ಬೆಂಗಳೂರಿಗೆ ಉಪನಗರವಾಗಿ ಬೆಳೆಯುತ್ತಿರುವ ತುಮಕೂರಿಗೆ ಈ ಬಾರಿಯ ಬಜೆಟ್ ನಲ್ಲಿ ಹಲವು ಹೊಸ ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಯಿದೆ. ತುಮಕೂರು ಜಿಲ್ಲೆಯಲ್ಲಿ ಮುಖ್ಯವಾಗಿ ತೆಂಗು ಪಾರ್ಕ್, ಹುಣಸೆ ಅಭಿವೃದ್ಧಿ ಮಂಡಳಿ ಮಾಡಬೇಕು ಎಂಬುದು ರೈತರ ಒತ್ತಾಯವಾಗಿದೆ.
ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರ ಮಾರ್ಗದರ್ಶನದಲ್ಲಿ ತುಮಕೂರು ಜಿಲ್ಲಾಡಳಿತ ವಿವಿಧ ಇಲಾಖಾವಾರು ಆಗಬೇಕಾದ ಅಭಿವೃದ್ಧಿ ಯೋಜನೆ, ಕಾಮಗಾರಿಗಳನ್ನು ಪಟ್ಟಿ ಮಾಡಿ 13 ಪ್ರಮುಖ ಯೋಜನೆಗಳನ್ನೊಳಗೊಂಡ ಪ್ರಸ್ತಾವನೆಯನ್ನು ರೂಪಿಸಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ,
ಪ್ರಸ್ತಾವನೆಯಲ್ಲಿ ಮೆಟ್ರೋ ವಿಸ್ತರಣೆಯಿಂದ ಆಗುವ ಲಾಭ, ಫಲಿತಾಂಶದ ಬಗ್ಗೆ ಸಿಎಂ ಗಮನಸೆಳೆಯಲಾಗಿದ್ದು, ತುಮಕೂರು ಬೆಂಗಳೂರು ನಡುವಿನ ಸಂಚಾರ ದಟ್ಟಣೆ, ಅಪಘಾತ ನಿಯಂತ್ರಣ, ಕಾರ್ಮಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಹೋಗಿ ಬರಲು ಮೆಟ್ರೋ ವಿಸ್ತರಣೆ ಅಗತ್ಯವಿದೆ. ಈ ಕ್ರಮದಿಂದ ಬೆಂಗಳೂರು-ತುಮಕೂರು ಟ್ವಿನ್ ಸಿಟಿ(ಅವಳಿ ನಗರಗಳು) ಬೆಳವಣಿಗೆಗೆ ಭೂಮಿಕೆಯಾಗುವ ಜೊತೆಗೆ ಸುರಕ್ಷಿತ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಜಾರಿಗೆ ಬರಲಿದೆ ಹಾಗೂ ದೀರ್ಘಕಾಲಿನ ಆರ್ಥಿಕ ನಗರಾಭಿವೃದ್ಧಿ ಲಾಭವಾಗಲಿದೆ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಲಿದೆ. ಜಿಲ್ಲಾಡಳಿತದ ಈ ಪ್ರಸ್ತಾವನೆ ಉಸ್ತುವಾರಿ ಸಚಿವರು ಪದೇ ಪದೇ ಹೇಳುವ ತುಮಕೂರನ್ನು ಗ್ರೇಟರ್ ಬೆಂಗಳೂರು ಆಗಿಸುವ ಮಾತಿಗೆ ಪೂರಕವಾಗಿದೆ.
ಅಂತೆಯೇ ಜಿಲ್ಲಾಡಳಿತದ ಪ್ರಸ್ತಾವನೆಯಲ್ಲಿ ಪ್ರಮುಖವಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 40000 ಲಕ್ಷ(400 ಕೋಟಿ), ಹೃದ್ರೋಗ ಹಾಗೂ ಜೀರ್ಣಾಂಗ ಆಸ್ಪತ್ರೆಗೆ 20,000 ಲಕ್ಷ(200 ಕೋಟಿ), ಜಿಲ್ಲಾಡಳಿತ ಹೊಸ ಮಿನಿ ವಿಧಾನಸೌಧ ಸಂಕೀರ್ಣಕ್ಕೆ 8500 ಲಕ್ಷ(850 ಕೋಟಿ), ಕುಡಿಯುವ ನೀರು ಒಳಚರಂಡಿ ಯೋಜನೆಗಳಿಗೆ 22,527 ಲಕ್ಷ(225 ಕೋಟಿ), ತಿಪಟೂರಿನಲ್ಲಿ ತೆಂಗು ತಂತ್ರಜ್ಞಾನ ಪಾರ್ಕ್ ಸಂಶೋಧನಾ ಕೇಂದ್ರಕ್ಕೆ 15000 ಲಕ್ಷ (150 ಕೋಟಿ), ತುಮಕೂರು ಮಹಾನಗರಪಾಲಿಕೆ ನೀರು ರಸ್ತೆ ಯುಜಿಡಿ ರಾಜಕಾಲುವೆ ಅಭಿವೃದ್ಧಿಗೆ 60000 ಲಕ್ಷ(600 ಕೋಟಿ), ರಂಗಮಂದಿರ ಪುನರ್ ನಿರ್ಮಾಣ ಪ್ರಮುಖವಾಗಿ ಜಿಲ್ಲಾ ಕೇಂದ್ರದ ಡಾ. ಗುಬ್ಬಿ ವೀರಣ್ಣ ರಂಗಮಂದಿರ ಪುನರ್ ನಿರ್ಮಾಣ ಹಾಗೂ ತಾಲ್ಲೂಕು ಕೇಂದ್ರಗಳ ರಂಗಮಂದಿರ ಪುನರ್‌ಜೀವಕ್ಕಾಗಿ 5500 ಲಕ್ಷ (55 ಕೋಟಿ), ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ನಿರ್ಮಾಣ ನವೀಕರಣಕ್ಕೆ 11600 ಲಕ್ಷ (116 ಕೋಟಿ), ಆಯುಷ್ ಭವನ ಮತ್ತು ಹೈಟೆಕ್ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ 2000 ಲಕ್ಷ (200 ಕೋಟಿ), ಪ್ರವಾಸೋದ್ಯಮ ಅಭಿವೃದ್ಧಿ ಭಾಗವಾಗಿ ಸಿದ್ದರಬೆಟ್ಟ, ದೇವರಾಯನದುರ್ಗ, ಮಧುಗಿರಿ ಏಕಶಿಲಾ ಬೆಟ್ಟ ಸಂಬಂಧ 4100 ಲಕ್ಷ (410 ಕೋಟಿ), ತುಮಕೂರು ಜಿಲ್ಲೆಯಲ್ಲಿ ಐಟಿ/ಐಟಿಇಎಸ್ ಸಾಫೋರ್ ಪಾರ್ಕ್ ನಿರ್ಮಾಣಕ್ಕಾಗಿ 9975 ಲಕ್ಷ (99.75 ಕೋಟಿ), ಜಿಲ್ಲಾ ಕೇಂದ್ರದಲ್ಲಿ ಶಿಥಿಲವಾಗಿರುವ ಅಂಬೇಡ್ಕರ್ ಭವನ ಪುನರ್ ನಿರ್ಮಾಣ ಹಾಗೂ ಡಾ.ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕೆ 2000 ಲಕ್ಷ (200 ಕೋಟಿ) ಹಾಗೂ ತುಮಕೂರು ತಾಲ್ಲೂಕಿನ ಮರಳೂರು ಕೆರೆಯ ಅಭಿವೃದ್ಧಿ ಮತ್ತು ಸೌಂದರೀಕರಣಕ್ಕೆ 1500 ಲಕ್ಷ (150 ಕೋಟಿ) ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಆಡಳಿತ ಸೌಧ, ವಸತಿಗೃಹಕ್ಕೆ ಬೇಡಿಕೆ : ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಚಿಕ್ಕನಾಯಕನಹಳ್ಳಿ, ಗೂಳೂರು, ಕೋರಾ, ಬೆಳ್ಳಾವಿ,ಹುತ್ರಿದುರ್ಗ, ಕೊತ್ತಗೆರೆ, ಅಮೃತ್ತೂರು ಹೋಬಳಿಯಲ್ಲಿ ನಾಡಕಚೇರಿ ನೂತನ ಕಟ್ಟಡ ನಿರ್ಮಾಣ, ಎಡಿಸಿ, ಎಸಿ, ಜಿಲ್ಲೆಯ ವಿವಿಧೆಡೆಯ ತಹಸೀಲ್ದಾರ್ ಗಳಿಗೆ ವಸತಿ ಗೃಹ ನಿರ್ಮಾಣ, ತುರುವೇಕೆರೆ, ಪಾವಗಡ, ಗುಬ್ಬಿಯಲ್ಲಿ ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಒಟ್ಟು 110 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ಹೇಳಲಾಗಿದೆ.
ಹೊಸದಾಗಿ ಸೇರ್ಪಡೆಗೊಳ್ಳುವ 54 ಗ್ರಾಮಗಳ ಅಭಿವೃದ್ಧಿಗೂ ಅನುದಾನ ಕೋರಿಕೆ: ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಒಳಪಡುವ 54 ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಅಂದಾಜು 30000 ಲಕ್ಷಗಳು(300ಕೋಟಿ) ಆಗತ್ಯವೆಂದು ಪ್ರಸ್ತಾವನೆಯಲ್ಲಿ ಕೋರಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಶುದ್ದ ಕುಡಿಯುವ ನೀರು, ಚರಂಡಿ, ಯುಜಿಡಿ ರಸ್ತೆ, ಬಸ್ ನಿಲ್ದಾಣ ಘನತ್ಯಾಜ್ಯ ನಿರ್ವಹಣೆಗೆ ಒಟ್ಟು 49000 ಲಕ್ಷ ಅಗತ್ಯವೆಂದು ಸಿಎಂ ಅವರಲ್ಲಿ ಕೋರಲಾಗಿದೆ. ಇದೇ ರೀತಿ ಹತ್ತು ತಾಲ್ಲೂಕು ಕೇಂದ್ರಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಕಲ್ಪಿಸಲು ಕಾಮಗಾರಿಗಳ ಪಟ್ಟಿ ಮಾಡಿ ಅಗತ್ಯ ಅನುದಾನ ಬಿಡುಗಡೆಗೆ ಬಜೆಟ್ ಪ್ರಸ್ತಾವನೆಯಲ್ಲಿ ಕೋರಲಾಗಿದೆ.
ತುಮಕೂರು ಜಿಲ್ಲಾ ಕೇಂದ್ರದಲ್ಲಿ ಗುಬ್ಬಿ ವೀರಣ್ಣ ರಂಗಮಂದಿರ ಪುನರ್ ನಿರ್ಮಾಣ, ರಂಗಾಯಣ(ಮೈಸೂರು ಮಾದರಿ ) ಹಾಗೂ ಕಲಾಗ್ರಾಮ, ಡಾ.ಗುಬ್ಬಿ ವೀರಣ್ಣ ರಂಗಮಂದಿರ ಮರುನಿರ್ಮಾನ, ಕೊರಟಗೆರೆಯಲ್ಲಿ ಕನ್ನಡ ಭವನ, ತುರುವೇಕೆರೆಯಲ್ಲಿ ರಂಗಮಂದಿರ, ಕುಣಿಗಲ್ ಪಟ್ಟಣದಲ್ಲಿ ಕಲಾಭವನ, ಕೃಷಿ ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ ಸಿರಾ ತಾಲ್ಲೂಕು ಗೌಡಗೆರೆ ತಾವರೆಕೆರೆಯಲ್ಲಿ ಹಾಗೂ ಪಾವಗಡದಲ್ಲೂ ಹುಣಸೆ ಪಾರ್ಕ್ ಶೀಥಲೀಕರಣ ಘಟಕಕ್ಕೆ ಹಾಗೂ ತಿಪಟೂರಿನಲ್ಲಿ ತೆಂಗು ತಂತ್ರಜ್ಞಾನ ಪಾರ್ಕ್ ಸ್ಥಾಪನೆ, ಗುಬ್ಬಿ, ಕುಣಿಗಲ್‌ನಲ್ಲಿ ಆಡಿಕೆ ತೆಂಗು ಮೌಲ್ಯ ವರ್ಧನ ಘಟಕ, ತುಮಕೂರು ನಗರದ ತೋಟಗಾರಿಕಾ ಇಲಾಖಾ ಆವರಣದಲ್ಲಿ ತೋಟಗಾರಿಕ ಕಿಸಾನ್ ಮಾಲ್, ಮತ್ತಿಘಟ್ಟದಲ್ಲಿ ಗೋಡೌನ್ ನಿರ್ಮಾಣಕ್ಕೂ ಪ್ರಸ್ತಾವನೆಯಲ್ಲಿ ಅಗತ್ಯ ಅನುದಾನ ಕೋರಲಾಗಿದೆ.
ಇದೇ ರೀತಿ ಗ್ರಾಮೀಣಾಭಿವೃದ್ಧಿ, ರೇಷ್ಮೆ, ಮೀನುಗಾರಿಕೆ, ಪಶುಪಾಲನೆ ಇಲಾಖೆ ಸೇರಿ ಹಲವು ಇಲಾಖೆ ಕಾರ್ಯಕ್ರಮ ಯೋಜನೆಗಳ ಸಾಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆಯಲ್ಲಿ ಮನವಿ ಮಾಡಲಾಗಿದ್ದು, ಮಧುಗಿರಿ, ಸಿರಾ, ಪಾವಗಡ ಕೊರಟಗೆರೆ ಪಟ್ಟಣದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಎಬಿಸಿ ಘಟಕ ಸ್ಥಾಪನೆಗೆ ಪ್ರಸ್ತಾಪಿಸಲಾಗಿದೆ. ತಿಪಟೂರಿನಲ್ಲಿ ಟ್ರಾಮಾ ಕೇರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹತ್ತು ತಾಲ್ಲೂಕಿನಲ್ಲಿ ಧರ್ಮ ಛತ್ರ, ಹೀಗೆ ಇಲಾಖಾವರು ಹಲವು ಬೇಡಿಕೆಗಳನ್ನು ಬಜೆಟ್ ಮುಂದಿಟ್ಟಿದ್ದು, ತುಮಕೂರು ವಿವಿ ಜ್ಞಾನಸಿರಿ ಕ್ಯಾಂಪಸ್ ನಲ್ಲಿ ಆಕಾಡೆಮಿಕ್ ಬ್ಲಾಕ್ ನಿರ್ಮಾಣಕ್ಕೆ 6000 ಲಕ್ಷ (60 ಕೋಟಿ)ವಿವಿ ಕ್ಯಾಂಪಸ್‌ವರೆಗೆ ರಸ್ತೆ ಅಭಿವೃದ್ಧಿಗೆ 4000 ಲಕ್ಷ (400 ಕೋಟಿ) ಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ.
ಬಜೆಟ್ ಪ್ರಸ್ತಾವನೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಒತ್ತು ಕೊಡಲಾಗಿದ್ದು, ಕೊರಟಗೆರೆಯ ಚನ್ನರಾಯನದುರ್ಗ ಪ್ರವಾಸಿ ತಾಣದಲ್ಲಿ ಮೂಲ ಸೌಕರ್ಯ, ಯಾತ್ರಿ ನಿವಾಸ, ಸಿದ್ದಗಂಗಾ ಮಠದಲ್ಲಿ ಹೈಟೆಕ್ ಯೋಗ ಕೇಂದ್ರಕ್ಕೆ 5 ಕೋಟಿ ಅಗತ್ಯವೆಂದು ಹೇಳಲಾಗಿದೆ. ಇದೇ ರೀತಿ ಕೈದಾಳ, ಮಂದರಗಿರಿ ಜೈನ ಬಸದಿ ಪ್ರವಾಸಿತಾಣ, ಗುಬ್ಬಿ ಚನ್ನಬಸವೇಶ್ವರ ದೇವಾಲಯ, ಸುರಿಗೇನಹಳ್ಳಿ ಬೆಟ್ಟದ ರಂಗನಾಥಸ್ವಾಮಿ, ಹಾಗಲವಾಡಿ ಜುಂಜನಪ್ಪನಹಟ್ಟಿ ಪ್ರವಾಸಿ ತಾಣದಲ್ಲಿ ಮೂಲಸೌಕರ್ಯ ನಿರ್ಮಾಣಕ್ಕೆ ಅಗತ್ಯ ಅನುದಾನ ಕೋರಲಾಗಿದೆ. ಯಡಯೂರು-ಜಲದಿಗೆರೆ-ಹಟ್ಟಿ ಲಕ್ಕಮ್ಮ – ಹುಲಿಯೂರಮ್ಮ ದೇವಾಲಯ ಹಾಗೂ ಮಾರ್ಕೋನಹಳ್ಳಿ ಡ್ಯಾಂ ಅಭಿವೃದ್ಧಿಗೆ ಹೆರಿಟೇಜ್ ಟೂರಿಸಂ ಸರ್ಕ್ಯೂಟ್ ಘೋಷಿಸುವಂತೆ ಕೋರಲಾಗಿದೆ. ತಿಪಟೂರು ಅಮಾನಿಕೆರೆ, ತುರುವೇಕೆರೆ ಮಲ್ಲಘಟ್ಟ ಕೆರೆ ಪ್ರವಾಸಿತಾಣವಾಗಿ ಅಭಿವೃದ್ಧಿ, ಚಿನಾ.ಹಳ್ಳಿ ಪಂಕಜನಹಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಬಳಿ ಮೂಲಸೌಕರ್ಯ ನಿರ್ಮಾಣಕ್ಕೆ ಅಗತ್ಯ ಅನುದಾನ ಸೇರಿ ಒಟ್ಟು ಪ್ರವಾಸೋದ್ಯಮಕ್ಕೆ 2600 ಲಕ್ಷ (260 ಕೋಟಿ) ಅನುದಾನ ಕೋರಲಾಗಿದೆ.





