ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ತುಮಕೂರು ಜಿಲ್ಲೆಗೆ ನಿರೀಕ್ಷೆಯಂತೆ ಕೊಡುಗೆ ಸಿಕ್ಕಿಲ್ಲ. ಬೆಂಗಳೂರಿನ ಉಪನಗರಿ ತುಮಕೂರು ಅಭಿವೃದ್ಧಿಗೆ ಹೊಸ ಯೋಜನೆಗಳ ಘೋಷಣೆ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನರಿಗೆ ನಿರಾಸೆಯಾಗಿದೆ.
ಹಳೆಯ ಯೋಜನೆಗಳಿಗೆ ಅನುದಾನ ನೀಡಿರುವುದನ್ನು ಬಿಟ್ಟರೆ, ಹೊಸ ಯೋಜನೆಗಳನ್ನು ಕೊಟ್ಟಿಲ್ಲ. ಗ್ರೆಟರ್ ತುಮಕೂರು ಪ್ರಸ್ತಾಪಕ್ಕೆ ಮನ್ನಣೆ ಸಿಕ್ಕಿಲ್ಲ. ಐಟಿ ಪಾರ್ಕ್ ನಿರ್ಮಾಣ ಸೇರಿದಂತೆ ಈ ಬಾರಿ ಬಜೆಟ್ ನಲ್ಲಿ ಜಿಲ್ಲೆಗೆ 500 ಕೋಟಿ ನೆರವು ಸಿಗುವ ವಿಶ್ವಾಸದಲ್ಲಿದ ಗೃಹ ಸಚಿವ ಪರಮೇಶ್ವರ್, ಜಿಲ್ಲೆಗೆ ಬೇಕಿರುವ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಬಜೆಟ್ ಮುನ್ನ ಪ್ರಸ್ತಾವನೆ ಸಲ್ಲಿಸಿದ್ದರು. ಈ ಯಾವ ಬೇಡಿಕೆಗಳನ್ನು ಪರಿಗಣಿಸಿದಂತೆ ಕಾಣುತ್ತಿಲ್ಲ.
ಜಿಲ್ಲೆಯಲ್ಲಿ ತೆಂಗು ಪಾರ್ಕ್, ಹುಣಸೆ ಹಾಗೂ ಹಲಸು ಅಭಿವೃದ್ಧಿ ಪಾರ್ಕ್, ಹುಣಸೆ ಹಣ್ಣು ಸಂಸ್ಕರಣೆ, ಮೌಲ್ಯವರ್ಧನೆಗೆ ನೆರವಾಗಲು ಶೀತಲೀಕರಣ ಘಟಕ ನಿರ್ಮಾಣದಂತಹ ಮಹತ್ವದ ಕೃಷಿ ಬೇಡಿಕೆಗಳಿಗೂ ಬಜೆಟ್‌ನಲ್ಲಿ ಒತ್ತು ಸಿಕ್ಕಿಲ್ಲ.
ಸಂಚಾರವನ್ನು ನಮ್ಮ ಮೆಟ್ರೊ ತುಮಕೂರು ವರೆಗೆ ವಿಸ್ತರಿಸುವ ಬಗ್ಗೆ ಪ್ರಸ್ತಾಪವೇ ಇಲ್ಲವಾಗಿದೆ. ಈ ಯೋಜನೆಗೆ ಡಿಪಿಆರ್, ಸಿದ್ಧವಾಗಿದ್ದು, ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಬಹುದು ಎಂದು ನಿರೀಕ್ಷಿಸಲಾಗಿತ್ತು. ಈಗ ಅದಕ್ಕೂ ಮುಖ್ಯಮಂತ್ರಿ ಸ್ಪಂದಿಸಿಲ್ಲ.
ತುಮಕೂರು ನಗರ ವೇಗವಾಗಿ ಪ್ರಗತಿ ಕಾಣುತ್ತಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಗೆ 14 ಗ್ರಾಮ ಪಂಚಾಯಿತಿಗಳ 54 ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಂಡು ಪಾಲಿಕೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಸಿಗುವ ನಿರೀಕ್ಷೆ ಹುಸಿಯಾಗಿದೆ.
ರಾಜ್ಯ ಬಜೆಟ್ ನಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು?
ತುಮಕೂರಿನ ಗುಬ್ಬಿವೀರಣ್ಣ ಕಲಾಕ್ಷೇತ್ರದ ನವೀಕರಣಕ್ಕೆ ₹3 ಕೋಟಿ ಅನುದಾನ. ಕೊರಟಗೆರೆ ತಾಲ್ಲೂಕು ವಡೆಯರಪುರ ಬಳಿ 1.7 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣ.
ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ₹3 ಕೋಟಿ ಅನುದಾನ. ತುಮಕೂರಿನಲ್ಲಿ 5 ಕೋಟಿ ವೆಚ್ಚದಲ್ಲಿ ಸೀಜಿಂಗ್ ಯಾರ್ಡ್ ನಿರ್ಮಾಣ. ತುಮಕೂರಿನಲ್ಲಿ ₹6 ಕೋಟಿಯಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ. ಕುಣಿಗಲ್, ತಿಪಟೂರು, ಮಧುಗಿರಿ, ಶಿರಾದಲ್ಲಿ ಶ್ರಮಿಕ ವಸತಿ ಶಾಲೆ ಆರಂಭ. ಚಿಕ್ಕನಾಯಕನಹಳ್ಳಿ ಕುಡಿಯುವ ನೀರಿನ ಯೋಜನೆ. ಯೊ ದೇವಸ್ಥಾನ ಹತ್ತಿರ ಚೆಕ್ ಡ್ಯಾಂ ನಿರ್ಮಾಣ. ಗುಬ್ಬಿ, ಶಿರಾ ತಾಲ್ಲೂಕಿನ 42 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ. ಗೂಳೂರು-ಹೆಬ್ಬೂರು ಕುಡಿಯುವ ನೀರಿನ ಯೋಜನೆ. ಶಿರಾ ತಾಲ್ಲೂಕಿನಲ್ಲಿ ಕೆರೆ ಏರಿ, ಕೋಡಿ ಅಭಿವೃದ್ಧಿ. ಯರಮಾದನಹಳ್ಳಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ.ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಚೆಕ್ ಡ್ಯಾಂ ದುರಸ್ತಿ ರಕ್ಷಣಾ ಕಾರ್ಯಕ್ಕೆ ಅನುದಾನ ಮೀಸಲಿಡಲಾಗಿದೆ.





