ಮುಳ್ಳನ ಬೇಲಿ, ಗಿಡ-ಬಳ್ಳಿಗಳು ಬೆಳೆದುಕೊಂಡಿದ್ದು, ಅವುಗಳನ್ನು ಅಧಿಕಾರಿಗಳು ತೆರವುಗೊಳಿಸಿಲ್ಲ ಎಂದು ಗ್ರಾಮಗಳ ಜನರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಎಸ್ ಕೊಡಗೀಹಳ್ಳಿ, ಜಿಹೊಸಹಳ್ಳಿ, ಹಿಂಡಿಸಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ತಂತಿಗೆ ಆವರಿಸಿಕೊಂಡಿರುವ ಬೇಲಿಗಳನ್ನು ತೆರವು ಮಾಡದ ಕಾರಣ ರೈತಾಪಿ ಜನರ ತೋಟದ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಿ.ಎಸ್ ಪುರ, ಗುಬ್ಬಿ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಿದ್ಯುತ್ ತಂತಿ ಕೆಳಗೆ ಮಕ್ಕಳು ಅಥವಾ ಜಾನುವಾರುಗಳು ತೆರಳಿ ಗಿಡಮರ ಸ್ಪರ್ಶಿಸಿದರೂ ಜೀವ ಹೋಗುವ ಆತಂಕವಿದೆ. ಕೂಡಲೇ ಕ್ರಮ ವಹಿಸಿದೇ ಇದ್ದರೆ ಹೋರಾಟದ ಮೂಲಕ ಸರ್ಕಾರದ ಗಮನಕ್ಕೆ ತರುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

“11 ಕೆವಿಜಿ ವ್ಯಾಟ್ ವಿದ್ಯುತ್ ಸಾಮರ್ಥ್ಯದ ತಂತಿಗೆ ಅಡ್ಡಲಾಗಿ ಇರಿಸಿರುವ ಪರಿಕರ ರಸ್ತೆಯ ಹೊರ ಚಾಚಿದೆ. ಇದು ತುಂಬಾ ಅಪಾಯಕಾರಿ. ರಸ್ತೆಯಲ್ಲಿ ನಿತ್ಯ ಸಂಚರಿಸುವ ಲಾರಿಗಳು, ಗೂಡ್ಸ್ ವಾಹನಗಳಿಗೆ ತಂತಿಯು ತಗುಲುವ ಸಮೀಪದಲ್ಲಿದೆ. ವಿದ್ಯುತ್ ಸ್ಪರ್ಷಿಸಿ ವಾಹನ ಸವಾರರು ಸಾವನ್ನಪ್ಪಿದರೆ, ಅದಕ್ಕೆ ಬೆಸ್ಕಾಂ ಅಧಿಕಾರಿಗಳು ನೇರ ಹೊಣೆಯಾಗುತ್ತಾರೆ” ಎಂದು ಸ್ಥಳೀಯ ಮುಖಂಡ ದಿವಾಕರ್ ಈದಿನ.ಕಾಮ್‌ಗೆ ತಿಳಿಸಿದ್ದಾರೆ.

“ಜಿ ಹೊಸಹಳ್ಳಿಯಲ್ಲಿ ರಸ್ತೆಯ ಬದಿಯಲ್ಲೇ ವಿದ್ಯುತ್ ಕಂಬವಿದೆ. ಆದರೆ, ವಿದ್ಯುತ್ ಕಂಬವೇ ಕಾಣದಂತಹ ಮಟ್ಟಕ್ಕೆ ಬೇಲಿಗಳು ಬೆಳೆದುಕೊಂಡಿವೆ. ಇದು ಗ್ರಾಮದ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಲಿದೆ. ಪಕ್ಕದಲ್ಲಿರುವ ಮನೆಯ ನಿವಾಸಿಗಳು ನಿತ್ಯ ಪ್ರಾಣ ಕೈಯಲ್ಲಿಡಿದು ಓಡಾಡುವ ದುಸ್ಥಿತಿ ಬಂದಿದೆ” ಎನ್ನುತ್ತಾರೆ ಹೊಸಹಳ್ಳಿ ಗ್ರಾಮದ ನಿವಾಸಿ ಅನುಸೂಯಮ್ಮ.
“ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಏರುಪೇರು ಸಮಸ್ಯೆ ಕಂಡು ಬರುತ್ತಿದೆ. ಬೇಲಿ ಬೆಳೆದು ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗುತ್ತಿವೆ. ಈ ಜೊತೆಗೆ ಮನೆಗಳಲ್ಲಿ ಗೃಹೋಪಯೋಗಿ ವಸ್ತುಗಳು ಸುಟ್ಟು ಹೋಗಿವೆ. ಹೀಗೆ ಲಕ್ಷಾಂತರ ರೂ.ಗಳ ವಸ್ತುಗಳು ಕಳೆದುಕೊಂಡ ರೈತಾಪಿ ವರ್ಗಕ್ಕೆ ಪಂಪ್ ಸೆಟ್ ಗಳು ಕರೆಂಟ್ ವ್ಯತ್ಯಯಕ್ಕೆ ಸಿಲುಕಿ ಪರದಾಡಿದ್ದಾರೆ” ಎಂದು ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯಕುಮಾರ್ ತಿಳಿಸಿದ್ದಾರೆ.




