ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯು ತುಮಕೂರು ಜಿಲ್ಲೆಯಲ್ಲಿ ಇಂದಿನಿಂದ ಆರಂಭವಾಗಿದ್ದು, ಮೊದಲ ದಿನದ ಪರೀಕ್ಷೆಯು ಯಾವುದೇ ಲೋಪ ದೋಷಗಳಿಲ್ಲದೆ ತುಮಕೂರು ಶೈಕ್ಷಣಿಕ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಯಿತು.
ಎಸ್ಸೆಸ್ಸೆಲ್ಸಿ ಪರೀಕ್ಷೆಯು ಏ. 2ರ ವರೆಗೆ ಜಿಲ್ಲೆಯ 131 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಜಿಲ್ಲೆಯ ತುಮಕೂರು ಶೈಕ್ಷಣಿಕ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಿಂದ ಒಟ್ಟು 37,130 ವಿದ್ಯಾರ್ಥಿಗಳು ಪರೀಕ್ಷೆಯನ್ನು ಸುಸೂತ್ರವಾಗಿ ಬರೆದಿದ್ದಾರೆ.
ತುಮಕೂರು (ದ) ಶೈಕ್ಷಣಿಕ ಜಿಲ್ಲೆಯ 82 ಪರೀಕ್ಷಾ ಕೇಂದ್ರಗಳಲ್ಲಿ 23,693 ವಿದ್ಯಾರ್ಥಿಗಳು, ಮಧುಗಿರಿ ಶೈಕ್ಷಣಿಕ ಜಿಲ್ಲೆಯ 49 ಪರೀಕ್ಷಾ ಕೇಂದ್ರಗಳಲ್ಲಿ 13,437 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಜಿಲ್ಲೆಯಲ್ಲಿ ತುಮಕೂರು (ದ) 82 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 49 ಸೇರಿ ಒಟ್ಟು 131 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಇಂದು ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳು ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳ ಮುಂದೆ ಜಮಾಯಿಸಿ ನೋಂದಣಿ ಸಂಖ್ಯೆ ಮತ್ತು ಕೊಠಡಿಗಳನ್ನು ಹುಡುಕಿಕೊಂಡು ಪರೀಕ್ಷೆ ಬರೆಯಲು ಉತ್ಸಾಹದಿಂದ ತೆರಳಿದ ದೃಶ್ಯಗಳು ಜಿಲ್ಲೆಯಾದ್ಯಂತ ಸಾಮಾನ್ಯವಾಗಿದ್ದವು.
ಪರೀಕ್ಷಾ ಕೇಂದ್ರಗಳಿಗೆ ಬಂದ ವಿದ್ಯಾರ್ಥಿಗಳನ್ನು ಶಾಲಾ ಸಿಬ್ಬಂದಿಗಳು ತಪಾಸಣೆ ನಡೆಸಿ ಪರೀಕ್ಷಾ ಕೊಠಡಿಗಳಿಗೆ ಹೋಗಲು ಅನುಮತಿ ನೀಡುತ್ತಿದ್ದ ದೃಶ್ಯಗಳು ಕಂಡು ಬಂತು.

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಳನ್ನು ವೀಕ್ಷಣೆ ಮಾಡಲು ವೆಬ್‌ಕಾಸ್ಟಿಂಗ್ ವ್ಯವಸ್ಥೆ ಸಹ ಮಾಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಡೆಸ್ಕ್, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆ ಹಾಗೂ ವಿದ್ಯುತ್ ಸೌಲಭ್ಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ಡಿಸಿ ಭೇಟಿ
ನಗರದ ಎಂಪ್ರೆಸ್ ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ, ಕಾಳಿದಾಸ ಶಾಲೆ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆಯಲ್ಲಿ 37130 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮೂರು ಬಾರಿ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕ, ಭಯಕ್ಕೆ ಒಳಗಾಗದೆ ನಿರಾಳವಾಗಿ ಪರೀಕ್ಷೆ ಬರೆಯಬೇಕು ಎಂದು ತಿಳಿಸಿದರು.
ಯಾವುದೇ ರೀತಿಯ ಅಕ್ರಮಗಳಾಗದಂತೆ ಸುಲಲಿತವಾಗಿ ಪರೀಕ್ಷೆ ನಡೆಯಬೇಕು ಹಾಗೂ ಯಾವುದೇ ಲೋಪದೋಷಗಳು ಉಂಟಾಗದಂತೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಜೆರಾಕ್ಸ್ ಸೆಂಟರ್, ಸೈಬರ್ ಸೆಂಟರ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಅವರು ಹೇಳಿದರು.
ಎಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೀವನದ ಕೊನೆ ಪರೀಕ್ಷೆ ಅಲ್ಲ, ಶಾಲೆಯಲ್ಲಿ ಕೇಳಿದ ಪಾಠ ಮತ್ತು ಓದಿರುವುದನ್ನು ನೆನಪಿನಲ್ಲಿಟ್ಟುಕೊಂಡು ಪರೀಕ್ಷೆಯನ್ನು ಉತ್ತಮವಾಗಿ ಬರೆಯಬೇಕು ಎಂದ ಅವರು, ಪರೀಕ್ಷೆ ಬರೆಯುತ್ತಿರುವ ಎಲ್ಲಾ ಮಕ್ಕಳಿಗೂ ಶುಭವಾಗಲಿ ಎಂದು ಹಾರೈಸಿದರು.





